
ಹಾಸನ, ಜೂನ್ 11: ಇತ್ತೀಚಿಗೆ ಯುವಕ ಮತ್ತು ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇಂದು (ಜೂ.11) ಹಾಸನ (Hassan) ಮೂಲದ ಓರ್ವ ಯುವಕ ಬೆಂಗಳೂರಿನಲ್ಲಿ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ 19 ವರ್ಷದ ನಿಶಾಂತ್ ಗೌಡ ಮೃತ ದುರ್ದೈವಿ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನಿವಾಸಿಯಾಗಿರುವ ನಿಶಾಂತ್ ಗೌಡ ಡಿಪ್ಲೋಮಾ ಓದಿದ್ದರು. 15 ದಿನಗಳ ಹಿಂದೆ ಹಾಸನದಿಂದ ಬೆಂಗಳೂರಿಗೆ ಕೈಗಾರಿಕಾ ತರಬೇತಿಗೆಂದು ಬಂದಿದ್ದರು.
ಬೆಂಗಳೂರಿನಲ್ಲಿ ನಿಶಾಂತ್ ಗೌಡ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ಕಳೆದ ರಾತ್ರಿ ನಿಶಾಂತ್ ಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿ, ಮಲಗಿಕೊಂಡಿದ್ದಾರೆ. ಬೆಳಗ್ಗೆ ಎಷ್ಟೊತ್ತಾದರೂ ನಿಶಾಂತ್ ನಿದ್ದೆಯಿಂದ ಎದ್ದಿರಲಿಲ್ಲ. ಸ್ನೇಹಿತರು ಎಬ್ಬಿಸಲು ಮುಂದಾಗ ನಿಶಾಂತ್ ಮೃತಪಟ್ಟಿರುವುದು ಗೊತ್ತಾಗಿದೆ. ಈ ವಿಚಾರ ತಿಳಿದ ಜೆಪಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಇದನ್ನೂ ನೋಡಿ: ಬಾತ್‌ರೂಂನಲ್ಲೇ ಯುವತಿಗೆ ಹೃದಯಾಘಾತ, ನಿಂತಲ್ಲೇ ಕುಸಿದು ಬಿದ್ದು ಯುವಕ ಸಾವು
ಒಂದು ತಿಂಗಳ ಅಂತರದಲ್ಲಿ ಹಾಸನ ಜಿಲ್ಲೆ ಮೂಲದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೊಳೆನರಸೀಪುರ ಪಟ್ಟಣದ ಓರ್ವ ಯುವತಿ, ಅರಕಲಗೂಡು ತಾಲೂಕಿನ ಓರ್ವ ಯುವಕ, ಹಾಸನ ತಾಲೂಕಿನ ಓರ್ವ ಯುವತಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಹೊಳೆನರಸೀಪುರದ 20 ವರ್ಷದ ಯುವತಿ ಸಂದ್ಯ, ಮೇ 22 ರಂದು ಅರಕಲಗೂಡು ತಾಲ್ಲೂಕಿನ ಕೊಣನೂರು ಮೂಲದ 19 ವರ್ಷದ ಯುವಕ ಅಭಿಷೇಕ್ ಬೆಂಗಳೂರಿನಲ್ಲಿ ಮತ್ತು ಮೇ 28 ರಂದು ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ 20 ವರ್ಷದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಕವನ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲಿ 18 ರಿಂದ 20 ವಯಸ್ಸಿನ ಒಳಗಿನ ನಾಲ್ವರು ಯುವಕರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಶಾಕ್ ನೀಡಿದೆ.
Published On - 7:13 pm, Wed, 11 June 25