ಹಾಸನ: ಆರು ವರ್ಷದ ಕರುಳ ಬಳ್ಳಿಯನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ
ಹಾಸನದಲ್ಲಿ ತಾಯಿಯೊಬ್ಬರು ತನ್ನ ಮಗಳನ್ನು ಕೊಂದ ಘಟನೆ ಬೆಚ್ಚಿಬೀಳಿಸಿದೆ. ಗಂಡ-ಹೆಂಡತಿಯ ನಡುವಿನ ಕಲಹದಿಂದಾಗಿ ಈ ದುರಂತ ಸಂಭವಿಸಿದೆ. ತಾಯಿ ತನ್ನ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಮಗಳನ್ನು ಕೊಂದಳು ಎಂದು ಪತಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾಸನ, ಜೂನ್ 09: ಅದು ಇನ್ನೂ ಪ್ರಪಂಚ ಏನೆಂದು ಅರಿಯದ ಕಂದಮ್ಮ. ಹೆತ್ತವರ ನಡುವಿನ ಕಲಹದಿಂದ ಹೈರಾಣಾಗಿ ಅಪ್ಪನ ಆಸರೆಯಲ್ಲಿದ್ದ ಮಗುವನ್ನ ತಾಯಿ (Mother) ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಸಂಸಾರ ತಾಳ ತಪ್ಪಿ ಹೋಗಿತ್ತು. ಸಂಬಂಧಿಕರು ಮಾಡಿದ ಹತ್ತಾರು ರಾಜಿ ಸಂಧಾನಗಳು ಫಲ ನೀಡಿರಲಿಲ್ಲ. ಅಂತಿಮವಾಗಿ ತಿಂಗಳ ಹಿಂದೆ ಗಂಡನ ಮನೆಗೆ ಬಂದಿದ್ದ ಪತ್ನಿ ಮೂರು ದಿನದ ಹಿಂದೆ ಮಗಳನ್ನ (daughter) ಜೊತೆಯಲ್ಲಿ ಕರೆತಂದಿದ್ದು, ನಿನ್ನೆ ನಿರ್ದಯವಾಗಿ ಕೊಲೆ ಮಾಡಿದ್ದಾರೆ. ನೀರಿನಲ್ಲಿ ಮುಳುಗಿಸಿ ಕರುಳ ಬಳ್ಳಿಯ ಉಸಿರು ನಿಲ್ಲಿಸಿದ ತಾಯಿ ತಾನೂ ಆತ್ಮಹತ್ಯೆಯ ನಾಟಕ ಮಾಡಿ, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ. ಸದ್ಯ ಈ ಹೃದಯ ವಿದ್ರಾವಕ ಘಟನೆಗೆ ಜನರು ಬೆಚ್ಚಿಬಿದ್ದಿದ್ದಾರೆ.
ಮಗಳ ಕೊಂದ ತಾಯಿ ವಿರುದ್ದ ತಂದೆ ಆಕ್ರೋಶ
ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ಎಂತಹವರ ಹೃದವನ್ನು ಒಂದರೆಕ್ಷಣ ಬಡಿತ ನಿಲ್ಲಿಸಿ ಬಿಡುತ್ತೆ. ಗಂಡನ ಮೇಲಿನ ಸಿಟ್ಟೋ, ಇಲ್ಲಾ ಕೌಟುಂಬಿಕ ಕಹಲದ ಆಕ್ರೊಶವೋ? ತಾನೇ 9 ತಿಂಗಳು ಹೊತ್ತು ಹೆತ್ತ ಮಗುವನ್ನ ತಾಯಿಯೇ ನಿರ್ದಯವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಹಾಸನ ಮೂಲದ ಶ್ವೇತಾ(36) ಹಾಗೂ ಶಿವಮೊಗ್ಗ ಮೂಲದ ರಘು ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ರಘು ಚೆನ್ನಾಗಿ ದುಡಿಮೆ ಮಾಡುತ್ತಿದ್ದರು. ಮಡದಿಯನ್ನ ತನ್ನೊಟ್ಟಿಗೆ ಬೆಂಗಳೂರಿಗೆ ಕರೆದೊಯ್ದು ಚೆನ್ನಾಗಿಯೇ ನೋಡಿಕೊಂಡಿದ್ದರು. ಮುದ್ದಾದ ಮಗಳ (ಸಾನ್ವಿ) ಆಗಮನ ಸಂಸಾರದಲ್ಲಿ ಖುಷಿ ಹೆಚ್ಚಿಸುವ ಬದಲು ವಿರಸ ಮೂಡಿಸಿತ್ತು. ಗಂಡ-ಹೆಂಡತಿ ನಡುವೆ ಕಲಹ ಸೃಷ್ಟಿಸಿತ್ತು. ಏನೇ ರಾಜಿ ಸಂಧಾನ ಮಾಡಿದರು ಇಬ್ಬರ ನಡುವೆ ಸಂಸಾರ ಹಳಿ ತಪ್ಪಿ ಪತ್ನಿ, ಪತಿಯಿಂದ ಅಂತರ ಕಾಯ್ದುಕೊಂಡು ವಿಚ್ಛೇದನಕ್ಕಾಗಿ ಅರ್ಜಿ ಕೂಡ ಹಾಕಿದ್ದಾರಂತೆ.
ಪತಿ ಆರೋಪವೇನು?
ಕೆಲ ತಿಂಗಳ ಹಿಂದೆ ಕುಟುಂಬ ಸದಸ್ಯರು ಮತ್ತೆ ಮಾತುಕತೆ ಮಾಡಿ ಪತಿ ಜೊತೆಗೆ ಶ್ವೇತಾಳನ್ನ ಕಳಿಸಿದ್ದಾರೆ. ಆದರೆ ಜೂನ್ 5ರಂದು ರಾತ್ರಿ 8 ಗಂಟೆಗೆ ಮಗಳನ್ನ ಕರೆದುಕೊಂಡು ಮನೆಬಿಟ್ಟಾಕೆ ನಿನ್ನೆ ಬೆಳಿಗ್ಗೆ ತನ್ನ ತವರು ಮನೆ ಜಿನ್ನೇನಹಳ್ಳೀ ಕೊಪ್ಪಲಿನ ಜಮೀನಿನ ಬಳಿ ಇರುವ ನೀರಿನ ಕಟ್ಟೆಯೊಂದರಲ್ಲಿ ಮಗಳನ್ನ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೂಗಾಡಿದ ತಾಯಿಯನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ಮಗುವನ್ನ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದೆ. ಮಗಳನ್ನು ಕಳೆದುಕೊಂಡ ತಂದೆಯ ರೋಧನೆ ಮುಗಿಲು ಮುಟ್ಟಿದ್ದರೆ, ತನ್ನ ಪತ್ನಿ ಸರಿ ಇರ್ಲಿಲ್ಲ, ಅವಳ ಅಕ್ರಮ ಸಂಬಂಧಕ್ಕೆ ಮಗಳನ್ನ ಕೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ 11 ವರ್ಷಗಳಿಂದ ನೆಲೆಸಿದ್ದ ರಘು ಕುಟುಂಬ ತಮ್ಮ ಏರಿಯಾದಲ್ಲಿ ವಾಸವಾಗಿದ್ದ ಶ್ವೇತ ಸಂಬಂಧಿಕರ ಮನೆಗೆ ಬಂದಿದ್ದಾಗ ನೋಡಿ ಮದುವೆ ಪ್ರಸ್ತಾಪ ಮಾಡಿದ್ದರು. ಮನೆಯವರೆಲ್ಲಾ ಒಪ್ಪಿ ಏಳು ವರ್ಷಗಳ ಹಿಂದೆ ಮದುವೆಯೂ ಆಗಿತ್ತು. ಎರಡು ವರ್ಷ ಸುಂದರವಾಗಿದ್ದ ಸಂಸಾರದಲ್ಲಿ ಅದೇನಾಯ್ತೋ ಏನೋ, ಪತಿ ಹೇಳುವುದು ಮಾತ್ರ ಆಕೆಗೆ ಮತ್ತಿನ್ಯಾರದೋ ಜೊತೆ ಸಂಬಂಧ ಇತ್ತು, ಆಗಾಗ ಮನೆ ಬಿಟ್ಟು ಹೋಗ್ತಿದ್ದಳು. ಇದನ್ನ ಪ್ರಶ್ನೆ ಮಾಡಿದಾಗ ದೂರ ಆಗಿದ್ದಳು. ಡಿವೋರ್ಸ್ಗೆ ಕೇಸ್ ಹಾಕಿಕೊಂಡಿದ್ದಳು ಎಂದಿದ್ದಾರೆ.
ಸಂಬಂಧಿಕರ ಮಧ್ಯೆ ಹೊಡೆದಾಟ
ನಾನು ಕೂಲಿ ಮಾಡಿದರೂ ಮಗಳಿಗೆ ಏನೂ ಕಡಿಮೆ ಮಾಡಿರಲಿಲ್ಲ. ಒಳ್ಳೆಯ ಶಾಲೆಗೆ ಸೇರಿಸಿ ಅಮ್ಮನಿಲ್ಲದಿದ್ದರೂ ಚೆನ್ನಾಗಿ ನೋಡಿಕೊಳ್ತಿದ್ದೆ, ಈ ವರ್ಷ ಯುಕೆಜಿಗೆ ಹೋಗ್ತಿದ್ದ ಮಗಳು ಈಗ ಇಲ್ಲ. ಸದ್ಯ ಹಿರಿಸಾವೆ ಪೊಲೀಸ್ ಠಾಣೆ ಪೊಲೀಸರು ಪತಿ ದೂರು ಆಧರಿಸಿ ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಇತ್ತ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತ ಮಗು ಸಾನ್ವಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಗು ನೋಡಲು ಬಂದ ಶ್ವೇತ ಸಂಬಂಧಿಕರು ಹಾಗೂ ಮಗು ತಂದೆ ರಘು ನಡುವೆ ಮಾತಿಗೆ ಮಾತು ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಪತ್ನಿ ನಡತೆಗೆಟ್ಟವಳು, ಅವಳೇ ಮಗುವನ್ನು ಕೊಂದಿದ್ದು: ರಘು, ಮಗು ಕೊಂದ ಅರೋಪಿ ಶ್ವೇತಾ ಪತಿ
ಸಂಬಂಧಿಕರ ನಡುವಿನ ಜಗಳ ಬಿಡಿಸಲು ಪೊಲೀಸರು ಹೈರಾಣಾಗಿ ಹೋದರು. ಗಲಾಟೆ ವೇಳೆ ರಘು ಆಪ್ತರೊಬ್ಬರು ಮಹಿಳಾ ಪಿಎಸ್ಐರನ್ನೇ ತಳ್ಳಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಕಡೆಗೆ ಆಕಸ್ಮಿಕವಾಗಿ ನಡೆದ ಘಟನೆಗೆ ರಘು ಕಡೆಯವರು ಕ್ಷಮೆಯನ್ನು ಕೇಳಿದರು. ಶ್ವೇತರ ಕೃತ್ಯದ ಬಗ್ಗೆ ಅಚ್ಚರಿಗೊಂಡಿರುವ ಸಂಬಂಧಿಕರು ಆರಂಭದಿಂದಲೂ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ನಾವು ಯಾವತ್ತು ಅವರ ಮನೆಗೆ ಹೋಗುವುದಕ್ಕೆ ಅವರು ಅವಕಾಶ ನೀಡಿಲ್ಲ. ಈಗ ಅವಳೇ ತನ್ನ ಮಗುವನ್ನ ಸಾಯಿಸಿದ್ದಾಳೆ ಎಂದು ಹೇಳ್ತಿದ್ದಾರೆ. ಏನಾಯಿತು ಏನೋ ಗೊತ್ತಿಲ್ಲ ಎಂದು ಶ್ವೇತಾ ಸಹೋದರಿ ಮಂಜುಳಾ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ. ಪತಿ ಆರೋಪದ ಸತ್ಯ ಎಷ್ಟು, ಪತ್ನಿ ಕಡೆಯವರ ಮಾತಿನಲ್ಲಿ ನಿಜವೆಷ್ಟು, ಮಗು ಕೊಂದ ತಾಯಿ ಹೇಳ್ಳುತ್ತಿರುವುದರಲ್ಲಿ ನೈಜತೆ ಎಷ್ಟು ಎಂಬುವುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Mon, 9 June 25