AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassan DCC Bank: ಹೆಚ್​ಡಿ ರೇವಣ್ಣ ಆಪ್ತ ಅದ್ಯಕ್ಷರಾಗಿರುವ ಹಾಸನ ಡಿಸಿಸಿ ಬ್ಯಾಂಕ್​ ಮೇಲೆ ಐಟಿ ದಾಳಿ; ಕಾರಣವೇನು?

ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರ ಆಪ್ತ ಸೋಮನಹಳ್ಳಿ ನಾಗರಾಜ್ ಅದ್ಯಕ್ಷರಾಗಿರುವ ಹಾಸನದ ಡಿಸಿಸಿ ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.

Hassan DCC Bank: ಹೆಚ್​ಡಿ ರೇವಣ್ಣ ಆಪ್ತ ಅದ್ಯಕ್ಷರಾಗಿರುವ ಹಾಸನ ಡಿಸಿಸಿ ಬ್ಯಾಂಕ್​ ಮೇಲೆ ಐಟಿ ದಾಳಿ; ಕಾರಣವೇನು?
ಸಾಂದರ್ಭಿಕ ಚಿತ್ರ
Ganapathi Sharma
|

Updated on:Apr 01, 2023 | 1:12 PM

Share

ಹಾಸನ: ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಅವರ ಆಪ್ತ ಸೋಮನಹಳ್ಳಿ ನಾಗರಾಜ್ ಅದ್ಯಕ್ಷರಾಗಿರುವ ಹಾಸನದ ಡಿಸಿಸಿ ಬ್ಯಾಂಕ್ (Hassan DCC Bank) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ 34 ಶಾಖೆಗಳನ್ನು ಹೊಂದಿದ್ದು, ವಾರ್ಷಿಕ ಸುಮಾರು 1700 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಐಟಿ ಅಧಿಕಾರಿಗಳು ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಹಾಸನ ಡಿಸಿಸಿ ಬ್ಯಾಂಕ್ ಮೂರು ಲಕ್ಷಕ್ಕೂ ಅಧಿಕ ಖಾತೆದಾರರನ್ನು ಹೊಂದಿದೆ. ಒಟ್ಟು 13 ನಿರ್ದೇಶಕರನ್ನು ಹೊಂದಿರುವ ಬ್ಯಾಂಕ್​ ಮೇಲೆ ಜೆಡಿಎಸ್ ಹಿಡಿತವಿದೆ ಎನ್ನಲಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್ ಅಂದಾಜು 565 ಕೋಟಿ ರೂ. ಕೃಷಿಯೇತರ, 1000 ಕೋಟಿ ರೂಪಾಯಿಗೂ ಅಧಿಕ ಕೃಷಿ ಸಾಲ ವಿತರಣೆ ಮಾಡಿದೆ. ಅಂದಾಜು 1.70 ಲಕ್ಷ ರೈತರಿಗೆ ಕೃಷಿ ಕೃಷಿಯೇತರ ಸಾಲ ಮಂಜೂರು ಮಾಡಿದೆ.

ಇದನ್ನೂ ಓದಿ: Assembly Polls: ಹೆಚ್ ಡಿ ರೇವಣ್ಣರ ಮನೆಗೆ ಭೇಟಿ ನೀಡಿ ಹಾಸನ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅಚ್ಚರಿಯ ಭೇಟಿ!

ಶುಕ್ರವಾರ ರಾತ್ರಿಯೇ ಬ್ಯಾಂಕ್​ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶನಿವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಜೆಡಿಎಸ್​​ನಲ್ಲಿ ಮುಂದುವರಿದ ಹಾಸನ ಟಿಕೆಟ್​ ಗೊಂದಲ

ಈ ಮಧ್ಯೆ, ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ಗೊಂದಲ ಮುಂದುವರಿದಿದೆ. ಹಾಸನ ಟಿಕೆಟ್​ಗಾಗಿ ರೇವಣ್ಣ ಕೊನೆ ಹಂತದ ಕಸರತ್ತು ನಡೆಸುತ್ತಿದ್ದಾರೆ. ಹಾಸನ ಟಿಕೆಟ್ ರೇವಣ್ಣಗೆ ನೀಡುವಂತೆ ಹಾಸನ ಶಾಸಕರ ನಿಯೋಗ ಶುಕ್ರವಾರ ಸಂಜೆ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಹಾಸನ ಶಾಸಕರು ಮತ್ತು ಸ್ಥಳೀಯ ಮುಖಂಡರು ಇಂದು ದೇವೇಗೌಡರನ್ನು ಭೇಟಿ ಮನವಿ ಸಲ್ಲಿಸಲಿದ್ದಾರೆ.

ಬೆಳಗಾವಿ; ಕಾಂಗ್ರೆಸ್​ ಮುಖಂಡನ ಬ್ಯಾಂಕ್​ನಲ್ಲಿ ಐಟಿ ಅಧಿಕಾರಿಗಳ ಶೋಧ

ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿರುವ ಕಾಂಗ್ರೆಸ್​ ಮುಖಂಡ ವಿ.ಎಸ್.ಸಾಧುನವರ್​ ಒಡೆತನದ ಸೊಸೈಟಿ ಬ್ಯಾಂಕ್​ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ​ಕಿತ್ತೂರು ರಾಣಿ ಚೆನ್ನಮ್ಮ ಸೊಸೈಟಿಗೆ ದಾಳಿ ಮಾಡಿರುವ ಅಧಿಕಾರಿಗಳು ಲಾಕರ್​ನಲ್ಲಿ ಯಾರು ಚಿನ್ನ, ಹಣ ಇಟ್ಟಿದ್ದಾರೆಂಬ ಮಾಹಿತಿ ಸಂಗ್ರಹಿಸಿದ್ದಾರೆ. ಸಾಧುನವರ್ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ  ಸ್ಪರ್ಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sat, 1 April 23