ಹಾಸನದಲ್ಲಿ ದೋಸ್ತಿ ಜೆಡಿಎಸ್ ಮುನಿಸು ತಣಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅಖಾಡಕ್ಕೆ: ಅಗರ್ವಾಲ್ ಹೇಳಿದ್ದಿಷ್ಟು
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಜೆಡಿಎಸ್ಗೆ ಹಾಸನದಲ್ಲಿ ಬಿಜೆಪಿ ನಾಯಕರ ಭಿನ್ನಮತ ತಲೆನೋವಾಗಿ ಪರಿಣಮಿಸಿತ್ತು. ಇದೀಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಎಂಟ್ರಿಯಾಗಿದ್ದು, ಮುನಿಸು ಶಮನಗೊಳಿಸಲು ಮುಂದಾಗಿದ್ದಾರೆ. ಹಾಸನಕ್ಕೆ ಭೇಟಿ ನೀಡಿದ ಬಳಿಕ ಅವರಾಡಿದ ಮಾತುಗಳ ವಿವರ ಇಲ್ಲಿದೆ.
ಹಾಸನ, ಮಾರ್ಚ್ 26: ಹಾಸನದಲ್ಲಿ (Hassan) ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ (BJP JDA Alliance) ಉಂಟಾಗಿರುವ ಗೊಂದಲ ನಿವಾರಣೆಗೆ ಇದೀಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ಅಖಾಡಕ್ಕಿಳಿದಿದ್ದಾರೆ. ಹಾಸನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗೆ ಪ್ರೀತಂಗೌಡ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದರು. ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವುದು ತಪ್ಪು. ನಮ್ಮ ಕಾರ್ಯಕರ್ತರು ಪೂರ್ತಿ ಶಕ್ತಿಯೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯುತ್ತಾ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಈ ಯುದ್ಧದಲ್ಲಿ ಹೋರಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ಐದು ಲಕ್ಷ, ಬಿಜೆಪಿ ಐದು ಲಕ್ಷ ಮತಗಳು ಸೇರಿ ಹತ್ತು ಲಕ್ಷ ಮತಗಳು ಸಿಗುತ್ತವೆ ಎಂದು ಅಗರ್ವಾಲ್ ಭರವಸೆ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳುವ ಅಧಿಕಾರ ಇದೆ. ಆದರೆ, ಅಭ್ಯರ್ಥಿ ಘೋಷಣೆ ಆಗುವ ಮುಂಚೆ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಅಭ್ಯರ್ಥಿ ಘೋಷಣೆ ನಂತರ ಕಾರ್ಯಕರ್ತರು ಏನು ಮಾಡುತ್ತಾರೆ ಎಂಬುದನ್ನು ನೋಡಬೇಕು. ಬಿಜೆಪಿ ಕಾರ್ಯಕರ್ತರ ಭಾವನೆ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಯಾರು ಆಗುತ್ತಾರೆ ಅನ್ನೋದನ್ನು ಬಿಜೆಪಿ ತೀರ್ಮಾನಿಸುವುದಿಲ್ಲ. ಅದನ್ನು ಜೆಡಿಎಸ್ ತೀರ್ಮಾನಿಸುತ್ತದೆ. ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆಯೋ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಾರೆ ಎಂದು ಬಿಜೆಪಿ ಉಸ್ತುವಾರಿ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 28 ಕ್ಕೆ 28 ಸೀಟ್ ನಾವು ಗೆದ್ದಾಗಿದೆ. 25 ಸೀಟ್ ಬಿಜೆಪಿ ಹಾಗೂ 3 ಸೀಟ್ ಜೆಡಿಎಸ್ ಕೊಟ್ಟಿದ್ದೇವೆ. ಕಾಂಗ್ರೆಸ್‌ಗೆ ಯಾವುದೂ ಉಳಿದಿಲ್ಲ. ಕಾಂಗ್ರೆಸ್‌ನವರು ಒಂದೇ ಒಂದು ಸೀಟ್ ಗೆಲ್ಲಲ್ಲ. ನಾನು ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ತಿಂಗಳಿನಿಂದ ಪ್ರವಾಸ ನಡೆಸುತ್ತಿದ್ದೇನೆ. ಹಾಸನಕ್ಕೂ ಅದೇ ಉದ್ದೇಶದಿಂದ ವಾಸ್ತವ ಸ್ಥಿತಿ ತಿಳಿಯಲು ಬಂದಿದ್ದೇನೆ. ಎಲ್ಲಾ ಕಡೆ ಪ್ರಧಾನಿ ಮೋದಿಯವರಿಗೆ ಅಭೂತಪೂರ್ವ ಬೆಂಬಲ ದೊರಕಿದೆ. ಜನರು ಮೋದಿಜಿಯವರಿಗೆ ಮತ ಹಾಕಲು ಹಾತೊರೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅಂತರ ತುಂಬಾ ದೊಡ್ಡಮಟ್ಟದಲ್ಲಿ ಇರಲಿದೆ. ನಮಗೂ ಕಾಂಗ್ರೆಸ್ಗೂ ಗೆಲುವಿನಲ್ಲಿ ದೊಡ್ಡಮಟ್ಟದಲ್ಲಿ ಅಂತರವಿರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು: ಮೈಸೂರಿನಲ್ಲಿ ಮೋದಿ, ದೇವೇಗೌಡ ಬಹಿರಂಗ ಸಭೆಗೆ ಚಿಂತನೆ
ಪ್ರೀತಂಗೌಡ ಹಿಂದೆ ಎಂಎಲ್‌ಎ ಆಗಿದ್ದರು, ಈಗ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ತುಂಬಾ ಪಕ್ಷ ಸಂಘಟನೆಗೆ ಒತ್ತುಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಶಾಸಕರಾಗಿ ಆಯ್ಕೆಯಾಗದಿದ್ದರೂ ಅವರ ಶಕ್ತಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿದೆ. ನಮ್ಮ ಕಾರ್ಯಕರ್ತರು ಬಹಳ ತಿಳಿವಳಿಕೆ ಉಳ್ಳವರು. ನಮ್ಮ ರಾಷ್ಟ್ರದ ಹಿತಾಸಕ್ತಿಗೆ ಬದ್ಧವಾಗಿ ಕೆಲಸ ಮಾಡುತ್ತಾರೆ. ನಾನು ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೇನೆ. ಎಲ್ಲಾ ಕಾರ್ಯಕರ್ತರ ಮನದಲ್ಲಿ ಮೋದಿಜಿ ಅವರ ಬಗ್ಗೆ ಅಗಾಧವಾದ ಅಭಿಮಾನವಿದೆ.ಮೋದಿಜಿ, ಅಮಿತ್ ಶಾ ಏನು ನಿರ್ಧಾರ ಕೈಗೊಂಡಿದ್ದಾರೆ ಕರ್ನಾಟಕದ ಭವಿಷ್ಯಕ್ಕೆ ಎಂಬುದನ್ನು ಕಾರ್ಯಕರ್ತರು ತಿಳಿದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಇಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಹಿಂದೆ ಔರಂಗಜೇಬ್ ಮಾಡುತ್ತಿದ್ದ ಕೆಲಸವನ್ನು ಈಗ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ರಾಧಾ ಮೋಹನ್ ದಾಸ್ ಅಗರ್ವಾಲ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ