ಕರ್ನಾಟಕದಲ್ಲಿ ಹಲವು ಅವಾಂತರ ಸೃಷ್ಟಿಸಿದ ಮಳೆ: ಕಾರು, ಲಾರಿ ಪಲ್ಟಿ, 3 ಸಾವು

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಘಾತ ಸಂಭವಿಸಿದೆ. ಸಕಲೇಶಪುರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಆಲೂರಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್​ ಯಾವೂದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರಿನಲ್ಲಿ ಮಳೆಯಿಂದಾಗಿ ಲಾರಿ ಪಲ್ಟಿಯಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ತುಮಕೂರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿದ್ದಾನೆ.

ಕರ್ನಾಟಕದಲ್ಲಿ ಹಲವು ಅವಾಂತರ ಸೃಷ್ಟಿಸಿದ ಮಳೆ: ಕಾರು, ಲಾರಿ ಪಲ್ಟಿ, 3 ಸಾವು
ಕಾರು ಅಪಘಾತ
Edited By:

Updated on: May 26, 2025 | 9:47 PM

ಹಾಸನ, ಮೇ 26: ಹಾಸನ (Hassan) ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸುತ್ತಿವೆ. ಇದೀಗ, ಮಳೆಯಿಂದ (Rain) ಕಾರು ಪಲ್ಟಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ಘಟನೆ ನಡೆದಿದೆ. ಬೆಂಗಳೂರು (Bengaluru) ಮೂಲದ ಅಭಿಷೇಕ್ (27), ಶರತ್ (28) ಮೃತದುರ್ದೈವಿಗಳು. KA 03, AK 5325 ಸಂಖ್ಯೆಯ ಎರ್ಟಿಗಾ ಕಾರಿನಲ್ಲಿ ನಾಲ್ವರು ಸ್ನೇಹಿತರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.

ದಾರಿ ಮಧ್ಯೆ ಮಳೆಯಿಂದ ರಸ್ತೆ ಕಾಣದೆ ಚಾಲಕ ರಸ್ತೆ ಬದಿಯ ಕಬ್ಬಿಣದ ಡಿವೈಡರ್​ಗೆ ಕಾರು ಗುದ್ದಿದ್ದಾರೆ. ಕಾರಿನಲ್ಲಿದ್ದ ಅಭಿಷೇಕ್ ಮತ್ತು ಶರತ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ಧನಂಜಯ ಮತ್ತು ಸಂದೀಪ್ ಎಂಬುವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾರಿನ ಮೇಲೆ ಬಿದ್ದ ಮರ

ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಆಲದಮರ ಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ವಡಗರಹಳ್ಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹಾಸನದಿಂದ ಶನಿವಾರಸಂತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಓರ್ವ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಶೆಟ್ಟಿಹಳ್ಳಿಮಗ್ಗೆ ನಡುವಿನ ರಸ್ತೆ ಮಾರ್ಗ ಸಂಪೂರ್ಣ ಬಂದ್ ಆಗಿದೆ. ವಾಹನ ಸವಾರರು ಪರದಾಡಿದರು.

ಇದನ್ನೂ ಓದಿ
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ: ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಮುಂಗಾರು ಮಳೆ: ಕರವಾಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅವಾಂತರ

ವಿದ್ಯುತ್ ತಂತಿ ಮೇಲೆ ಬಿದ್ದ ಮರ

ಮೈಸೂರು: ಧಾರಾಕಾರ ಮಳೆಗೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿನ ವಿದ್ಯುತ್​ ಕಂಬದ ಮೇಲೆ ಮರ ಮುರಿದು ಬಿದ್ದಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ದೇವನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ‌ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದಾಗಿ ಗೊಬ್ಬರ ತುಂಬಿದ್ದ ಲಾರಿ ಪಲ್ಟಿ

ಮಳೆಯಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ನಡೆದಿದೆ. ಲಾರಿ ಗೊಬ್ಬರ ತುಂಬಿಕೊಂಡು ಕೊಡಗು ಕಡೆ ಹೊರಟಿತ್ತು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ರಸ್ತೆಯಲ್ಲಿ ಲಾರಿ ಪಲ್ಟಿಯಾದ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್​ ಆಗಿತ್ತು. ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ತುಮಕೂರು: ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ. ಅಚುತ್‌ ಕುಮಾರ್ (13 ವರ್ಷ) ಮೃತ ಬಾಲಕ. ಅಚುತ್‌ ಕುಮಾರ್ ಸೋಮವಾರ (ಮೇ.26) ಸಂಜೆ 4 ಗಂಟೆ ಸುಮಾರಿಗೆ ಮನೆ ಬಳಿ ಆಟವಾಡುತ್ತಿದ್ದನು. ಈ ವೇಳೆ ವಿದ್ಯುತ್​ ಕಂಬದಿಂದ ಮನೆಗೆ ಸಂಪರ್ಕ ಕಲ್ಪಿಸಿದ್ದ ವೈರ್ ಸ್ಕಿನ್​ ಔಟ್​ ಆಗಿ ಆರ್​ಸಿಸಿ ಶೀಟ್​ಗೆ ತಗುಲಿತ್ತು. ಮಳೆಯಾಗಿ ಒದ್ದೆಯಾಗಿದ್ದರಿಂದ ಶೀಟ್​ನಿಂದ ವಿದ್ಯುತ್​ ಮೆಟ್ಟಿಲಿನ ಗ್ರಿಲ್​ವರೆಗೆ ಪಸರಿಸಿತ್ತು.

ಇದನ್ನು ತಿಳಿಯದ ಅಚುತ್​ ಕುಮಾರ್ ಮೆಟ್ಟಿಲಿನ ಗ್ರಿಲ್ ಮುಟ್ಟಿದಾಗ ಶಾಕ್​ ಹೊಡೆದಿದೆ. ಬಾಲಕ ಅಚುತ್ ಕುಮಾರ್​ ಮೃತಪಟ್ಟಿದ್ದಾನೆ. ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್​ ಸವಾರ ಸಾವು

ಕಲಬುರಗಿ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಬಳಿ ಟಿಪ್ಪರ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಂಕನೂರು ಗ್ರಾಮದ ಹನುಮಂತ (18) ಮೃತ ದುರ್ದೈವಿ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಡಗು, ಉತ್ತರ ಕನ್ನಡದಲ್ಲಿ ಭೋರ್ಗರೆತಿರುವ ಫಾಲ್ಸ್, ಬೀಚ್: ಪ್ರವಾಸಿಗರಿಗೆ ನಿರ್ಬಂಧ

ಬಳ್ಳಾರಿಯಲ್ಲಿ ರಸ್ತೆ ಅಪಘಾತ: ಇಬ್ಬರ ಸಾವು

ಬಳ್ಳಾರಿ: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿಯಾದ ಪರಿಣಾಮ ಸವಾರ ಮತ್ತು ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದ ಪಾಲಿಟೆಕ್ನಿಕ್‌ ಕಾಲೇಜು ಬಳಿ ನಡೆದಿದೆ. ಅಬ್ದುಲ್‌ ಅರ್ಮಾನ್‌ (21) ಮತ್ತು ಇವರ ಸಹೋದರನ ಪುತ್ರಿ ಹಸೀನಾ (5) ಮೃತ ದುರ್ದೈವಿಗಳು. ಮೃತ ಅಬ್ದುಲ್‌, ಹಸೀನಾ ಬಳ್ಳಾರಿ ನಗರದ ಗುಗ್ಗರಹಟ್ಟಿಯ ನಿವಾಸಿಗಳು ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Mon, 26 May 25