ಮತ್ತೆ ಬಂದ್ ಆಗಲಿದೆ ಶಿರಾಡಿ ಘಾಟ್! ಕಾರಣ, ಪರ್ಯಾಯ ಮಾರ್ಗ ಇಲ್ಲಿದೆ ನೋಡಿ

ಮತ್ತೆ ಬಂದ್ ಆಗಲಿದೆ ಶಿರಾಡಿ ಘಾಟ್! ಕಾರಣ, ಪರ್ಯಾಯ ಮಾರ್ಗ ಇಲ್ಲಿದೆ ನೋಡಿ
ಘಾಟ್ (ಸಾಂದರ್ಭಿಕ ಚಿತ್ರ)

ಹಾಸನದ ಮೂಲಕ ಹಾದು ಹೋಗುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ನಲ್ಲಿ ಸಾಕಷ್ಟು ಕಡಿದಾದ ತಿರುವುಗಳನ್ನು ಹೊಂದಿರುವ ರಸ್ತೆ, ಬೆಂಗಳೂರಿನಿಂದ ಹಾಸನದ ವರೆಗೆ ನಾಲ್ಕು ಪಥದ ರಸ್ತೆ ಇದೆ.

TV9kannada Web Team

| Edited By: sandhya thejappa

Jan 10, 2022 | 2:31 PM

ಹಾಸನ: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಮತ್ತೆ ಬಂದ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬರೆದಿರುವ ಪತ್ರ ಟಿವಿ9ಗೆ ಲಭ್ಯವಾಗಿದ್ದು, ಸಂಕ್ರಾಂತಿ ಬಳಿಕ ಮತ್ತೆ ಆರು ತಿಂಗಳು ಶಿರಾಡಿ ಘಾಟ್ನಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ.

ಹಾಸನದ ಮೂಲಕ ಹಾದು ಹೋಗುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ನಲ್ಲಿ ಸಾಕಷ್ಟು ಕಡಿದಾದ ತಿರುವುಗಳನ್ನು ಹೊಂದಿರುವ ರಸ್ತೆ, ಬೆಂಗಳೂರಿನಿಂದ ಹಾಸನದ ವರೆಗೆ ನಾಲ್ಕು ಪಥದ ರಸ್ತೆ ಇದೆ. ಹಾಸನದಿಂದ ಸಕಲೇಶಪುರಕ್ಕೆ ಫೋರ್ ವೇ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಜಕಮಲ್ ಸಂಸ್ಥೆ ಈ ಕಾಮಗಾರಿ ನಡೆಸುತ್ತಿದ್ದು, ಇದರಲ್ಲಿ ಸಕಲೇಶಪುರ ಹೊರವಲಯದ ದೋಣಿಗಲ್ ಬಳಿಯ 220 ಕಿಲೋಮೀಟರ್ ರಿಂದ 230ರ ವರೆಗಿನ ಮಾರನಹಳ್ಳಿವರೆಗೆ ಕಾಮಗಾರಿ ನಡೆಸಲು ಆರು ತಿಂಗಳು ರಸ್ತೆ ಬಂದ್ ಮಾಡಿ ಎಂದು ಪತ್ರ ಬರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ವಾಹನ ಸಂಚಾರದ ಜೊತೆಗೆ ಕಾಮಗಾರಿ ಮಾಡಲು ಆಗಲ್ಲ. ದೊಡ್ಡ ದೊಡ್ಡ ಮಿಷನ್ಗಳು ಇಲ್ಲಿಗೆ ಬರಬೇಕಿದೆ. ಹೆಚ್ಚಿನ ಪ್ರಮಾಣದ ಸಾಮಗ್ರಿಗಳನ್ನ ತಂದು ಸಂಗ್ರಹ ಮಾಡಬೇಕಿದೆ. ಇಲ್ಲಿ ಕಡಿದಾದ ತಿರುವುಗಳು, ದೊಡ್ಡ ದೊಡ್ಡ ತಡೆಗೋಡೆಗಳ ನಿರ್ಮಾಣ ಆಗಬೇಕಿದೆ. ಹಾಗಾಗಿ ಈ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಆರು ತಿಂಗಳು ರಸ್ತೆ ಸಂಚಾರ ಬಂದ್ ಮಾಡಿ ಎಂದು ಮನವಿ ಮಾಡಲಾಗಿದೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ರಾಜಕಮಲ್ ಸಂಸ್ಥೆಯ ಮನವಿ ಆಧರಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಎನ್ಎಚ್ಎ ಅಧಿಕಾರಿಗಳು ಶೀಘ್ರವಾಗಿ ಈ ಬಗ್ಗೆ ಪರಿಶೀಲನೆಗೆ ಮನವಿ ಮಾಡಿದ್ದಾರೆ.

ಈ ಹಿಂದೆ ಹಲವು ಬಾರಿ ಬಂದ್ ಆಗಿದ್ದ ಶಿರಾಡಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಶಿರಾಡಿ ಘಾಟ್ ಮಳೆಗಾಲದ ಸಮಯದಲ್ಲಿ ಹಲವು ಬಾರಿ ಬಂದ್ ಆಗಿತ್ತು. 2018ರಲ್ಲಿ ತಿಂಗಳುಗಟ್ಟಲೆ ರಸ್ತೆ ಬಂದ್ ಆಗಿತ್ತು. 2019ರಲ್ಲೂ ಕೂಡ ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಬಂದ್ ಆಗಿತ್ತು. 2021ರಲ್ಲೂ ದೋಣಿಗಲ್ ಸಮೀಪ ರಸ್ತೆ ಕುಸಿದು ಒಂದು ತಿಂಗಳು ರಸ್ತೆ ಸಂಚಾರಕ್ಕೆ ತಡೆ ನೀಡಲಾಗಿತ್ತು. ಇದಕ್ಕೂ ಮುನ್ನ 2017ರಲ್ಲಿ ಶಿರಾಡಿ ಘಾಟ್ನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಆರು ತಿಂಗಳಿಗೂ ಹೆಚ್ಚು ಸಮಯ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ಬೆಂಗಳೂರಿನಿಂದ ಮಂಗಳೂರು ನಡುವೆ ಅಪಾರ ಪ್ರಮಾಣದ ಸರಕು ಸಾಗಣೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಾಟ ಸೇರಿ ಇಡೀ ರಾಜ್ಯದಲ್ಲಿ ಈ ರಸ್ತೆ ಪ್ರಮುಖವಾಗಿದೆ. ಅಲ್ಲದೆ ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಾದ ಧರ್ಮಸ್ಥಳ ಹಾಗು ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿತ್ಯ ಸಾವಿರಾರು ಭಕ್ತರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೆಚ್ಚಿನ ಜನರು ಪ್ರವಾಸ ಹೊರಡುವ ವೇಳೆಯಲ್ಲಿ ರಸ್ತೆ ಬಂದ್ ಆದರೆ ಹೇಗೆ ಎನ್ನುವ ಪ್ರಶ್ನೆ ಕೂಡ ಇದೆ. ಆದರೆ ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಮುಗಿಸಬೇಕಾದರೆ ರಸ್ತೆ ಬಂದ್ ಮಾಡುವುದು ಅನಿವಾರ್ಯವಾಗಿದೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರಿನಿಂದ ಹಾಸನದ ವರೆಗೆ ಸುಸಜ್ಜಿತವಾಗಿ ನಿರ್ಮಾಣ ಆಗಿದೆ. ಆದರೆ ಹಾಸನದಿಂದ ಮಾರನಹಳ್ಳಿವರೆಗೆ ಕಳೆದ ಐದು ವರ್ಷಗಳಿಂದಲೂ ಕೂಡ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಮಾರ್ಗದಲ್ಲಿ ನೂರಾರು ಹೊರಾಟಗಳಾಗಿವೆ. ಹಲವು ಸಚಿವರುಗಳು ಬಂದು ಹೋಗಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ. ಭಾರೀ ಒತ್ತಡದ ಮೇಲೆ ಕಳೆದ ಆರು ತಿಂಗಳಿನಿಂದ ರಸ್ತೆ ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ. ಈ ಹಿಂದೆ ರಸ್ತೆ ನಿರ್ಮಾಣ ಸಾಮಗ್ರಿ ಕೊರತೆ, ಅನುದಾನ ಕೊರತೆ ನೆಪದಲ್ಲಿ ರಸ್ತೆ ನಿರ್ಮಾಣ ಸ್ಥಗಿತವೇ ಆಗಿತ್ತು. ಸರ್ಕಾರದ ಮದ್ಯ ಪ್ರವೇಶ ಹಾಗು ಹೆದ್ದಾರಿ ನಿರ್ಮಾಣಕ್ಕಾಗಿಯೇ ವಿಶೇಷವಾಗಿ ಕಲ್ಲು ಕ್ವಾರಿ ಹಾಗು ಮರಳು ಪ್ಲಾಟ್ಗಳನ್ನ ಮೀಸಲಿಟ್ಟ ಬಳಿಕ ಕಾಮಗಾರಿ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.

ಪರ್ಯಾಯ ಮಾರ್ಗ ಸೂಚಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರು ತಿಂಗಳೂ ರಸ್ತೆ ಬಂದ್ ಮಾಡಲು ಮನವಿ ಮಾಡಿರುವ ಎನ್ಎಚ್ಎ ಅಧಿಕಾರಿಗಳು ಪರ್ಯಾಯ ಎರಡು ಮಾರ್ಗಗಳನ್ನ ಸೂಚಿಸಿದ್ದಾರೆ. ಹಾಸನದಿಂದ ಬೇಲೂರು ಮೂಲಕ ಮೂಡಿಗೆರೆ, ಚಾರ್ಮಾಡಿ ಘಾಟ್, ಬೆಳ್ತಂಗಡಿ, ಬಂಟ್ವಾಳ ಮಂಗಳೂರು ಈ ಮಾರ್ಗದಲ್ಲಿ ಲಘು ವಾಹನಗಳ ಜೊತೆಗೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದು. ಎರಡನೆ ಮಾರ್ಗದಲ್ಲಿ ಹಾಸನದಿಂದ ಆಲೂರು ಮೂಲಕ ಬಿಸಿಲೆ ಘಾಟ್ ಮೂಲಕ ಕುಕ್ಕೆ ಸುಬ್ರಹ್ಮಣ್ಯ ತಲುಪಿ ಅಲ್ಲಿಂದ ಗುಂಡ್ಯ ಮೂಲಕ ಉಪ್ಪಿನಂಗಡಿಯಿಂದ ಮಂಗಳೂರಿಗೆ ತಲುಪಬಹುದು. ಈ ಮಾರ್ಗದಲ್ಲಿ ಕೇವಲ ಸಾಮಾನ್ಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಪ್ರಸ್ತಾಪಿಸಲಾಗಿದೆ.

ಪರಿಶೀಲನೆಗೆ ಸೂಚನೆ ಎನ್ಎಚ್ಎ ಪತ್ರ ಪರೀಶೀಲನೆ ನಡೆಸಿರುವ ಜಿಲ್ಲಾಧಿಕಾರಿ, ಈ ಬಗ್ಗೆ ಮರು ಪರಿಶೀಲನೆಗೆ ಸೂಚಿಸಿದ್ದಾರೆ. ಆರು ತಿಂಗಳು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡೋದು ಕಷ್ಟ ಸಾಧ್ಯವಾಗಲಿದೆ. ಹಾಗಾಗಿ ಬೇಗನೆ ಕೆಲಸ ಮುಗಿಸಲು ಸಾಧ್ಯವಿದೆಯಾ ಅಥವಾ ಬೇರೆ ಪರ್ಯಾಯ ಏನಾದರೆ ಇದೆಯಾ ಎಂದು ತಜ್ಞರಿಂದ ಮಾಹಿತಿ ಪಡೆದು ವರದಿ ಸಲ್ಲಿಸಲು ಸೂಚನೆ ನೀಡಿ ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪತ್ರ ಬಂದಿದೆ. ಆರು ತಿಂಗಳು ದೋಣಿಗಲ್ನಿಂದ ಮಾರನಹಳ್ಳಿವರೆಗೆ ರಸ್ತೆ ಬಂದ್ ಮಾಡಲು ಮನವಿ ಮಾಡಲಾಗಿದೆ. ಈ ಬಗ್ಗೆ ಮರು ಪರಿಶೀಲನೆಗೆ ಸೂಚನೆ ನೀಡಲಾಗಿದೆ. ತಜ್ಞರಿಂದ ವರದಿ ಪಡೆದು ಬೇರೆ ಪರ್ಯಾಯದ ಬಗ್ಗೆ ವರದಿ ನೀಡಲು ಸೂಚಿಸಿದ್ದು, ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಅಂತ ಜಿಲ್ಲಾದಿಕಾರಿ ಆರ್ ಗಿರೀಶ್ ಹೇಳಿದ್ದಾರೆ.

ವರದಿ: ಮಂಜುನಾಥ್ ಕೆ ಬಿ

ಇದನ್ನೂ ಓದಿ

ಬಾದಾಮಿ ಜಾತ್ರೆ ನಿಲ್ಲಿಸಿದ್ರೆ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ: ಸರ್ಕಾರದ ವಿರುದ್ಧ ಸಿಡಿದೆದ್ದ ರಂಗಭೂಮಿ ಕಲಾವಿದರು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲುಗೆ ಕೊರೊನಾ, ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವೀಟ್

Follow us on

Related Stories

Most Read Stories

Click on your DTH Provider to Add TV9 Kannada