ಬಾದಾಮಿ ಜಾತ್ರೆ ನಿಲ್ಲಿಸಿದ್ರೆ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ: ಸರ್ಕಾರದ ವಿರುದ್ಧ ಸಿಡಿದೆದ್ದ ರಂಗಭೂಮಿ ಕಲಾವಿದರು

ಬಾದಾಮಿ ಜಾತ್ರೆ ನಿಲ್ಲಿಸಿದ್ರೆ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ: ಸರ್ಕಾರದ ವಿರುದ್ಧ ಸಿಡಿದೆದ್ದ ರಂಗಭೂಮಿ ಕಲಾವಿದರು
ಬಾದಾಮಿ ಜಾತ್ರೆಯಲ್ಲಿ ಕಂಪನಿ ನಾಟಕ (ಸಂಗ್ರಹ ಚಿತ್ರ)

ನಾಟಕಗಳ ಜಾತ್ರೆ ಎಂದೇ ಹೆಸರುವಾಸಿಯಾದ ಬನಶಂಕರಿ ಜಾತ್ರೆಗೆ ಸರ್ಕಾರ ನಿರ್ಬಂಧ ಹೇರಿದ್ದು, ಕಲಾವಿದರು ಕಂಗಾಲಾಗಿದ್ದಾರೆ. ಒಂದು ತಿಂಗಳ ದುಡಿಮೆಯಲ್ಲಿ ಒಂದು ವರ್ಷ ಬದುಕುತ್ತಿದ್ದ ಕಲಾವಿದರು ಮುಂದೇನು ಎಂದು ಕಂಗಾಲಾಗಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 10, 2022 | 1:54 PM

ಬಾಗಲಕೋಟೆ: ಬಾದಾಮಿಯ ಬನಶಂಕರಿ ಜಾತ್ರೆಯು ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು. ಒಂದು ತಿಂಗಳು ನಡೆಯುವ ಈ ದೊಡ್ಡ ಜಾತ್ರೆಯಲ್ಲಿ ಹತ್ತಾರು ನಾಟಕ ಕಂಪನಿಗಳು ತಲೆ ಎತ್ತುತ್ತಿದ್ದವು. ಹಗಲು ರಾತ್ರಿ ನಾಟಕ ಕಲಾವಿದರು ತಮ್ಮ ಕಲೆ ಪ್ರದರ್ಶನ ಮಾಡುತ್ತಿದ್ದರು. ಜನರು ನೋಡಿ ಖುಷಿ ಪಡುತ್ತಿದ್ದರು. ಆದರೆ ಕೊವಿಡ್ 3ನೇ ಅಲೆಯಿಂದಾಗಿ ಈ ವರ್ಷ ಸರ್ಕಾರವು ನಾಟಕಕ್ಕೆ ನಿರ್ಬಂಧ ಹೇರಿದ್ದು ಕಲಾವಿದರು ಕಂಗಾಲಾಗಿದ್ದಾರೆ. ಸಿನಿಮಾ ಮಂದಿರಗಳಿಗೆ ಅವುಗಳ ಸಾಮರ್ಥ್ಯದ ಅರ್ಧದಷ್ಟು ಜನರೊಂದಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ. ಆದರೆ ನಾಟಕಗಳಿಗೆ ಮಾತ್ರ ಪೂರ್ಣ ನಿರ್ಬಂಧವಿದೆ. ಅನುಮತಿ ಸಿಗದ ಕಾರಣ ಕಲಾವಿದರ ಬಳಗ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಲಾವಿದರು ಅಲವತ್ತುಕೊಂಡಿದ್ದಾರೆ. ಸರ್ಕಾರವು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹೆಚ್ಚುವ ನೀತಿ ಅನುಸರಿಸುತ್ತಿದೆ. ನಾಟಕಗಳಿಗೆ ಅವಕಾಶ ನೀಡದಿದ್ದರೆ ಕಲಾವಿದರಿಗೆ ಆತ್ಮಹತ್ಯೆ ಒಂದೇ ದಾರಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಾಡಿದ ಮುಖಗಳು, ಮುಖದಲ್ಲಿ ಆತಂಕ ಹೊತ್ತಿರುವ ಈ ಕಲಾವಿದರು ತಮ್ಮ ಮೇಲೆ ಸರ್ಕಾರ ಕನಿಕರ ತೋರಿಸಬೇಕೆಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿಯೂ ನಾಟಕಗಳು ಬಂದ್ ಆಗಿ ಕಲಾವಿದರು ಪಡಬಾರದ ಕಷ್ಟಪಟ್ಟಿದ್ದಾರೆ. ಸಾಲ ಮಾಡಿ ಜೀವನ ನಿರ್ವಹಣೆ ಮಾಡಿದ್ದಾರೆ. ಕೆಲವರು ಐಸ್​ಕ್ರೀಮ್ ಮಾರಿ, ಪೇಂಟ್​ ಹೆಚ್ಚುವ ಕೆಲಸ ಮಾಡಿ ಜೀವನ ನಡೆಸಿದ್ದಾರೆ. ಈ ವರ್ಷವಾದರೂ ನಾಟಕ ಪ್ರದರ್ಶನಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಕಲಾವಿದರಿಗೆ ಇತ್ತು. ಆದರೆ ಸರ್ಕಾರ ನಿರ್ಬಂಧ ವಿಧಿಸಿದ್ದರಿಂದ ನಾಟಕ ಕಲಾವಿದರಿಗೆ ನಿರಾಸೆಯಾಗಿದೆ.

ಉತ್ತರ ಕರ್ನಾಟಕದಲ್ಲಿ ಕಂಪನಿ ನಾಟಕಗಳು ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ. ಹಳ್ಳಿಹಳ್ಳಿಗಳಲ್ಲಿ ನಾಟಕಗಳು ಪ್ರದರ್ಶನ ಕಾಣುತ್ತವೆ. ಹಳ್ಳಿ ಜನರು ಈಗಲೂ ನಾಟಕಗಳನ್ನು ನೋಡಿ ಹರ್ಷ ಪಡುತ್ತಾರೆ. ಬನಶಂಕರಿ ದೇವಿ ಜಾತ್ರೆಗೆ ಕಲಾವಿದರ ಜಾತ್ರೆ ಎಂಬ ಹಿರಿಮೆಯೂ ಇದೆ. ಪ್ರತಿವರ್ಷ ಬನಶಂಕರಿ ದೇವಿ ಜಾತ್ರೆ ವೇಳೆ ಹನ್ನೆರಡಕ್ಕೂ ಅಧಿಕ‌ ನಾಟಕ ಕಂಪನಿಗಳು ಡೇರೆ ಹಾಕುತ್ತವೆ. ರಂಗಭೂಮಿ ಕಲಾವಿದರು, ನಾಟಕ ಕಂಪನಿಗಳ ಕಾರ್ಮಿಕರು ಎಲ್ಲರೂ ಸೇರಿ ಸಾವಿರಾರು ಜನರು ನಾಟಕ ಕಂಪನಿಗಳ‌ ಮೇಲೆ ಅವಲಂಬಿತರಾಗಿರುತ್ತಾರೆ. ಬನಶಂಕರಿ ದೇವಿ ಜಾತ್ರೆಯಲ್ಲಿ ಒಂದು ತಿಂಗಳು ನಾಟಕ ಆಡಿದರೆ ಕಲಾವಿದರಿಗೆ ವರ್ಷವಿಡೀ ಅನ್ನ ಲಭಿಸುತ್ತದೆ‌. ಆದರೆ ಕೊರೊನಾ ಕಾರಣದಿಂದಾಗಿ ಜಾತ್ರೆ ಜೊತೆಗೆ ನಾಟಕಕ್ಕೂ ಬ್ರೆಕ್ ಬಿದ್ದಿದ್ದು ಕಲಾವಿದರಿಗೆ ಈ ಬಾರಿಯೂ ಆಕಾಶ ಮೈಮೇಲೆ ಬಿದ್ದಂತೆ ಆಗಿದೆ. ಸರ್ಕಾರವು ಕಲಾವಿರರ ಮೇಲೆ ಕನಿಕರ ತೋರಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಕಲಾವಿದರು ನೊಂದು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಕಲಾವಿದರು ಎಚ್ಚರಿಸಿದ್ದಾರೆ.

Badami-Drama

ಮುಂದೇನು ಎಂಬ ಚಿಂತೆಯಲ್ಲಿರುವ ಕಲಾವಿದರು.

ಟಿವಿ9 ಜೊತೆಗೆ ಅಳಲುತೋಡಿಕೊಂಡ ಹಾಸ್ಯನಟ ಮಂಜುನಾಥ ಗುಳೇದಗುಡ್ಡ, ‘ಕಳೆದ ಎರಡು ವರ್ಷಗಳಿಂದಲೂ ಬನಶಂಕರಿ ಜಾತ್ರೆ ಆಗಿಲ್ಲ. ಈ ವರ್ಷವಾದರೂ ಜಾತ್ರೆ ನಡೆಯಬಹುದು ಎಂದು ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಕಲಾವಿದರಿಗೆ ಅಡ್ವಾನ್ಸ್ ಪೇಮೆಂಟ್ ಮಾಡಿದ್ದೆವು. ಇಷ್ಟುದಿನ ಲಾಕ್​ಡೌನ್ ಇರಲ್ಲ ಎಂದು ಹೇಳುತ್ತಿದ್ದವರು ಈಗ ಏಕಾಏಕಿ ಜಾತ್ರೆ ನಡೆಯುವುದಿಲ್ಲ ಎನ್ನುತ್ತಿದ್ದಾರೆ. ಹೀಗಾದ್ರೆ ನಮ್ಮ ಬದುಕುಗಳು ನಡೆಯುವುದು ಹೇಗೆ? ಇವರು ಎಲೆಕ್ಷನ್ ಮಾಡೋಕೆ ಕೊರೊನಾ ಅಡ್ಡ ಬರಲ್ಲ. ಆದ್ರೆ ಜಾತ್ರೆ ಮಾಡೋಕೆ ಮಾತ್ರ ಕೊರೊನಾ ಅಡ್ಡಿ ಬರುತ್ತಾ? ದಯವಿಟ್ಟು ಜಾತ್ರೆ ನಿಲ್ಲಿಸಬೇಡಿ, ಅರ್ಧದಷ್ಟು ಜನರಿಗೆ ಪ್ರವೇಶ ಕಲ್ಪಿಸಿ, ನಾಟಕ ನಡೆಸಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೋರಿದ್ದೇವೆ. ಸರ್ಕಾರವು ಜಾತ್ರೆಗೆ ಅವಕಾಶ ಮಾಡಿಕೊಡದಿದ್ದರೆ ಕಲಾವಿದರು ಬದುಕುವುದಿಲ್ಲ’ ಎಂದು ವಿವರಿಸಿದರು.

‘ಕಳೆದ ಬಾರಿ ಲಾಕ್​ಡೌನ್ ಹೇರಿದಾಗ ನಮ್ಮ ಕಸುಬು ಬಿಟ್ಟು ಬೇರೆ ಕೆಲಸಗಳನ್ನು ಮಾಡಿ ಜೀವನ ಮಾಡಿದೆವು. ಜಾತ್ರೆಯಲ್ಲಿಯೇ ನಮಗೆ ಅನ್ನ ಹುಟ್ಟುವುದು. ಜಾತ್ರೆಗೆ ನಿರ್ಬಂಧ ವಿಧಿಸಿ, ನಮ್ಮ ಅನ್ನ ಕಸಿದುಕೊಂಡರೆ ಹೇಗೆ? ಕಳೆದ ವರ್ಷ ಬಣ್ಣ ಹಚ್ಚಿದ್ದೇನೆ, ಕಾಯಿಪಲ್ಯ ಮಾರಿದ್ದೇನೆ’ ಎಂದು ನೆನಪಿಸಿಕೊಂಡರು. ನಮ್ಮ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರಿಗೂ ವಿವರಿಸಿದ್ದೇವೆ. ಸರ್ಕಾರ ಹೇಳಿದಂತೆ ಕೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕಲಾವಿದರ ಬಗ್ಗೆ ಯಾರಿಗೂ ಕಾಳಜಿಯಿಲ್ಲ’ ಎಂದು ವಿಷಾದಿಸಿದರು.

ಮತ್ತೋರ್ವ ಕಲಾವಿದರ ಭರತ್ ತಾಳಿಕೋಟಿ ಮಾತನಾಡಿ, ‘ಕಲಾವಿದರ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ದೊಡ್ಡ ಜಾತ್ರೆಗಳು ಬಂದ್ ಆದ್ರೆ ಕಲಾವಿದರು ಬದುಕೋದು ಕಷ್ಟ. ನಾವು ಇನ್ನೊಬ್ಬರಿಗೆ ಬಾರವಾಗಿ ಬದುಕಲು ಇಷ್ಟಪಡುವುದಿಲ್ಲ. ನಾಟಕ ಮಾಡಲು ಅವಕಾಶ ಕೊಟ್ಟರೆ ಸಾಕು. ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿಯಿದೆ ಎಂದು ಬಾಗಲಕೋಟೆಯಲ್ಲಿ ನಿರ್ಬಂಧ ಹೇರಬೇಡಿ. ನಾಟಕ ನಡೆಸಲು ಅವಕಾಶ ಮಾಡಿಕೊಟ್ಟು, 800 ಕಲಾವಿದರಿಗೆ ಅನ್ನದಾತರಾಗಬೇಕೆಂದು ಸರ್ಕಾರವನ್ನು ಕೈಮುಗಿದು ಕೇಳಿಕೊಳ್ಳುತ್ತೇವೆ’ ಎಂದರು.

ನಾಟಕ ಕಂಪನಿಯಲ್ಲಿ ದುಡಿಯುತ್ತಿರುವ ಯುವ ಕಲಾವಿದೆ ಜ್ಯೋತಿ ಗುಳೇದಗುಡ್ಡ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಬನಶಂಕರಿ ಜಾತ್ರೆ ನಡೆಯುತ್ತದೆ ಎಂಬ ನಿರೀಕ್ಷೆಯಿತ್ತು. ಬನಶಂಕರಿ ಜಾತ್ರೆಯಲ್ಲಿ ಆಗುವ ಸಂಪಾದನೆಯನ್ನೇ ನಂಬಿ ನಾವು ಜೀವನ ಮಾಡುತ್ತಿದ್ದೇವೆ. ನಮಗೆ ಎಲ್ಲ ರಾಜಕೀಯ ನಾಯಕರೂ ಬೇಕು. ನಮ್ಮಲ್ಲಿ ವೋಟರ್ ಐಡಿ ಇದೆ. ಲಸಿಕೆ ಕೂಡ ಹಾಕಿಸಿಕೊಂಡಿದ್ದೀವಿ. ನಮ್ಮ ಜೀವದ ಮೇಲೆ ನಮಗೂ ಆಸೆಯಿರುತ್ತೆ. ಜನರಿಗೆ ತೊಂದರೆಯಾಗದಂತೆ, ಸರ್ಕಾರ ವಿಧಿಸುವ ಎಲ್ಲ ನಿಯಮಗಳನ್ನು ಪಾಲಿಸಿ ನಾಟಕ ಪ್ರದರ್ಶನ ಮಾಡುತ್ತೇವೆ. ಇದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ವಿನಂತಿಸಿದರು.

ವರದಿ: ರವಿ ಮೂಕಿ, ಬಾಗಲಕೋಟೆ

ಇದನ್ನೂ ಓದಿ: ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ ಬಾಗಲಕೋಟೆ ಜಿಲ್ಲಾಡಳಿತ; ಕಲಾವಿದರ ಮೊಗದಲ್ಲಿ ಮಂದಹಾಸ

Follow us on

Most Read Stories

Click on your DTH Provider to Add TV9 Kannada