ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಮದುಮಗನ ಮುಖವಾಡ ಬಯಲು: ಮಂಟಪದಲ್ಲೇ ಬಿತ್ತು ಧರ್ಮದೇಟು..!
ಇನ್ನೇನು ಮದುಮಗ ತಾಳಿಕಟ್ಟ ಬೇಕು ಎನ್ನೋ ವೇಳೆಗೆ ಬಂದಿದ್ದ ಅದೊಂದು ಫೋನ್ ಕರೆ ಇಡೀ ಮದುವೆ ಮಂಟಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಿತ್ತು, ಹುಡುಗಿ ಮನೆಯವರಿಗೆ ಸಿಕ್ಕ ಅದೊಂದು ಫೋಟೋ ಇಡೀ ಮದುವೆ ಸಂಭ್ರಮದಲ್ಲಿ ಬರ ಸಿಡಿಲು ಬಡಿದಂತೆ ಮಾಡಿತ್ತು. ಬಳಿಕೆ ನಡೆದಿದ್ದೇನು ನೋಡಿ..
ಹಾಸನ: ಹಾಸನದ ಎಂಜಿ ರಸ್ತೆ ಸಮೀಪ ಇರೋ ಮಧುವೆ ಮಂಟಪದಲ್ಲಿ ಇಂದು(ಅ.28) ಮದುವೆ ಸಡಗರ ಮನೆ ಮಾಡಿತ್ತು. ಅಲ್ಲಿ ಮಂಗಳ ವಾದ್ಯ ಮೊಳಗುತ್ತಿತ್ತು. ಎಲ್ಲರ ಮುಖದಲ್ಲೂ ಮದ್ವೆ ಸಂಭ್ರಮ ಕಾಣ್ತಿತ್ತು. ಅಡುಗೆ ಮನೆಯಲ್ಲಿ ಮದುವೆಯೂಟ ಘಮ ಘಮಿಸುತ್ತಿತ್ತು, ಇನ್ನೇನು ತಾಳಿಕಟ್ಟಲು ಮದುಮಗ ಕೂಡ ಸಜ್ಜಾಗಿ ನಿಂತಿದ್ದ. ಅಷ್ಟೇ ಅಲ್ಲದೇ ತಾಳಿಕಟ್ಟಿದ ಮರುದಿನವೇ ಅಂದ್ರೆ ನಾಳೆ(ಅ.29) ಬೆಳಿಗ್ಗೆಯೇ ಹನಿಮೂನ್ಗೆ ಅಂತ ಮಾಲ್ಡೀವ್ಸ್ಗೆ ಹೋಗಲು ಫ್ಲೈಟ್ ಟಿಕೆಟ್ ಸಹ ಬುಕ್ ಆಗಿತ್ತು. ಆದ್ರೆ ಆ ಮದುಮಗಳ ಅದೃಷ್ಟ ಚನ್ನಾಗಿತ್ತೋ ಅಥವಾ ಹುಡುಗಿ ಅಪ್ಪ-ಅಮ್ಮ ಮಾಡಿದ ಪುಣ್ಯವೋ ಏನೋ ಕೊನೇ ಕ್ಷಣದಲ್ಲಿ ಬಂದ ಅದೊಂದು ಫೋಟೋ ವರನ ಅಸಲಿ ಮುಖವಾಡ ಬಟಾಬಯಲು ಮಾಡಿದೆ.
78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ: 60 ವರ್ಷ ಅಂತರವಿದ್ರೂ ಪ್ರೀತಿಗೆ ವಯಸ್ಸು ಬೇಕಿಲ್ಲ ಎಂದ ಜೋಡಿ
ಹೌದು…ನಾಲ್ಕು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಮದುವೆಯಾಗಿದ್ದ ಪಾಪಿ ಆಕೆಯಿಂದ ದೂರವಾಗಿ ಲಕ್ಷ ಲಕ್ಷ ವರದಕ್ಷಿಣೆ ಚಿನ್ನಾಭರಣ ಪಡೆದುಕೊಂಡು ಮತ್ತೊಂದು ಮದುವೆ ಆಗೋಕೆ ರೆಡಿಯಾಗಿ ನಿಂತಿದ್ದ. ಆದ್ರೆ ಮೊದಲ ಹೆಂಡತಿಯ ಪ್ರಯತ್ನ, ಮದುಮಗಳ ಅದೃಷ್ಟ ಕಡೆಗೂ ವಂಚಕನ ಖತರ್ನಾಕ್ ಪ್ಲ್ಯಾನ್ ಬಯಲಾಗಿದೆ. ವರನಿಗೆ ಈಗಾಗಲೇ ಮದ್ವೆಯಾಗಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಹುಡುಗಿ ಕಡೆಯವರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ ಆಗೋಕೆ ಯತ್ನಿಸಿ ಕೊನೆ ಗಳಿಗೆಯಲ್ಲಿ ಸಿಕ್ಕ ಅದೊಂದು ಫೋಟೋದಿಂದ ಹುಡುಗಿಯ ಬಾಳು ಬಚಾವ್ ಆಗಿದೆ.
ಈ ಪಾಪಿ ವಂಚಕನ ಹೆಸರು ಮಧುಸೂದನ್ ಬೆಂಗಳೂರಿನ ಚಿಕ್ಕಸಂದ್ರದ ಕುವೆಂಪು ಬಡಾವಣೆಯ ನಿವಾಸಿ. ಈ ನೀಚ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಾನಂತೆ, ಕೈತುಂಬ ಸಂಬಳವು ಸಹ ಇದೆ ಅಂತೆ. ಇವನ ಅಂದ ನೋಡಿದ ಹಾಸನದ ಹುಡುಗಿ ಮನೆಯವರು ಮಗಳು ಚನ್ನಾಗಿ ಇರ್ತಾಳೆ ಎಂದು ನಂಬಿ ಮದುವೆ ನಿಶ್ಚಯಮಾಡಿದ್ರು. ಇಂದು ಮದುವೆ ಮುಹೂರ್ತಕೂಡ ನಿಗದಿಯಾಗಿ ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವಷ್ಟರಲ್ಲಿ ಈ ನೀಚನ ಮುಖವಾಡ ಕಳಚಿ ಬಿದ್ದಿದೆ.
ಮದ್ವೆಗೆ ಬಂದವರಿಂದ ಧರ್ಮದೇಟು ಬೆಂಗಳೂರಿನಲ್ಲಿ ತನ್ನ ಸಂಬಂಧಿಯೊಬ್ಬರನ್ನೇ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಪಾಪಿ ಆಕೆಯಿಂದ ದೂರವಾಗಿದ್ದ. ತನ್ನ ಹಳೆ ಮದುವೆ ವಿಚಾರ ಮುಚ್ಚಿಟ್ಟು ಹಾಸನದಲ್ಲಿ ಹುಡುಗಿ ನೋಡಿ ಮದುವೆ ತಯಾರಿ ಮಾಡಿಕೊಂಡಿದ್ದ. ಮಧುವೆ ವಿಚಾರ ತಿಳಿದ ಈತನ ಮೊದಲ ಪತ್ನಿ ಹೇಗೋ ಕೊನೆ ಗಳಿಗೆಯಲ್ಲಿ ಹುಡುಗಿ ಮನೆಯವರನ್ನು ಸಂಪರ್ಕ ಮಾಡಿ ತನ್ನ ಮದುವೆ ಫೋಟೋ ಕಳಿಸಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮದುವೆ ನಿಲ್ಲಿಸಿದ್ದಾರೆ. ಬಳಿಕ ಮಧುಸೂದನಿಗೆ ಧರ್ಮದೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧುಸೂದನ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ, ಆತ ಹೇಳೋ ಪ್ರಕಾರ ಇನ್ನೂ ಕಾನೂನುಬದ್ದವಾಗಿ ಮೊದಲ ಹೆಂಡ್ತಿಗೆ ವಿಚ್ಛೇದನ ಕೊಟ್ಟಿಲ್ಲ, ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಇದರ ಮಧ್ಯೆಯೂ ಮೊದಲ ಮದ್ವೆ ವಿಚಾರ ಬಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದ. ದೂರದ ಹಾಸನದಲ್ಲಿ ಹುಡುಗಿ ಹುಡುಕಿದ್ದ, ಇಲ್ಲಿ ಹುಡುಗಿ ನೋಡಿದ್ರೆ ಹಳೆ ಮದುವೆ ವಿಚಾರ ಗೊತ್ತಾಗಲ್ಲ ಎಂದುಕೊಂಡಿದ್ದ. ಅಲ್ಲದೇ ಮದ್ವೆ ಮಾಡಿಕೊಂಡು ಮರುದಿನ ಅಂದ್ರೆ ನಾಳೆಯೇ(ಅ.29) ಮಾಲ್ಡೀವ್ಸ್ ಗೆ ಹೋಗಲು ಪ್ಲ್ಯಾನ್ ಮಾಡಿದ್ದ.
ಆರೋಪಿ ಮಧುಸೂದನ್ ನನ್ನ ವಶಕ್ಕೆ ಪಡೆದುಕೊಂಡಿರೋ ಬಡಾವಣೆ ಠಾಣೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಅಪ್ಪ ಮಗಳ ಬಾಳು ಉಳಿಯಿತು ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ ಇಂತಹ ಪಾಪಿಗಳಿಗೆ ಕಠಿಣ ಶೀಕ್ಷೆ ಆಗಲಿ ಎಂದು ಜನರು ಆಗ್ರಹಿಸಿದ್ದಾರೆ.
ವರದಿ: ಮಂಜುನಾಥ್.ಕೆ.ಬಿ ಟಿವಿ9 ಹಾಸನ.