ಬೆಳ್ಳಿ ಗೆದ್ದು ಬೆಳಗಿದ ಜಿಲ್ಲಾಧಿಕಾರಿ ಸುಹಾಸ್ ಹುಟ್ಟೂರು ಯಾವುದು ಗೊತ್ತಾ?

ಬೆಳ್ಳಿ ಗೆದ್ದು ಬೆಳಗಿದ ಜಿಲ್ಲಾಧಿಕಾರಿ ಸುಹಾಸ್ ಹುಟ್ಟೂರು ಯಾವುದು ಗೊತ್ತಾ?
ಬೆಳ್ಳಿ ಪದಕ ವಿಜೇತ ಸುಹಾಸ್

ಯುಪಿಎಸ್​​ಸಿ ಪಾಸ್ ಮಾಡಿ ಉತ್ತರ ಪ್ರದೇಶ ಕೇಡರ್ನ ಐಎಎಸ್ ಆಫಿಸರ್ ಆಗಿರುವ ಎಲ್.ವೈ.ಸುಹಾಸ್ ಬೆಳೆದಿದ್ದು ಮಲೆನಾಡ ತಪ್ಪಲು ಶಿವಮೊಗ್ಗ ಆದರೂ, ಅವರ ಮೂಲ ಊರು ಹಾಸನ ಎನ್ನೋದು ಹಲವರಿಗೆ ಗೊತ್ತಿಲ್ಲ.

TV9kannada Web Team

| Edited By: sandhya thejappa

Sep 05, 2021 | 4:07 PM

ಹಾಸನ: ಭಾರತದ ಪಾಲಿಗೆ ಇಂದು (ಸೆ.5) ಸಂಭ್ರಮದ ದಿನ. ಬ್ಯಾಡ್ಮಿಂಟನ್​ನಲ್ಲಿ (Badminton) ಬೆಳ್ಳಿ ಪದಕವನ್ನು ಪಡೆಯುವ ಮೂಲಕ ಕರುನಾಡಿನ ಸುಹಾಸ್ (Suhas) ಎಲ್ಲರ ಶಹಭಾಶ್ ಪಡೆದಿದ್ದಾರೆ. ಜಪಾನ್​ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್​ನಲ್ಲಿ ಇಂದು (ಸೆ.5) ನಡೆದ ಫೈನಲ್ ಮ್ಯಾಚ್​ನಲ್ಲಿ ಫ್ರಾನ್ಸ್​ನ ಸ್ಪರ್ಧಿ ವಿರುದ್ಧ ವೀರೋಚಿತ ಪರಾಜಯವಾದರೂ ಬೆಳ್ಳಿ ಪದಕಕ್ಕೆ ಮುತ್ತಿಟ್ಟು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಜಿಲ್ಲಾಧಿಕಾರಿಯಾಗಿ ಸಾಧನೆ ಮಾಡಿ ಇದೀಗ ಇಡೀ ಜಗತ್ತೆ ತಿರುಗಿ ನೋಡುವಂತೆ ಸಾಧನೆಯ ಶಿಖರವೇರಿದ ಸುಹಾಸ್ರವರ ಹುಟ್ಟೂರು ಯಾವುದು? ಅವರ ಹಿನ್ನೆಲೆ ಏನು? ಎಂಬ ಕುತೂಹಲ ಹಲವರಿಗಿದೆ.

ಹಾಸನಾಂಬೆ ತವರಿಗೆ ಹೆಮ್ಮೆಯ ಕುವರ ಸುಹಾಸ್ ಯುಪಿಎಸ್​​ಸಿ ಪಾಸ್ ಮಾಡಿ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಆಫಿಸರ್ ಆಗಿರುವ ಎಲ್.ವೈ.ಸುಹಾಸ್ ಬೆಳೆದಿದ್ದು ಮಲೆನಾಡ ತಪ್ಪಲು ಶಿವಮೊಗ್ಗ ಆದರೂ, ಅವರ ಮೂಲ ಊರು ಹಾಸನ ಎನ್ನೋದು ಹಲವರಿಗೆ ಗೊತ್ತಿಲ್ಲ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಲಾಳನಕೆರೆ, ಬೆಳ್ಳಿ ಪದಕ ಗೆದ್ದು ಬೆಳಗುತ್ತಿರುವ ಸುಹಾಸ್ರವರ ಮೂಲ ಊರು. ಅವರ ತಾತ ಕೃಷ್ಣ ಅಯ್ಯಂಗಾರ್ ಲಾಳನಕೆರೆನ ಗ್ರಾಮದಲ್ಲಿ ನೆಲೆಸಿದ್ದರಂತೆ. 1950ರ ಇಸವಿಯಲ್ಲಿ ಲಾಳನಕೆರೆನ ಗ್ರಾಮದಲ್ಲಿದ್ದ ನಾಲ್ಕು ಅಯ್ಯಂಗಾರ್ ಕುಟುಂಬಗಳು ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಬೇರೆ ಬೇರೆ ಕಡೆ ವಲಸೆ ಹೋದರು ಅಂತ ಹಿರಿಯರು ಹೇಳುತ್ತಾರೆ.

ಕೃಷ್ಣ ಅಯ್ಯಂಗಾರ್ ರವರ ಏಕೈಕ ಪುತ್ರ ಯತಿರಾಜ್ ಇಂಜಿನಿಯರಿಂಗ್ ಪದವಿಗಾಗಿ ಕುಟುಂಬದ ಜೊತೆ ಊರು ತೊರೆದು ಹಾಸನ ನಗರ ಸೇರಿಕೊಂಡಿದ್ದರು. ಶಿಕ್ಷಣ ಪಡೆದ ಬಳಿಕ ಸರ್ಕಾರಿ ಕೆಲಸಕ್ಕೆ ಸೇರಿದ ಯತಿರಾಜ್, ಕುಟುಂಬ ಜೊತೆ ರಾಜ್ಯದ ವಿವಿದೆಡೆ ನೆಲೆಸಿದ್ದರು. ಸುಹಾಸ್ರವರ ತಂದೆ ಯತಿರಾಜ್ ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿ, ಬಳಿಕ ಕರ್ತವ್ಯದ ನಿಮಿತ್ತ ವರ್ಗಾವಣೆ ಆದಂತೆ ರಾಜ್ಯದ ವಿವಿದೆಡೆ ನೆಲೆಸಿದ್ದ ಸುಹಾಸ್ ರವರ ಕುಟುಂಬ ಅಂತಿಮವಾಗಿ ಶಿವಮೊಗ್ಗದಲ್ಲಿ ನೆಲೆಯೂರಿದೆ.

ತಂದೆ ತಾಯಿ ಇಬ್ಬರ ಮೂಲವೂ ಹಾಸನ, ಸುಹಾಸ್ ಹುಟ್ಟಿದ್ದು ಹಾಸನದಲ್ಲಿ ಸುಹಾಸ್ ಕುಟುಂಬ ಊರಿನಿಂದ ದೂರವಾದರೂ ಕೂಡ ಅವರು ತಮ್ಮ ಹೆಸರಿನ ಜೊತೆಗೆ ಮೂಲ ನೆಲೆಯನ್ನ ಬಿಟ್ಟಿಲ್ಲ. ಲಾಳನಕೆರೆ ಯತಿರಾಜ್ ಸುಹಾಸ್ ಅರ್ಥಾತ್ ಎಲ್.ವೈ.ಸುಹಾಸ್ ಎಂದೇ ಹೆಸರಿಟ್ಟುಕೊಂಡಿದ್ದಾರೆ. ಸುಹಾಸ್ ತಮ್ಮ ಸಾಧನೆ ಮೂಲಕ ತಮ್ಮೂರಿನ ಹೆಸರನ್ನು ಜಗತ್ತಿಗೆ ಪರಿಚಯ ಮಾಡಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಊರು ತೊರೆದಿದ್ದ ಸುಹಾಸ್ ತಂದೆ ಯತಿರಾಜ್, ಬಳಿಕ ಸರ್ಕಾರಿ ಸೇವೆಗೆ ಸೇರಿ ವಿವಿದೆಡೆ ಕಾರ್ಯ ನಿರ್ವಹಿಸಿದ್ದಾರೆ. ಸುಹಾಸ್ ತಾಯಿ ಕೂಡ ಹಾಸನದವರೆ. ಹಾಸನದ ಹೇಮಾವತಿ ನಗರದಲ್ಲಿ ನೆಲೆಸಿದ್ದ ತಾಯಿ ಜಯಶ್ರಿ ಹಾಸನದ ಎ.ವಿ.ಕಾಂತಮ್ಮ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಯತಿರಾಜ್ ಜೊತೆಗೆ ಮದುವೆಯಾದ ಬಳಿಕ ವಿವಿಧ ಊರುಗಳಲ್ಲಿ ನೆಲೆಸಿದರು. ಮಕ್ಕಳ ಶಿಕ್ಷಣಕ್ಕಾಗಿ ಶಿವಮೊಗ್ಗದಲ್ಲಿ ನೆಲೆ ನಿಂತು ಮಕ್ಕಳು ಉನ್ನತ ಸಾಧನೆ ಮಾಡಲು ನೆರವಾದರು. ಸದ್ಯ ಸುಹಾಸ್ ಕುಟುಂಬದವರಾಗಲಿ, ಪರಿಚಿತರಾಗಿ ಯಾರೂ ಕೂಡ ಊರಿನಲ್ಲಿ ಇಲ್ಲ. ಆದರೂ ಅವರ ಮೂಲ ನೆಲೆ ಇನ್ನೂ ಅವರ ಹೆಸರಿನೊಂದಿಗೆ ಬೆಳಗುತ್ತಿದೆ.

ತಮ್ಮೂರ ಮಗನಿಗಾಗಿ ಸಂಭ್ರಮಿಸಿದ ಗ್ರಾಮಸ್ಥರು ಸುಹಾಸ್ರವರು ಟೋಕಿಯೊ ಒಲಂಪಿಕ್ಸ್​ನಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಹಲವರಿಗೆ ಅವರು ಹುಟ್ಟಿದ್ದು ಹಾಸನ ಎಂಬುವುದು ಗೊತ್ತಾಯಿತು. ಹೀಗಾಗಿ ಇಂದು ಬೆಳಿಗ್ಗೆ ಇಡೀ ಲಾಳನಕೆರೆ ಗ್ರಾಮದಲ್ಲಿ ಸಂಭ್ರಮ ಮನೆಮಾಡಿತ್ತು. ತಮ್ಮೂರ ಹುಡುಗ ಜಿಲ್ಲಾಧಿಕಾರಿ ಆಗಿದ್ದಾರೆ. ಅಷ್ಟೇ ಅಲ್ಲದೇ ಒಲಂಪಿಕ್​ನಲ್ಲಿ ಬೆಳ್ಳಿ ಪದಕ ಗೆದ್ದ ಕಾರಣ ಊರಿನವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಈಗ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು, ಸುಹಾಸ್ರವರು ದೇಶಕ್ಕೆ ಕೀರ್ತಿ ತರುವ ಮೂಲಕ ನಮ್ಮೂರಿನ ಹೆಸರನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ. ಅವರನ್ನ ನಮ್ಮೂರಿಗೆ ಕರೆಸಬೇಕು. ಅವರಿಗೊಂದು ಪುಟ್ಟ ಸನ್ಮಾನ ಮಾಡಬೇಕು. ಇದು ನಮ್ಮೂರ ಮಗನಿಗೆ ನಾವು ಕೊಡುವ ಕೊಡುಗೆ ಅಂತ ಹೇಳಿದರು.

ವರದಿ: ಮಂಜುನಾಥ್ ಕೆ.ಬಿ

ಇದನ್ನೂ ಓದಿ

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ: ಬ್ಯಾಡ್ಮಿಂಟನ್​ನಲ್ಲಿ ಐಎಎಸ್ ಅಧಿಕಾರಿ ಸುಹಾಸ್​ಗೆ ಪದಕ

ಉತ್ತರ ಪ್ರದೇಶದಲ್ಲಿರುವ ಕನ್ನಡದ ಐಎಎಸ್ ಅಧಿಕಾರಿ ಸುಹಾಸ್ ಟೊಕಿಯೋ ಒಲಂಪಿಕ್ಸ್​​​​ನಲ್ಲಿ ರವಿವಾರ ಇತಿಹಾಸ ಸೃಷ್ಟಿಸಲಿದ್ದಾರೆ

(Silver Medalist Suhas Birth Place is Hassan)

Follow us on

Related Stories

Most Read Stories

Click on your DTH Provider to Add TV9 Kannada