ಕಾಡಾನೆಗಳ ಕಾಟಕ್ಕೆ ಬೆಚ್ಚಿದ ಬೇಲೂರು ಮಂದಿ: ಒಂಟಿ ಸಲಗದ ದಾಳಿಗೆ ದನ ಮೇಯಿಸಲು ಹೋಗಿದ್ದ ಮಹಿಳೆ ಬಲಿ
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಶಾವರ ಬಳಿ ದನ ಮೇಯಿಸಲು ತೆರಳಿದ್ದ ಮಹಿಳೆ ಒಂಟಿ ಸಲಗದ ದಾಳಿಗೆ ಬಲಿಯಾಗಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕೋರಿ ಗ್ರಾಮಸ್ಥರು ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಇವೆಲ್ಲದರ ನಡುವೆ ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹಾಸನ, ನವೆಂಬರ್ 15: ಕಾಡಾನೆ ದಾಳಿಗೆ ದನ ಮೇಯಿಸಲು ತೆರಳಿದ್ದ ಮಹಿಳೆ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ನಡೆದಿದೆ. ಚೌಡನಳ್ಳಿಯ ಜಯಮ್ಮ(48) ಮೃತ ದುರ್ದೈವಿಯಾಗಿದ್ದು, ಒಂದು ವಾರದಿಂದ ಗ್ರಾಮದ ಬಳಿ ಕಾಡಾನೆಗಳು ಬೀಡುಬಿಟ್ಟಿದ್ದವು. ಆ ಪೈಕಿ ಗುಂಪಿನಿಂದ ಬೇರ್ಟಪಟ್ಟಿರುವ ಒಂಟಿಸಲಗ ಜಯಮ್ಮ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಿಳೆಯ ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ
ಇನ್ನು ಕಾಡಾನೆ ದಾಳಿಗೆ ಮಹಿಳೆ ಜಯಮ್ಮ ಬಲಿಯಾದ ಬೆನ್ನಲ್ಲೇ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಶವ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಘಟನೆ ನಡೆದು 12 ಗಂಟೆಗಳಾದರು ಸ್ಥಳೀಯ ಶಾಸಕರೂ ಬಂದಿಲ್ಲ. ಪ್ರತಿಬಾರಿ ಸಾವು ಆದಾಗ ಅಧಿಕಾರಿಗಳು ಚೆಕ್ ಕೊಟ್ಟು ಹೋಗ್ತಾರೆ. ರೈತರು ನಿತ್ಯ ಆತಂಕದಲ್ಲಿ ದಿನ ದೂಡುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಲೇ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವ: ಹುಂಡಿ ಹಣ, ಟಿಕೆಟ್, ಪ್ರಸಾದ ಸೇರಿ ದೇಗುಲಕ್ಕೆ ಒಟ್ಟು 29.55 ಕೋಟಿ ಆದಾಯ
ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷ
ಇವೆಲ್ಲದರ ನಡುವೆ ಚೌಡನಹಳ್ಳಿಯ ಸಮೀಪದಲ್ಲೇ 17 ಕಾಡಾನೆಗಳು ಪ್ರತ್ಯಕ್ಷವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಹಿಳೆ ಬಲಿ ಪಡೆದಿದ್ದ ಒಂಟಿ ಸಲಗ ಮರಳಿ ಗುಂಪು ಸೇರಿಕೊಂಡಿದ್ದು, ಕಾಡಾನೆಗಳ ಸಂಚಾರ ಬಗ್ಗೆ ಚೌಡನಹಳ್ಳಿ, ಕುಶಾವರ, ಬಕ್ರವಳ್ಳಿ ಭಾಗದ ಜನರಿಗೆ ಆನೆ ಕಾರ್ಯ ಪಡೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ನಿತ್ಯ ಕಾಡಾನೆಗಳ ಸಂಚಾರದಿಂದ ಆತಂಕಗೊಂಡಿರುವ ಗ್ರಾಮಸ್ಥರು ಘಟನೆಯಿಂದ ಮತ್ತಷ್ಟು ಭಯಭೀತರಾಗಿದ್ದು, ಇದೆಕ್ಕೆಲ್ಲ ಯಾವಾಗ ಮುಕ್ತಿ ಸಿಗಲಿದೆ ಎಂದು ಅರಣ್ಯ ಇಲಾಖೆಯನ್ನು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




