ಹಾವೇರಿ: ಚರಂಡಿಯಲ್ಲಿ ಬಿದ್ದು ಬಾಲಕ ಸಾವು, ಇಬ್ಬರು ಅಧಿಕಾರಿಗಳು ಅಮಾನತು
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮೌಖಿಕ ಆದೇಶ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ಡಿಸಿ ಅಮಾನತು ಮಾಡಿದ್ದಾರೆ. ಚರಂಡಿ ಕಾಲುವೆಯ ಮೇಲಿನ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗಿದ್ದು, ತೆರೆದ ಚರಂಡಿ ಕಾಲುವೆಗೆ ಬಿದ್ದು ನಿವೇದನ್ ಬಸವರಾಜ ಗುಡಗೇರಿ ಮೃತಪಟ್ಟಿದ್ದಾನೆ.
ಹಾವೇರಿ, ಅಕ್ಟೋಬರ್ 17: ನಗರದಲ್ಲಿ ಚರಂಡಿಯಲ್ಲಿ ಬಿದ್ದು ಬಾಲಕ (boy) ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆರ್.ಮುಂಜೋಜಿ ಮತ್ತು ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಅವರನ್ನು ಅಮಾನತು ಮಾಡಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮೌಖಿಕ ಆದೇಶ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ಡಿಸಿ ಅಮಾನತು ಮಾಡಿದ್ದಾರೆ. ಚರಂಡಿ ಕಾಲುವೆಯ ಮೇಲಿನ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗಿದ್ದು, ತೆರೆದ ಚರಂಡಿ ಕಾಲುವೆಗೆ ಬಿದ್ದು ನಿವೇದನ್ ಬಸವರಾಜ ಗುಡಗೇರಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಹಾವೇರಿ: ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ಬಾಲಕ ಸಾವು
ಜಿಲ್ಲೆಯಲ್ಲಿ ಹಲವೆಡೆ ರಾತ್ರಿ ಧಾರಾಕಾರ ಮಳೆ ಸುರಿದೆ. ಈ ವೇಳೆ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ರಸ್ತೆ ಕಾಣದೆ ಚರಂಡಿಯಲ್ಲಿ 12 ವರ್ಷದ ಬಾಲಕ ನಿವೇದನ್ ಬಸವರಾಜ ಗುಡಗೇರಿ ಕೊಚ್ಚಿ ಹೋಗಿದ್ದ. ಬಳಿಕ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಚರಂಡಿಯಲ್ಲಿ ಬಾಲಕನ ಪತ್ತೆಗಾಗಿ ಶೋಧ ಕಾರ್ಯ ಮಾಡಿದ್ದರು. ಸತತ ಎರಡು ಗಂಟೆಗಳ ಕಾರ್ಯಚರಣೆ ಬಳಿಕ ಬಾಲಕ ಪತ್ತೆ ಆಗಿದ್ದ. ನಂತರ ಹಾವೇರಿ ಜಿಲ್ಲಾಸ್ಪತ್ರೆಗೆ ನಿವೇದನ್ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.
ಡಿಸಿ ವಿಜಯಮಹಾಂತೇಶ್ ದಾನಮ್ಮನವರ್ ಹೇಳಿದ್ದೇನು?
ಬಾಲಕ ಸಾವಿನ ಬಳಿಕ ಟಿವಿ9ಗೆ ಹಾವೇರಿ ಡಿಸಿ ವಿಜಯಮಹಾಂತೇಶ್ ದಾನಮ್ಮನವರ್ ಪ್ರತಿಕ್ರಿಯಿಸಿದ್ದು, ನಿರಂತರ ಮಳೆ ನಡುವೆ ಆಕಸ್ಮಿಕವಾಗಿ ಬಾಲಕ ಚರಂಡಿಗೆ ಬಿದ್ದಿದ್ದ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೆಳಗ್ಗೆ 11.15ಕ್ಕೆ ಚರಂಡಿಯಲ್ಲಿ ಬಾಲಕನನ್ನು ಪತ್ತೆ ಹಚ್ಚಲಾಗಿತ್ತು. ಅಧಿಕಾರಿಗಳ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಂತಹ ಘಟನೆ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.
ಇನ್ನು ಹಾವೇರಿಯ ತೋಟದ ಎಲ್ಲಾಪುರ ಬಳಿಯ ರುದ್ರಭೂಮಿಯಲ್ಲಿ ನಿವೇದನ್ ಅಂತ್ಯಸಂಸ್ಕಾರವನ್ನು ಮಾಡಲಾಗಿದೆ. ಕುರುಬ ಸಮುದಾಯದ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ. ಬಾಲಕ ನಿವೇದನ್ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.