ಸಾವಯವ ಕೃಷಿ ಮೂಲಕ ಮಾವು ಬೆಳೆಯಲ್ಲಿ ಯಶಸ್ಸು ಕಂಡ ಹಾವೇರಿ ರೈತ

ಪಿತ್ರಾರ್ಜಿತವಾಗಿ ತನಗೆ ಬಂದಿದ್ದ ಏಳು ಎಕರೆ ಜಮೀನಿನಲ್ಲಿ ತೋಟಗಾರಿಕೆ ಕೃಷಿ ಮಾಡುವ ಮನಸ್ಸು ಮಾಡಿದ ನಾಗಪ್ಪ. ಸಪೋಟಾ ಬೆಳೆ ಬೆಳೆಯುವ ಆಸೆ ಹೊಂದಿದ್ದರು. ಆದರೆ ಗ್ರಾಮದ ಕೆಲವರು ಮಾವು ಬೆಳೆಯುವಂತೆ ಸಲಹೆ ನೀಡಿದ್ದು, ನಂತರ ನಾಗಪ್ಪ ಮಾವು ಬೆಳೆಯಲು ಶುರು ಮಾಡಿದ್ದಾರೆ.

ಸಾವಯವ ಕೃಷಿ ಮೂಲಕ ಮಾವು ಬೆಳೆಯಲ್ಲಿ ಯಶಸ್ಸು ಕಂಡ ಹಾವೇರಿ ರೈತ
ಮಾವು ಬೆಳೆ
Follow us
preethi shettigar
| Updated By: ganapathi bhat

Updated on: Apr 13, 2021 | 5:24 PM

ಹಾವೇರಿ: ಕೆಲವು ವರ್ಷಗಳ ಹಿಂದೆ ಕುರಿ ಕಾಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೃಷಿ ಮಾಡುವಲ್ಲಿ ಮುಂದಾಗಿದ್ದು, ಸಾವಯವ ಕೃಷಿಯ ಮೂಲಕ ಮಾವು ಬೆಳೆಯುತ್ತಿದ್ದಾರೆ. ಸಂಪೂರ್ಣ ಸಾವಯವ ಕೃಷಿಯ ಮೂಲಕ ಈ ರೈತನ ತೋಟದಲ್ಲಿ ಬೆಳೆದ ಮಾವಿನ ಹಣ್ಣಿಗೆ ಸದ್ಯ ಎಲ್ಲೆಡೆಯಿಂದ ಬೇಡಿಕೆ ಸಿಕ್ಕಿದೆ. ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ನಿವಾಸಿ ನಾಗಪ್ಪ ಮಾವು ಬೆಳೆದು ಯಶಸ್ಸು ಕಂಡಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಕುರಿಗಳನ್ನು ಕಾಯುತ್ತಿದ್ದ ನಾಗಪ್ಪ ಆ ಕೆಲಸದಲ್ಲೇ ಜೀವನ ಸಾಗಿಸುತ್ತಿದ್ದರು. ಆದರೆ ಕುರಿಗಳು ಯಾವುದೋ ರೋಗ ಬಂದು ಒಂದೊಂದಾಗಿ ಸಾವನ್ನಪ್ಪುವುದಕ್ಕೆ ಶುರು ಮಾಡಿದವು. ಆಗ ಪಿತ್ರಾರ್ಜಿತವಾಗಿ ತನಗೆ ಬಂದಿದ್ದ ಏಳು ಎಕರೆ ಜಮೀನಿನಲ್ಲಿ ತೋಟಗಾರಿಕೆ ಕೃಷಿ ಮಾಡುವ ಮನಸ್ಸು ಮಾಡಿದ ನಾಗಪ್ಪ, ಸಪೋಟಾ ಬೆಳೆ ಬೆಳೆಯುವ ಆಸೆ ಹೊಂದಿದ್ದರು. ಆದರೆ ಗ್ರಾಮದ ಕೆಲವರು ಮಾವು ಬೆಳೆಯುವಂತೆ ಸಲಹೆ ನೀಡಿದ್ದು, ನಂತರ ನಾಗಪ್ಪ ಮಾವು ಬೆಳೆಯಲು ಶುರು ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಾಗಪ್ಪ ಅವರ ತೋಟದಲ್ಲಿ ಮಾವು ಬೆಳೆ ಬೆಳೆಯುತ್ತಿದ್ದಾರೆ. ಪ್ರತಿ ಎಕರೆಗೆ 10ರಿಂದ 12 ಟನ್ ಮಾವು ಬೆಳೆಯುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಹೂವು ಆಗುವ ಸಮಯದಲ್ಲಿ ಮಳೆ ಬಂದಿದ್ದರಿಂದ ಇಳುವರಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಎಕರೆಗೆ ಎಂಟರಿಂದ ಹತ್ತು ಟನ್‌ನಷ್ಟು ಮಾವು ಇಳುವರಿ ಇದೆ. ಇವರ ತೋಟದಲ್ಲಿ ಬೆಳೆದ ಸಾವಯವ ಮಾವಿಗೆ ಹೆಚ್ಚಿನ ಬೇಡಿಕೆ ಇದೆ. ರಾಜಸ್ತಾನ, ಬೆಂಗಳೂರು, ದಾವಣಗೆರೆ, ಹುಬ್ಬಳಿ-ಧಾರವಾಡ ಸೇರಿದಂತೆ ಅನೇಕ ಕಡೆಗಳಿಂದ ಜನರು ಬಂದು ಇವರ ತೋಟದ ಮಾವು ಖರೀದಿ ಮಾಡಿಕೊಂಡು ಹೋಗುತ್ತಾರೆ ಎನ್ನವುದು ವಿಶೇಷ.

ಮಾವಿನ ಮರದ ಕೆಳಗೆ ಸೆಣಬು ಬೆಳೆ ಇನ್ನೊಂದು ವಿಶೇಷ ಎಂದರೆ ಇವರ ತೋಟದಲ್ಲಿ ಮಾವಿನ ಮರದ ಕೆಳಗೆ ಸೆಣಬು ಬೆಳೆ ಬೆಳೆಯುತ್ತಾರೆ. ಬೆಳೆದ ಸೆಣಬು ಬೆಳೆಯನ್ನು ರೋಟರ್ ಹೊಡೆದು ಮಾವಿನ ಮರದ ಕೆಳಗೆ ಹಾಕುತ್ತಾರೆ. ಅದು ಮಾವಿಗೆ ಉತ್ತಮ ಗೊಬ್ಬರವಾಗುತ್ತದೆ. ಅದರ ಜೊತೆಗೆ ಎರೆಹುಳು ಗೊಬ್ಬರ, ಕುರಿ ಗೊಬ್ಬರವನ್ನ ತೋಟಕ್ಕೆ ಹಾಕುತ್ತಾರೆ ಹೀಗಾಗಿ ಮಾವಿನ ಮರಗಳು ವರ್ಷದಿಂದ ವರ್ಷಕ್ಕೆ ಭರಪೂರ ಫಸಲು ನೀಡುತ್ತಿದೆ.

ಕಾಯಿ ಆಗುವ ಸಮಯದಲ್ಲಿ ಹುಳು ಬಾರದಂತೆ ಸಾವಯವ ಔಷಧಿಯ ಡಬ್ಬಿಗಳನ್ನ ಎರಡು ಮೂರು ಮರಗಳಿಗೆ ಹಾಕಲಾಗುತ್ತದೆ. ಮರಕ್ಕೆ ಬರುವ ಹುಳುಗಳು ಡಬ್ಬಿಯಲ್ಲಿ ಬಿದ್ದು ಸಾಯುತ್ತವೆ. ಹೀಗಾಗಿ ತೋಟದಲ್ಲಿನ ಮಾವಿಗೆ ರೋಗ ತುಂಬಾ ಕಡಿಮೆ. ಆದರೆ ಈ ವರ್ಷ ಸ್ವಲ್ಪ ಪ್ರಮಾಣದಲ್ಲಿ ಇಳುವರಿ ಕಡಿಮೆ ಆಗಿದೆ ಎಂದು ಮಾವು ಬೆಳೆಗಾರರಾದ ನಾಗಪ್ಪ ಮುದ್ದಿ ಹೇಳಿದ್ದಾರೆ.

nagappa

ರೈತ ನಾಗಪ್ಪ

ಇನ್ನು ಇವರ ತೋಟದಲ್ಲಿ ಬೆಳೆದ ಮಾವನ್ನು ಹೋಲ್ ಸೇಲ್ ಆಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುವುದಿಲ್ಲ. ಕಾಯಿ ಹರಿದ ನಂತರ ಭತ್ತದ ಹುಲ್ಲಿನಲ್ಲಿ ಹಾಕಿ ಹಣ್ಣು ಮಾಡುತ್ತಾರೆ. ನಂತರ ಹಾವೇರಿ ನಗರದ ಅಕ್ಕಿಪೇಟೆಯಲ್ಲಿರುವ ನಾಗಪ್ಪನವರ ಗೋದಾಮಿನಲ್ಲಿ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಅನೇಕ ಜನರು ತೋಟಕ್ಕೆ ಬಂದು ತೋಟದಲ್ಲಿ ಕಾಯಿಗಳನ್ನ ಖರೀದಿಸಿ ಬಾಕ್ಸ್ ಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಯಾವುದೇ ಕೆಮಿಕಲ್ ಬಳಸದೆ ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆ ಬೆಳೆದು, ಹಣ್ಣು ಮಾಡುತ್ತಾರೆ. ಹೀಗಾಗಿ ನಾಗಪ್ಪ ಅವರ ತೋಟದ ಮಾವು ಹೆಚ್ಚು ರುಚಿಕರವಾಗಿದೆ. ಮಾವು ಬೆಳೆಯಿಂದಲೇ ಈಗಾಗಲೇ ಸಾಕಷ್ಟು ಆದಾಯವನ್ನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:

ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು

80 ಕಿ.ಮೀ ಪ್ರಯಾಣ ಬೆಳೆಸಿ ಮಾಡಿದ ಕೃಷಿಯಿಂದ ಲಕ್ಷಗಟ್ಟಲೆ ಆದಾಯಗಳಿಸಿದ ನಿವೃತ್ತ ಅಧಿಕಾರಿ

(Haveri Farmer finds his success in organic farming after he say good bye sheep farming job)