ತಾಯಿಯ ಮುಖ ನೋಡದೆ ಮಕ್ಕಳ ಕಣ್ಣೀರು; ಹಾವೇರಿ ಶವಗಾರ ಸಿಬ್ಬಂದಿಯ ಯಡವಟ್ಟಿನಿಂದ ಮೃತ ದೇಹ ಅದಲು ಬದಲು

ಬೆಳಿಗ್ಗೆ ತಡಬಡಿಸಿ ಮಕ್ಕಳು ತಾಯಿಯ ಮುಖ ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದರೆ ಅಲ್ಲಿ ತಾಯಿಯ ಶವ ಇರಲಿಲ್ಲ. ತಾಯಿಯ ಶವದ ಬಗ್ಗೆ ಶವಾಗಾರದ ಸಿಬ್ಬಂದಿಗಳನ್ನು ವಿಚಾರಿಸಿದಾಗ ಅದಾಗಲೆ ಇವರ ತಾಯಿಯ ಶವದ ಅಂತ್ಯಕ್ರಿಯೆ ನಡೆದಿದೆ ಎನ್ನುವ ಮಾಹಿತಿ ಗೊತ್ತಾಗಿದೆ.

ತಾಯಿಯ ಮುಖ ನೋಡದೆ ಮಕ್ಕಳ ಕಣ್ಣೀರು; ಹಾವೇರಿ ಶವಗಾರ ಸಿಬ್ಬಂದಿಯ ಯಡವಟ್ಟಿನಿಂದ ಮೃತ ದೇಹ ಅದಲು ಬದಲು
ಸಾಂದರ್ಭಿಕ ಚಿತ್ರ
Follow us
preethi shettigar
|

Updated on:May 11, 2021 | 3:45 PM

ಹಾವೇರಿ: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ಹಾವೇರಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಕಳೆದ‌ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ತಾಯಿಯನ್ನ ಖಾಸಗಿ ಆಸ್ಪತ್ರೆಗೆ ತೋರಿಸಿ, ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಆದರೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಆಕೆ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿಷಯ ತಿಳಿದ ಮಕ್ಕಳು ತಾಯಿ ಮುಖ‌ ನೋಡಿ, ಅಂತ್ಯಕ್ರಿಯೆ ಮಾಡಬೇಕು ಎಂದು ಆಸ್ಪತ್ರೆಗೆ ದೌಡಾಯಿಸಿದ್ದರು ಆದರೆ ತಾಯಿಯ ಮುಖವನ್ನು ಕೊನೆಯ ಬಾರಿ ನೋಡುವ ಅವಕಾಶವು ಮಕ್ಕಳಿಗೆ ತಪ್ಪಿ ಹೋಗಿದೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ನೇಶ್ವಿ ಗ್ರಾಮದ 64 ವರ್ಷದ ಮಹಿಳೆಗೆ ಮೇ 6, 2021ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಮಕ್ಕಳು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಗೆ ತೋರಿಸಿ, ನಂತರ ಜಿಲ್ಲಾಸ್ಪತ್ರೆಗೆ ತಂದು ದಾಖಲು ಮಾಡಿದ್ದರು. ಅಷ್ಟೊತ್ತಿಗಾಗಲೇ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆಕೆಯನ್ನ ಜಿಲ್ಲಾಸ್ಪತ್ರೆಯ ಕೊವಿಡ್19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊವಿಡ್ ಆಸ್ಪತ್ರೆಯಲ್ಲಿ ಬೇರೆ ಯಾರಿಗೂ ಅವಕಾಶ ಇಲ್ಲದ್ದರಿಂದ ತಾಯಿಯನ್ನ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಆಕೆಯ ಮಕ್ಕಳು ಊರಿಗೆ ಹೋಗಿದ್ದರು. ಆದರೆ ನಿನ್ನೆ ತಡರಾತ್ರಿ ಮಕ್ಕಳ ಮೊಬೈಲ್​ಗೆ ತಾಯಿ ಮೃತಪಟ್ಟಿರುವ ಸುದ್ದಿ ಬಂದಿದೆ.

ಬೆಳಿಗ್ಗೆ ತಡಬಡಿಸಿ ಮಕ್ಕಳು ತಾಯಿಯ ಮುಖ ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದರೆ ಅಲ್ಲಿ ತಾಯಿಯ ಶವ ಇರಲಿಲ್ಲ. ತಾಯಿಯ ಶವದ ಬಗ್ಗೆ ಶವಾಗಾರದ ಸಿಬ್ಬಂದಿಗಳನ್ನು ವಿಚಾರಿಸಿದಾಗ ಅದಾಗಲೆ ಇವರ ತಾಯಿಯ ಶವದ ಅಂತ್ಯಕ್ರಿಯೆ ನಡೆದಿದೆ ಎನ್ನುವ ಮಾಹಿತಿ ಗೊತ್ತಾಗಿದೆ.

ಇಷ್ಟುಕ್ಕೂ ನಿನ್ನೆ ರಾತ್ರಿ ಈ ಮಹಿಳೆ ಮೃತಪಟ್ಟ ಸಮಯದ ಆಸುಪಾಸಿನಲ್ಲಿ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ 60ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಶವವನ್ನೂ 64 ವರ್ಷದ ಮಹಿಳೆಯ ಶವದ ಜೊತೆಗೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲೇ ಇಡಲಾಗಿತ್ತು. ಬೆಳಿಗ್ಗೆ ಆಲದಕಟ್ಟಿ ಗ್ರಾಮದ ಮೃತ ಮಹಿಳೆಯ ಮಕ್ಕಳು ಹಾಗೂ ಸಂಬಂಧಿಕರು ತಮ್ಮ ತಾಯಿಯ ಶವ ಒಯ್ಯಲು ಆಸ್ಪತ್ರೆಗೆ ಬಂದಿದ್ದಾರೆ. ಆಗ ಶವಾಗಾರದ ಸಿಬ್ಬಂದಿ ಅವರ ತಾಯಿಯ ಶವದ ಬದಲು ಮೂವರು ಮಕ್ಕಳ ತಾಯಿಯ ಶವ ನೀಡಿದ್ದಾರೆ.

ಪಿಪಿಇ ಕಿಟ್ ಅದು ಇದು ಅಂತಾ ಹಾಕಿ ಪ್ಯಾಕ್ ಮಾಡಿದ್ದರಿಂದ ಆಲದಕಟ್ಟಿ ಗ್ರಾಮದವರು ಶವ ತಮ್ಮ ತಾಯಿಯದೆ ಅಂತಾ ಊರಿಗೆ ಒಯ್ದು ದಫನ್ ಮಾಡಿದ್ದಾರೆ. ಆದರೆ 64 ವರ್ಷದ ಮಹಿಳೆಯ ಮಕ್ಕಳು ತಮ್ಮ ತಾಯಿಯ ಶವ ಹುಡುಕಿದಾಗ ಆಲದಕಟ್ಟಿ ಗ್ರಾಮದವರು ಒಯ್ದಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಮೃತ ಮಹಿಳೆಯ ಸಂಬಂಧಿಕರು ನಮಗೆ ನಮ್ಮ ತಾಯಿಯ ಶವ ಬೇಕು, ನಾವು ನಮ್ಮ ತಾಯಿಯ ಮುಖ ನೋಡಬೇಕು ಎಂದು ಶವಾಗಾರದ ಬಳಿ ಕಣ್ಣೀರು ಹಾಕುತ್ತಾ ಕಾದು ಕುಳಿತಿದ್ದರು. ಇದನ್ನ ಗಮನಿಸಿದ ಶವಾಗಾರದ ಸಿಬ್ಬಂದಿ ಪೊಲೀಸರು ಹಾಗೂ ಅಧಿಕಾರಿಗಳ ನೆರವಿನೊಂದಿಗೆ ದಫನ್ ಮಾಡಿದ್ದ ಮಹಿಳೆಯ ಶವವನ್ನ ವಾಪಸ್ ತೆಗೆದು ಮಕ್ಕಳಿಗೆ ಹಸ್ತಾಂತರ ಮಾಡೋದಾಗಿ ಹೇಳಿ ಹೋಗಿದ್ದಾರೆ.

ಆಲದಕಟ್ಟಿ ಗ್ರಾಮದವರು ಒಯ್ದು ದಫನ್ ಮಾಡಿದ್ದು 64 ವರ್ಷದ ಮಹಿಳೆಯ ಶವ. ಇನ್ನು 60 ವರ್ಷದ ಶವ ಶವಾಗಾರದ‌ ಮುಂದೆ ನಿಂತಿರೋ ವಾಹನದಲ್ಲಿ ಹಾಕಿ ನಿಲ್ಲಿಸಲಾಗಿದೆ. ಆದರೆ ಅದಾಗ್ಲೆ ಅಂತ್ಯಕ್ರಿಯೆ ನೆರವೇರಿಸಿರುವ ಆಲದಕಟ್ಟಿಯ ಮಹಿಳೆಯ ಸಂಬಂಧಿಕರು ಹಾಗೂ ಗ್ರಾಮಸ್ಥರು ದಫನ್ ಮಾಡಿರುವ ಶವವನ್ನ ಮರಳಿ ತೆಗೆಯೋದು ಬೇಡ ಅಂತಾ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ನಮಗೆ ತಾಯಿಯ ಶವ ಬೇಕು, ನಾವು ನಮ್ಮ ತಾಯಿಯ ಮುಖ ನೋಡಿ ಅಂತಿಮ ದರ್ಶನ ಪಡೆಯಬೇಕು ಅಂತಾ ಮಕ್ಕಳು ಶವಾಗಾರದ ಬಳಿಯೆ ಕೂತಿದ್ದಾರೆ. ಪೊಲೀಸರು ಹಾಗೂ ಶವಾಗಾರದ ಸಿಬ್ಬಂದಿ ಎರಡೂ ಕುಟುಂಬಗಳ ಮನವೊಲಿಸೋ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದ್ರೆ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರಲಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:

ಚಿಕ್ಕಬಳ್ಳಾಪುರದ ಸ್ಮಶಾನದಲ್ಲಿ ಶವ ಬಿಸಾಡಿ ಅಮಾನವೀಯತೆ; ಸ್ಥಳೀಯರಿಗೆ ಕೊರೊನಾ ಹರಡುವ ಆತಂಕ

Published On - 3:07 pm, Tue, 11 May 21