ಶಾರ್ಟ್ ಸರ್ಕ್ಯೂಟ್ನಿಂದ 50 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ; 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಬ್ಬು ನಾಶ
ಜಮೀನು ಬಳಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿ ಅವಘಡ ಸಂಭವಿಸಿದ್ದು, 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಬ್ಬು ನಾಶವಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಶಾರ್ಟ್ ಸರ್ಕ್ಯೂಟ್ನಿಂದ 50 ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹದಿನಾರು ರೈತರಿಗೆ ಸೇರಿದ 50 ಎಕರೆ ಕಬ್ಬು ನಾಶವಾಗಿದೆ. ಜಮೀನು ಬಳಿ ಶಾರ್ಟ್ ಸರ್ಕ್ಯೂಟ್ನಿಂದಾಗಿ(short circuit) ಅಗ್ನಿ ಅವಘಡ ಸಂಭವಿಸಿದ್ದು, 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಬ್ಬು(sugarcane) ನಾಶವಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ (Fire) ನಂದಿಸಿದ್ದಾರೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಬಂಧನ; ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು
ಗೂಂಡಾ ಕಾಯ್ದೆಯಡಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಶ್ರೀನಿವಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಳೆಕಾಯಿ ಶ್ರೀನಿವಾಸ್ ಅಲಿಯಾಸ್ ಮಚ್ ಸೀನನ್ನು 10 ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆಯ ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಶಾರ್ಟ್ ಸರ್ಕ್ಯೂಟ್ನಿಂದ 50 ಎಕರೆ ಕಬ್ಬು ಬೆಂಕಿಗಾಹುತಿ
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ 50 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಜಮೀನುಗಳ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಜೋತು ಬಿದ್ದಿರುವ ವಿದ್ಯುತ್ ತಂತಿ ಸರಿಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೇ ಸೂಕ್ತ ಪರಿಹಾರ ನೀಡುವಂತೆ ಗ್ರಾಮದ ಜನರು ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ತಹಶೀಲ್ದಾರ್, ಹೆಸ್ಕಾಂ ಎಇಇ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಧಾರವಾಡ: ಧಾರವಾಡದ ಮಾಜಿ ಕಾರ್ಪೋರೇಟರ್‌ಗೆ ನ್ಯಾಯಾಲಯದ ಎಚ್ಚರಿಕೆ
ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರನಿಗೆ ಹಣ ನೀಡುವಂತೆ ಮಾಜಿ ಕಾರ್ಪೊರೇಟರ್ ಶ್ರೀಕಾಂತ ಜಮನಾಳಗೆ ಕೋರ್ಟ್ ಆದೇಶ ನೀಡಿದೆ. ದೂರುದಾರ ಚಂದ್ರಶೇಖರ ಮೇಸ್ತ್ರಿಗೆ 2.14 ಲಕ್ಷ ರೂಪಾಯಿ ನೀಡುವಂತೆ ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ತಪ್ಪಿದರೆ ಆರು ತಿಂಗಳ ಶಿಕ್ಷೆ ಅನುಭವಿಸಬೇಕಾದಿತು ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶೆ ವಿಜಯಲಕ್ಷ್ಮೀ ಗಾನಾಪುರ ಎಚ್ಚರಿಕೆ ನೀಡಿದ್ದಾರೆ. ವ್ಯವಹಾರವೊಂದಕ್ಕೆ ಸಂಬಂಧಸಿದಂತೆ ಚೆಕ್ ನೀಡಿದ್ದ ಜಮನಾಳ, ಖಾತೆಯಲ್ಲಿ ಹಣ ಇಲ್ಲದ್ದಕ್ಕೆ ಚೆಕ್ ಬೌನ್ಸ್ ಆಗಿದೆ. ಈ ಬಗ್ಗೆ ಕೇಳಿದಾಗ ಸ್ಪಂದಿಸದ ಹಿನ್ನೆಲೆ ಮೇಸ್ತ್ರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಂಗಳೂರು: ದೇವನಹಳ್ಳಿಯ ಮನೆಯೊಂದರಲ್ಲಿ ಇಬ್ಬರು ನೇಣಿಗೆ ಶರಣು
ದೇವನಹಳ್ಳಿಯ ಮನೆಯೊಂದರಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ರಾಯಚೂರು ಮೂಲದ ಚಾಲಕ ಬಸವರಾಜ್, ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಗೆ ಮನೆ ಮಾಲೀಕರೊಬ್ಬರು ಒಂದು ಮಾಹಿತಿ ಕೊಡುತ್ತಾರೆ. ಆ ಮಾಹಿತಿ ಮೇರೆಗೆ ಮನೆ ಬಳಿ ಹೋಗಿ ಪರಿಶೀಲನೆ ನಡೆಸಿದಾಗ, ಒಬ್ಬ ಪುರುಷ ಹಾಗೂ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರೋದು ಕಂಡು ಬಂದಿದೆ. ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಪರಿಶೀಲನೆ ಮಾಡಿದಾಗ ಮೃತ ವ್ಯಕ್ತಿ ಬಸವರಾಜ್ ಹಾಗೂ ಜ್ಯೋತಿ ಎಂಬುವುದು ತಿಳಿದು ಬಂದಿದೆ. ಇವ್ರು ಮೂಲತಃ ರಾಯಚೂರು ಜಿಲ್ಲೆಯವರು.ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮೃತ ಜ್ಯೋತಿ ಈಗಾಗಲೇ ಮದುವೆಯಾಗಿದ್ದು, ಗಂಡನನ್ನು ತೊರೆದು ಬಂದಿದ್ದಾರೆ ಎಂಬ ಮಾಹಿತಿ ಇದೆ. ಮೃತ ಬಸವರಾಜ್ ಡ್ರೈವರ್ ಕೆಲಸ ಮಾಡುತ್ತಾ ಇದ್ದ. ನಾನು ನನ್ನ ಪತ್ನಿ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಮನೆ ಮಾಲೀಕರ ಬಳಿ ಸುಳ್ಳು ಹೇಳಿ ಮನೆ ಬಾಡಿಗೆ ಪಡೆದಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನುಪ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಮೃತ ಬಸವರಾಜ್, ಮನೆ ಮಾಲೀಕರ ಬಳಿ ಕೆಲ ದಿನಗಳ ಹಿಂದೆ ಸಾಲ ಪಡೆದಿದ್ದ. ಹೀಗಾಗಿ ಬಸವರಾಜ್ಗೆ ಮನೆ ಮಾಲೀಕ ಕರೆ ಮಾಡಿದ್ದಾರೆ. ಆದರೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮನೆಗೆ ಬಂದು ನೋಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನುಪ್ ಶೆಟ್ಟಿ ತಿಳಿಸಿದ್ದಾರೆ.
ಕೋಲಾರ: ಪಕ್ಷಿ ಹಿಡಿಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ಸಾವು
ಪಕ್ಷಿ ಹಿಡಿಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ ಗ್ರಾಮದ ಕೆರೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಉಪ್ಪಾರಹಳ್ಳಿಯ ಮುನಿರಾಜು, ಕಾರ್ತಿಕ್ ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಮಂಜುನಾಥ್ ಎಂಬುವನಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಆನೇಕಲ್: ಕೆರೆಗಳಲ್ಲಿ ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಕಲುಷಿತ ವಾತಾವರಣ
ಕೆರೆಗಳಲ್ಲಿ ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೆರೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿದ ಘಟನೆ ಬೆಂಗಳೂರಿನ ಆನೇಕಲ್ ಬಳಿ ನಡೆದಿದೆ. ಕೇಂದ್ರೀಯ ಹಸಿರು ನ್ಯಾಯಾಧೀಕರಣ ಸಮಿತಿ ಕೆರೆಗಳಿ ಭೇಟಿ ನೀಡಿದೆ. ಕೆಮಿಕಲ್ ಮಯವಾಗಿರುವ ಹೆನ್ನಾಗರ ಕೆರೆ ಪರಿಶೀಲನೆ ನಡೆಸಿದೆ. ಸದ್ಯ ಕೆರೆಗಳಲ್ಲಿನ ನೀರನ್ನು ಪರಿಶೀಲನೆಗೆ ಅಧಿಕಾರಿಗಳು ತೆಗದುಕೊಂಡು ಹೋಗಿದ್ದಾರೆ. ಜಿಗಣಿ,ಹೆನ್ನಾಗರ ಚಂದಾಪುರ ಕೆರೆಗಳಿಗೂ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.
ಶಿವಮೊಗ್ಗ: ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಓರ್ವ ಸ್ಥಳದಲ್ಲೇ ಸಾವು
ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಬಳಿ ಸ್ಕೋಡಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಗ್ನಿಗಾಹುತಿಯಾಗಿದೆ. ಈ ಅಪಘಾತದಲ್ಲಿ ಶಿವಮೊಗ್ಗದ ವೆಂಕಟೇಶನಗರ ನಿವಾಸಿ ಸನತ್(22) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಜ್ಜನೀಪುರದ ರುದ್ವಿಕ್, ಅಶೋಕ್ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಗೆ ಊಟಕ್ಕೆ ಹೋಗಿ ಬರುತ್ತಿದ್ದ ವೇಳೆ ಮರಕ್ಕೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Fire Accident: ಕೊಲ್ಕತ್ತಾದ ಸಿನಿಮಾ ಹಾಲ್ನಲ್ಲಿ ಅಗ್ನಿ ಅವಘಡ; ಬೆಂಕಿ ಆರಿಸಿದ ಅಗ್ನಿಶಾಮಕ ವಾಹನಗಳು
ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ; ಸುಮಾರು 50 ಲೀಟರ್ ಪೆಟ್ರೋಲ್ ಕಳವು
Published On - 9:34 pm, Tue, 18 January 22