ಹಾವೇರಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ಪರಿಣಾಮ ಕೊಳ್ಳುವವರು ಇಲ್ಲದೆ ಜಮೀನಿನಲ್ಲಿ ಬೆಳೆದಿದ್ದ ಕ್ಯಾಬೇಜ್ ಬೆಳೆ ಹಾಳಾಗುತ್ತಿರುವುದಕ್ಕೆ ಬೇಸತ್ತು ರೈತನೋರ್ವ ಬೆಳೆ ನಾಶ ಮಾಡಿದ್ದಾನೆ. ಶೇಖಪ್ಪ ಮುತ್ತಗಿ ಎಂಬ ರೈತ ತಾನು ಬೆಳೆದ ಬೆಳೆಯನ್ನು ನಾಶಪಡಿಸಿದ್ದಾನೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ರೈತ ಶೇಖಪ್ಪ, ಸಾಕಷ್ಟು ಹಣ ಖರ್ಚು ಮಾಡಿ ಕ್ಯಾಬೇಜ್ ಬೆಳೆ ಬೆಳೆದಿದ್ದ. ರೈತನ ನಿರೀಕ್ಷೆ ಹುಸಿ ಮಾಡುವಂತೆ ಕ್ಯಾಬೇಜ್ ಬೆಳೆ ಬಂಪರ್ ಫಸಲು ಬರುವಂತೆ ಮಾಡಿತ್ತು. ಆದರೆ ಕೊರೊನಾ ಲಾಕ್ಡೌನ್ ಹಾಗೂ ಕೊರೊನಾ ಸೋಂಕಿನ ಆರ್ಭಟ ಶುರುವಾದ ಮೇಲೆ ವ್ಯಾಪಾರಸ್ಥರು ಕ್ಯಾಬೇಜ್ ಖರೀದಿಗೆ ಬರುತ್ತಿಲ್ಲ. ಇದರಿಂದ ಬೇಸತ್ತು ರೈತ ಶೇಖಪ್ಪ, ಟ್ರ್ಯಾಕ್ಟರ್ನಿಂದ ಕ್ಯಾಬೇಜ್ ಬೆಳೆ ನಾಶ ಮಾಡಿದ್ದಾನೆ.
ಪ್ರತಿವರ್ಷವೂ ಮಹಾರಾಷ್ಟ್ರದ ವ್ಯಾಪಾರಸ್ಥರು ರೈತರ ಜಮೀನಿಗೆ ಬಂದು ಕ್ಯಾಬೇಜ್ ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ವರ್ಷ ಹೆಮ್ಮಾರಿ ಕೊರೊನಾದ ಹಾವಳಿ ಶುರು ಆಗಿದ್ದರಿಂದ ಯಾರೂ ರೈತರು ಬೆಳೆದ ಕ್ಯಾಬೇಜ್ ಖರೀದಿಗೆ ಬರುತ್ತಿಲ್ಲ. ಹೀಗಾಗಿ ಬೆಳೆದ ಕ್ಯಾಬೇಜ್ ಜಮೀನಿನಲ್ಲೇ ಕೊಳೆತು ಹಾಳಾಗುತ್ತಿದೆ. ಹೀಗಾಗಿ ರೈತ ಶೇಖಪ್ಪ ಟ್ರ್ಯಾಕ್ಟರ್ ಹೊಡೆದು ಬೆಳೆ ಹಾಳು ಮಾಡಿ ಎಮ್ಮೆಗಳನ್ನು ಬಿಟ್ಟು ಮೇಯಿಸಿದ್ದಾರೆ.