ಹಾವೇರಿಯಲ್ಲಿ ನೀರಿಗಾಗಿ ಹಾಹಾಕಾರ: ಕೆರೆಗಳಿಗೆ ನೀರು ಹರಿಸದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
Haveri News: ಮಳೆಗಾಲ ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ಹರಿದಿಲ್ಲ. ಏತ ನೀರಾವರಿ ಕಾಲುವೆಯಿಂದ ಕೆರೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಕೆರೆಮತ್ತಿಹಳ್ಳಿ ಗ್ರಾಮದ ರೈತರು ಕೆರೆಯ ಅಂಗಳದಲ್ಲೇ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಹಾವೇರಿಯಲ್ಲಿ ಖಾಲಿ ಉಳಿದಿವೆ ಬಹುತೇಕ ಕೆರೆಗಳು
- ಕೆರೆ ಅಂಗಳದಲ್ಲೇ ರೈತರ ಪ್ರತಿಭಟನೆ
- ಕೂಡಲೇ ನೀರು ಹರಿಸಲು ರೈತರ ಒತ್ತಾಯ
ಹಾವೇರಿ, ಆಗಸ್ಟ್ 21: ಮಳೆಗಾಲ ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಹಾವೇರಿ (Haveri) ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗದೆ ಖಾಲಿ ಉಳಿದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆ ಕೊರತೆಯ ನಡುವೆಯೇ ಏತ ನೀರಾವರಿ ಕಾಲುವೆಯಿಂದ ಕೆರೆಗಳಿಗೆ ನೀರು ಹರಿಸದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಾವೇರಿ ತಾಲೂಕಿನ ಕೆರೆಮತ್ತಿಹಳ್ಳಿ ಗ್ರಾಮದ ರೈತರು ಕೆರೆಯ ಅಂಗಳದಲ್ಲೇ ಧರಣಿ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2,058 ಕೆರೆಗಳಿದ್ದು, ಈ ಪೈಕಿ ಸುಮಾರು ಶೇ 90ರಷ್ಟು ಕೆರೆಗಳಿಗೆ ಇನ್ನೂ ನೀರು ಹರಿದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕೆರೆಮತ್ತಿಹಳ್ಳಿ ಗ್ರಾಮದ ಸುಮಾರು 100 ಎಕರೆ ವಿಸ್ತೀರ್ಣದ ಕೆರೆಯೂ ನೀರಿಲ್ಲದೆ ಬರಿದಾಗಿದೆ. ಇದರಿಂದ ಸುತ್ತಮುತ್ತಲಿನ ರೈತರು ಕೃಷಿ ಚಟುವಟಿಕೆಗಳ ಬಗ್ಗೆ ಆತಂಕಗೊಂಡಿದ್ದಾರೆ. ಕೆರೆಯ ಅಂಗಳದಲ್ಲೇ ಧರಣಿ ನಡೆಸಿದ ರೈತರು, ‘ಬೇಕೇ ಬೇಕು, ನೀರು ಬೇಕು’ ಎಂದು ಘೋಷಣೆ ಕೂಗಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ಕೊರತೆ, ನೀರಿಲ್ಲದೆ ರೈತರು ಹೈರಾಣ
ಒಂದೆಡೆ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದರೆ, ಮತ್ತೊಂದೆಡೆ ಲಭ್ಯವಿರುವ ನೀರನ್ನು ಕೆರೆಗಳಿಗೆ ಹರಿಸಿ ಸಂಗ್ರಹಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ದೂರಿದ್ದಾರೆ. ಏತ ನೀರಾವರಿ ಕಾಲುವೆಯಿಂದ ಕೆರೆಗಳಿಗೆ ನೀರು ಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳಿಂದ ಸಿಗುತ್ತಿಲ್ಲ ಸ್ಪಂದನೆ: ರೈತರ ಆರೋಪ
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸ್ಪಂದನೆ ಸಿಗುತ್ತಿಲ್ಲ ಎಂಬುದು ರೈತರ ಮತ್ತೊಂದು ಆರೋಪ. ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಕರೆ ಮಾಡಿದರೂ ದೂರವಾಣಿ ಸ್ವೀಕರಿಸುತ್ತಿಲ್ಲ. ತಮ್ಮ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.
ಮಳೆಗಾಲದಲ್ಲೇ ಕೆರೆಗಳು ಖಾಲಿಯಾಗಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ. ಮಳೆ ಕೊರತೆ ಮತ್ತು ಕೆರೆಗಳಲ್ಲಿ ನೀರು ಸಂಗ್ರಹವಾಗದ ಕಾರಣ ರೈತರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ಏತ ನೀರಾವರಿ ಕಾಲುವೆಯಿಂದ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕ್ರಮ ಕೈಗೊಳ್ಳಬೇಕು ಎಂದು ರೈತರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಜಲಸಂಗ್ರಹಣಾ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ತಡೆಯಬೇಕು ಎಂಬುದು ರೈತರ ಆಗ್ರಹವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




