500 ರೂ ಕದ್ದಿದ್ದಾನೆಂದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಕಿಡ್ನ್ಯಾಪ್: ಕಂಬಕ್ಕೆ ಕಟ್ಟಿ ಥಳಿತ
ಮಾರುತಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರದಲ್ಲಿ 15 ವರ್ಷದ ವಿದ್ಯಾರ್ಥಿಯನ್ನ ಅಪಹರಿಸಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. 500 ರೂಪಾಯಿ ಕಳ್ಳತನದ ಅನುಮಾನದ ಮೇಲೆ ಆರೋಪಿಗಳು ವಿದ್ಯಾರ್ಥಿಯನ್ನು ಶಾಲೆಯಿಂದಲೇ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಪೊಲೀಸರೂ ಸಹ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
![500 ರೂ ಕದ್ದಿದ್ದಾನೆಂದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಕಿಡ್ನ್ಯಾಪ್: ಕಂಬಕ್ಕೆ ಕಟ್ಟಿ ಥಳಿತ](https://images.tv9kannada.com/wp-content/uploads/2025/01/student-kidnap-1.jpg?w=1280)
ಹಾವೇರಿ, ಜನವರಿ 29: 500 ರೂ. ಕದ್ದಿದ್ದಾನೆ ಎಂಬ ಅನುಮಾನ ಹಿನ್ನಲೆ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯನ್ನು ಕಿಡ್ನ್ಯಾಪ್ (Kidnapped) ಮಾಡಿ, ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಅನ್ನ, ನೀರು ಕೊಡದೆ ಆರೋಪಿಗಳು ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ತಿಮ್ಮಾಪುರ ಗ್ರಾಮದ ಎಸ್ವಿಎಲ್ಪಿ ಸರ್ಕಾರಿ ಪ್ರೌಡ ಶಾಲೆಯ ನಾಗರಾಜ್ ಶೇಖರ್ ಮೈಸೂರ್ (15) ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲಾಗಿದೆ. ವಿದ್ಯಾರ್ಥಿಗೆ ಬಾಸುಂಡೆ ಬರುವ ಹಾಗೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಗಣಪತಿ ಗುಣೋಜಿ, ಮಂಜುನಾಥ್ ಬಗಾಡೆ ಎಂಬುವವರೇ ತಮ್ಮ ಪುತ್ರನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ಲಕ್ಕಿ ಭಾಸ್ಕರ್: ಒಂದಲ್ಲ, ಎರಡಲ್ಲ 7 ಕೋಟಿ ರೂ ವಂಚನೆ
ಮಂಜುನಾಥ್ ಬಗಾಡೆ ಅವರ ಮನೆಯಲ್ಲಿ ವಿದ್ಯಾರ್ಥಿ 500 ರೂಪಾಯಿ ಕದ್ದ ಎಂಬ ಅನುಮಾನದಿಂದ ಹಲ್ಲೆ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ ವಿದ್ಯಾರ್ಥಿ ನಾಗರಾಜ್ನನ್ನು ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಪಡೆಯದೇ ಆರೋಪಿಗಳು ಓಮ್ನಿ ವಾಹನದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಶಾಲೆಯಿಂದ ಕೊರಳಪಟ್ಟಿ ಹಿಡಿದು ಕರೆದೊಯ್ದು ತೋಟದ ಮನೆಯಲ್ಲಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ದೂರು ನೀಡಿದ ತಂದೆ
ಆರೋಪಿಗಳ ಕೃತ್ಯಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ತಡಸ ಪೊಲೀಸ್ ಠಾಣೆಗೆ ಕರೆದೊಯ್ದು 9 ಗಂಟೆವರೆಗೂ ಕೂರಿಸಿ ಹಿಂಸೆ ನೀಡಿದ್ದಾರೆ. ಪೊಲೀಸರು ಕೂಡಾ ನನ್ನನ್ನು ಹೊಡೆದರು ಎಂದು ವಿಡಿಯೋದಲ್ಲಿ ವಿದ್ಯಾರ್ಥಿ ನಾಗರಾಜ್ ಆರೋಪಿಸಿದ್ದಾನೆ. ಬೆನ್ನು, ತೊಡೆ, ಕೆನ್ನೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಚರ್ಮ ಕೆಂಪಗಾಗುವಂತೆ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ವಿದ್ಯಾರ್ಥಿ ನಾಗರಾಜ್ ತಂದೆ ಶೇಖರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಟ್ಯೂಷನ್ಗೆ ತೆರಳಿದ್ದ ಇಬ್ಬರು ಮಕ್ಕಳ ಅಪಹರಣಕ್ಕೆ ವಿಫಲ ಯತ್ನ
ಇನ್ನು ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಇಬ್ಬರು ಮಕ್ಕಳ ಅಪಹರಣಕ್ಕೆ ವಿಫಲ ಯತ್ನ ನಡೆದಿತ್ತು. ಹೊಸಕೆರೆ ಗ್ರಾಮದ ಜೀವನ್ ಗೌಡ(11), ಯಶ್ವಿನ್ ಗೌಡ್(11) ನಿತ್ಯ ಬೆಳಗ್ಗೆ 7 ಗಂಟೆಗೆ ಧರ್ಮಪುರಂದ ರಂಗಸ್ವಾಮಿ ಮೇಷ್ಟ್ರ ಬಳಿ ಟ್ಯೂಷನ್ಗೆ ಬರುತ್ತಿದ್ದರು. ಈ ವೇಳೆ ಟ್ಯೂಷನ್ ಬಳಿಗೆ ಬಂದವರೇ ಇಬ್ಬರೂ ಬಹಿರ್ದೆಸೆಗೆ ತೆರಳಿದ್ದಾರೆ. ಅದೇ ವೇಳೆ ಓಮ್ನಿಯಲ್ಲಿ ಬಂದ ನಾಲ್ವರು ಮುಖಕ್ಕೆ ಸ್ಪ್ರೇ ಮಾಡಿ ಕಾರಲ್ಲಿ ಎತ್ತಾಕಿಕೊಂಡು ಹೋಗಿದ್ದರು.
ಇದನ್ನೂ ಓದಿ: ರಾಯಚೂರು: ಮಹಿಳೆಯನ್ನ ಸಾರ್ವಜನಿಕವಾಗಿಯೇ ಮರಕ್ಕೆ ಕಟ್ಟಿ ಮನಬಂದಂತೆ ಥಳಿತ
ಕೆಲ ಹೊತ್ತಿನ ಬಳಿಕ ಎಚ್ಚರಾಗಿದ್ದ ಮಕ್ಕಳು ಕೂಗಿಕೊಂಡಿದ್ದಾರೆ. ಅಷ್ಟರಲ್ಲಿ ಯಾರಿಗೋ ಕಾಲ್ ಮಾಡಿ ಹಿಂದಿಯಲ್ಲಿ ಮಾತಾಡಿ ಮಕ್ಕಳ ಫೋಟೋ ಕಳಿಸಿದ್ದರಂತೆ. ಈ ಮಕ್ಕಳನ್ನ ಬಿಟ್ಟು ಬನ್ನಿ ಎಂದು ಸೂಚನೆ ಬಂದಾಗ ಹತ್ತು ಕಿ.ಮೀ ದೂರದಲ್ಲಿ ಮಕ್ಕಳನ್ನು ಬಿಟ್ಟು ಆರೋಪಿಗಳು ಹೋದ್ದರು.
ವರದಿ: ಅಣ್ಣಪ್ಪ ಬಾರ್ಕಿ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.