ಬೆಂಗಳೂರಿನಲ್ಲೊಬ್ಬ ಲಕ್ಕಿ ಭಾಸ್ಕರ್: ಒಂದಲ್ಲ, ಎರಡಲ್ಲ 7 ಕೋಟಿ ರೂ ವಂಚನೆ
ಸಿನಿಮಾ ಸ್ಟೈಲ್ನಲ್ಲಿ ಹಣ ಮಾಡಲು ಹೋಗಿ ಓರ್ವ ವ್ಯಕ್ತಿ ಪೊಲೀಸರ ಅತಿಥಿಯಾಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯೊಂದರ ಬರೋಬ್ಬರಿ 7 ಕೋಟಿ ರೂ. ಹಣವನ್ನು ಬೆಟ್ಟಿಂಗ್ಗೆ ಹಾಕಿದ್ದಾರೆ. ಎಲೆಕ್ಟ್ರಿಸಿಟಿ ಬಿಲ್ ಪಾವತಿಸದೇ ಬೆಟ್ಟಿಂಗ್ನಲ್ಲಿ ಹೂಡಿಕೆ ಮಾಡಿದ್ದಾರೆ. ಆಡಿಟಿಂಗ್ ವೇಳೆ ವಿಚಾರ ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
![ಬೆಂಗಳೂರಿನಲ್ಲೊಬ್ಬ ಲಕ್ಕಿ ಭಾಸ್ಕರ್: ಒಂದಲ್ಲ, ಎರಡಲ್ಲ 7 ಕೋಟಿ ರೂ ವಂಚನೆ](https://images.tv9kannada.com/wp-content/uploads/2025/01/lucky-bhaskar-fraud.jpg?w=1280)
ಬೆಂಗಳೂರು, ಜನವರಿ 29: ಇತ್ತೀಚೆಗೆ ತೆಲುಗಿನ ‘ಲಕ್ಕಿ ಭಾಸ್ಕರ್’ (Lucky Bhaskar) ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿ ಕಂಡಿತ್ತು. ಆ ಚಿತ್ರದಲ್ಲಿ ನಟ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲೇ ಹಣವನ್ನು ಕದ್ದು ಬೇರೆಡೆ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾನೆ. ಒಂದು ಚಿಕ್ಕ ಸುಳಿವು ಕೂಡ ನೀಡದೇ ನಟ ಅದರಿಂದ ಪಾರಾಗುತ್ತಾನೆ. ಇದು ಒಂದು ಚಿತ್ರ. ಆದರೆ ಇಂತಹದೇ ಒಂದು ಘಟನೆ ನಗರದಲ್ಲಿ ನಡೆದಿದ್ದು, ಖಾಸಗಿ ಕಂಪನಿ ಸಿಬ್ಬಂದಿ ಓರ್ವ, ಒಂದಲ್ಲ ಎರಡಲ್ಲ ಬರೋಬ್ಬರಿ 7 ಕೋಟಿ ರೂ. ಹಣ ಬೆಟ್ಟಿಂಗ್ಗೆ ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಎಂಬಾತನನ್ನು ಅಶೋಕನಗರ ಪೊಲೀಸರು ಸದ್ಯ ಬಂಧಿಸಿದ್ದಾರೆ. ವಿವಿಧ ಕಂಪನಿಗಳಿಗೆ ಅಕೌಂಟಿಂಗ್ ಸರ್ವಿಸ್ ನೀಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಬಂಧಿತ ಆರೋಪಿ ಶ್ರೀಕಾಂತ್, ಅಸೋಸಿಯೇಟ್ ಅಕೌಂಟೆಂಟ್ ಆಗಿದ್ದರು.
ಇದನ್ನೂ ಓದಿ: ಉದ್ಯಮಿಗೆ 5.75 ಕೋಟಿ ರೂ. ವಂಚನೆ, ವಿಡಿಯೋ ಕಾಲ್ ರೆಕಾರ್ಡ್ ಇಟ್ಟುಕೊಂಡು ಬ್ಲ್ಯಾಕ್ಮೇಲ್!
ಸ್ವಿಗ್ಗಿ ಇಂಡಿಯಾದ ಎಲೆಕ್ಟ್ರಿಸಿಟಿ ಬಿಲ್ ಪಾವತಿಗೆ ಶ್ರೀಕಾಂತ್ನನ್ನು ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಜೂನ್ನಿಂದ ಡಿಸೆಂಬರ್ವರೆಗೂ ಕಂಪನಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಬಳಕೆ ಮಾಡಿದ್ದು, ಬರೋಬ್ಬರಿ 7 ಕೋಟಿ ರೂ. ಹಣವನ್ನ ಬಿಟಿಎನ್ ಎಕ್ಸ್‌ಚೆಂಜ್247.ಕಾಂ (BetinExchange247.com) ಬೆಟ್ಟಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿದ್ದಾರೆ.
ಇದೇ ಜನವರಿಯಲ್ಲಿ ನಡೆದ ಸ್ವಿಗ್ಗಿ ಆಡಿಟಿಂಗ್ ವೇಳೆ ಈ ವಿಚಾರ ಬಯಲಾಗಿದೆ. ವಿಚಾರ ತಿಳಿದು ಪ್ರಶ್ನಿಸಿದಾಗ ಬೆಟ್ಟಿಂಗ್ನಲ್ಲಿ ಹೂಡಿಕೆ ಮಾಡಿದ್ದು ಬಯಲಾಗಿದೆ. ಬಳಿಕ ಕಂಪನಿಯಿಂದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಅಶೋಕನಗರ ಪೊಲೀಸರು ಶ್ರೀಕಾಂತ್ನನ್ನು ಬಂಧಿಸಿದ್ದಾರೆ. ಸಿನಿಮಾ ಸ್ಟೈಲ್ನಲ್ಲಿ ಹಣ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಅಗ್ನಿ ಅವಘಡ: ಪೊಲೀಸರು ಸೀಜ್ ಮಾಡಿದ್ದ ಕಾರು, ಬೈಕ್ಗಳು ಬೆಂಕಿಗಾಹುತಿ
ಬೆಂಗಳೂರಿನ ಜೆಡಿಎಸ್ ಕಚೇರಿ ಹಿಂಭಾಗ ಇರುವ ಚಕ್ಕರಾಯನಕೆರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪೊಲೀಸರು ಸೀಜ್ ಮಾಡಿದ್ದ ಕಾರು, ಬೈಕ್ಗಳು ಬೆಂಕಿಗಾಹುತಿ ಆಗಿವೆ. ಘಟನಾ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೈದಾನದಲ್ಲಿ ನಿಲ್ಲಿಸಿದ್ದ 50ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ ಆಗಿವೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಕೇಸ್ ಬುಕ್
ಸೀಜ್ ಮಾಡಿದ್ದ ನೂರಾರು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಆದರೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ವಾಹನಗಳು ಹೊತ್ತಿಉರಿದಿವೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಸೈದುಲಾ ಅಡಾವತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:02 pm, Wed, 29 January 25