ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಸಂಕಷ್ಟ ಹರಣ ಪೂಜೆ ಮಾಡಿಸಿದ ಸಿದ್ದು ಅಭಿಮಾನಿಗಳು
ಕಳಂಕ ರಹಿತ ಸಿಎಂ ಎಂದು ಕರೆಸಿಕೊಳ್ಳುತ್ತಿದ್ದ ಸಿದ್ದರಾಮಯ್ಯಗೆ ಒಂದರ ಮೇಲೊಂದದು ಸಂಕಷ್ಟ ಎದುರಾಗುತ್ತಿವೆ. ಅದರಲ್ಲೂ ಮುಡಾ ಪ್ರಕರಣ ಸರಕಾರಕ್ಕೆ ಸಾಕಷ್ಟು ಮುಜುಗರ ತಂದೊಡ್ಡಿದೆ. ಹೀಗಾಗಿ ಸಿದ್ದರಾಮಯ್ಯ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಆ ಕುರಿತು ಒಂದು ವರದಿ ಇಲ್ಲಿದೆ.
ಹಾವೇರಿ, ಆ.30: ಸಿಎಂ ಸಿದ್ದರಾಮಯ್ಯ(Siddaramaiah)ಗೆ ಒಂದರ ಮೇಲೊಂದು ಸಮಸ್ಯೆ ಎದುರಾಗುತ್ತಲೇ ಇವೆ. ವಾಲ್ಮೀಕಿ ಹಗರಣ, ಮೂಡಾ ಹಗರಣ ಹೀಗೆ ಒಂದರ ಮೇಲೆ ಒಂದು ಹಗರಣಗಳ ಸುಳಿಗೆ ಸಿಕ್ಕು ವಿರೋಧ ಪಕ್ಷದ ನಾಯಕರಿಗೆ ಆಹಾರ ಆಗುತ್ತಿದ್ದಾರೆ. ಹೀಗಾಗಿ ಸಿಎಂ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಇಂದು(ಶುಕ್ರವಾರ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು(Ranebennur) ತಾಲ್ಲೂಕಿನ ದೇವರಗುಡ್ಡದ ಐತಿಹಾಸಿಕ ದೇವಸ್ಥಾನ ಮಾಲತೇಶ ದೇವರ ದರ್ಶನವನ್ನು ಸಿಎಂ ಪಡೆದರು. ಅವರು ದರ್ಶನ ಪಡೆಯುವುದಕ್ಕೂ ಮುಂಚೆಯೇ ಅವರ ಅಭಿಮಾನಿಗಳು ಮತ್ತು ಕುರುಬ ಸಮಾಜದ ಮುಖಂಡರು ರುದ್ರಾಭಿಷೇಕ, ಸಂಕಷ್ಟ ಹರಣ ಪೂಜೆ ಸಲ್ಲಿಸಿ ಸಿದ್ದರಾಮಯ್ಯಗೆ ಯಾವುದೇ ತೊಂದರೆ ಆಗದೇ ಐದು ವರ್ಷ ಆಡಳಿತ ಪೂರೈಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಹ ಮಾಲತೇಶ ದೇವರ ದರ್ಶನ ಪಡೆದು, ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿಯನ್ನ ಅನಾವರಣ ಮಾಡಿದರು. ನಂತರ ಕನಕ ಭವನ ಉದ್ಘಾಟನೆ ಮಾಡಿ ಸಭೆಯಲ್ಲಿ ಭಾಗವಹಿಸಿ ‘ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ‘ನಾನು ಅಸೂಯೆ ಮಾಡುವವರಿಂದ ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ ಆಗಿರೋದು. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ. BJP-JDS ನವರಿಗೆ ನನ್ನ ಮೇಲೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಮುಡಾ ಹಗರಣ; ಸಿಎಂ ಸಿದ್ದರಾಮಯ್ಯರಿಂದ ಯಾವ ಪ್ರಮಾದವೂ ಜರುಗಿಲ್ಲ: ಡಿಕೆ ಶಿವಕುಮಾರ್
ಇನ್ನು ಸಭೆಯಲ್ಲಿ ಕುರುಬ ಸಮುದಾಯದ ತಿಂಥಣಿ ಮಠದ ಶಾಖಾ ಮಠದ ಸಿದ್ದರಾಮೇಶ್ಚರ ಸ್ವಾಮೀಜಿ ಕಿಡಿಕಾರಿದ್ದು, ‘ಮಲ್ಲಯ್ಯ ಆರ್ಶೀವಾದ ಇರಲಿ ಎಂದು ಈಗ ಕರೆದುಕೊಂಡು ಬಂದಿದ್ದಾರೆ. ಜಾತಿವಾದಿಗಳು, ಸಮಸ್ಯೆ ಮಾಡಿ, ಸಮಸ್ಯೆಯನ್ನ ಸೃಷ್ಟಿ ಮಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಜಾತಿ ಕಾರಣಕ್ಕೆ ದ್ವೇಷ ಮಾಡಬಹುದು, ಆದರೆ ಸಿದ್ದರಾಮಯ್ಯ ಜಾತ್ಯಾತೀತ ನಾಯಕ. ಅವರಿಗೆ ತೊಂದರೆ ಆಗದಿರಲಿ ಎಂದು ಮಾಲತೇಶನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಕಳೆದ ನಾಲ್ಕೈದು ತಿಂಗಳಿನಿಂದ ವಾಲ್ಮೀಕಿ ಮತ್ತು ಮುಡಾ ಪ್ರಕರಣಗಳು ಹೆಚ್ಚು ಕಾಡಿವೆ. ಹೀಗಾಗಿ ಸಮಸ್ಯೆ ನಿರ್ವಾರಣೆಗಾಗಿ ಕುರುಬ ಸಮುದಾಯದ ಜನರು ಸಿದ್ದರಾಮಯ್ಯ ಪರ ಪೂಜೆ ಮಾಡಿಸಿ, ಮಾಲತೇಶ ದೇವರ ದರ್ಶನಕ್ಕೆ ಮಾಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ