
ಹಾವೇರಿ, ನವೆಂಬರ್ 19: ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಕ್ಕಿ ಸರಬರಾಜು ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 15 ದಿನಗಳಿಂದ ಬಿಸಿಯೂಟ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಸ್ವತಃ ನಾಲ್ಕು ಕ್ವಿಂಟಾಲ್ ಅಕ್ಕಿ ದಾನ ನೀಡಿ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಿರುವಂತಹ ಅಪರೂಪದ ಘಟನೆಯೊಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಬಿಸಿಯೂಟಕ್ಕೆ ಅಗತ್ಯವಿರುವ ಅಕ್ಕಿಯನ್ನು ಅಧಿಕಾರಿಗಳು ಸರಬರಾಜು ಮಾಡದ ಹಿನ್ನೆಲೆ ಕಳೆದ 15 ದಿನಗಳಿಂದ ಅಕ್ಕಿಯ ಕೊರತೆ ಎದುರಾಗಿತ್ತು. ಇದರಿಂದ ಬಿಸಿಯೂಟ ಬಂದ್ ಮಾಡುವ ನಿರ್ಧಾರಕ್ಕೆ ಶಿಕ್ಷಕರು ಮುಂದಾಗಿದ್ದರು.
ಇದನ್ನೂ ಓದಿ: ಕೊಪ್ಪಳ: ಬಿಸಿಯೂಟ ತಯಾರಕಾ ಮಹಿಳೆಯರಿಂದ ಪ್ರತಿಭಟನೆ; ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಯತ್ನ
ಈ ವಿಷಯ ತಿಳಿದ ಗ್ರಾಮಸ್ಥರು ಮಕ್ಕಳಿಗೆ ಬಿಸಿಯೂಟ ನಿಲ್ಲಬಾರದು ಎಂಬ ಉದ್ದೇಶದಿಂದ ನಾಲ್ಕು ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡಿದ್ದಾರೆ. ಕಳೆದ 15 ದಿನಗಳಿಂದ ಗ್ರಾಮಸ್ಥರೇ ಅಕ್ಕಿ ದಾನ ಮಾಡುವ ಮೂಲಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಮುಂದುವರಿಯುವಂತೆ ಮಾಡಿದ್ದಾರೆ. ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಗ್ರಾಮಸ್ಥರೇ ಮುಂದೆ ನಿಂತು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಯಚೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಹೊಸ ಸೋನಾ ಮಸೂರಿ ಅಕ್ಕಿಯ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಕೆಜಿಗೆ ಸುಮಾರು 10ರಿಂದ 20 ರೂ.ವರೆಗೆ ಕಡಿಮೆಯಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಕೆಜಿಗೆ 80ರಿಂದ 90 ರೂ.ವರೆಗೆ ಮಾರಾಟವಾಗುತ್ತಿದ್ದ ಅಕ್ಕಿ, ಇದೀಗ 65ರಿಂದ 70 ರೂ. ಕಡಿಮೆಯಾಗಿದೆ. ಭತ್ತದ ಪೂರೈಕೆ ಕುಸಿದಿದ್ದರಿಂದ ಅಕ್ಕಿ ದರ ಏರಿಕೆಯಾಗಿತ್ತು. ಆದರೆ ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದ್ದು, ಭತ್ತದ ಕಟಾವು ಮುಗಿದು ಮಿಲ್‌ಗಳಿಗೆ ಭತ್ತ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಏಕಾಏಕಿ ಇಳಿಕೆಯಾಗಿದೆ. ಈ ಹಿಂದೆ ಕ್ವಿಂಟಲ್ ಅಕ್ಕಿಗೆ 8,500 ರೂಪಾಯಿ ಇದ್ದ ದರ ಇದೀಗ 6,500 ರೂಪಾಯಿಗೆ ಇಳಿದಿದೆ. ಅಂದರೆ ಕ್ವಿಂಟಲ್‌ಗೆ ಬರೋಬ್ಬರಿ 2,000 ರೂ ಕಡಿಮೆಯಾಗಿದ್ದು, ಅಕ್ಕಿ ಖರೀದಿಸುವ ಗ್ರಾಹಕರಿಗೆ ತುಸು ನಿರಾಳತೆ ಸಿಕ್ಕಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:19 pm, Thu, 19 November 26