ಕೊನೆಗೂ ಹಂತಕ ಕಾಡಾನೆ ಲಾಕ್: ಇಬ್ಬರನ್ನ ಬಲಿ ಪಡೆದಿದ್ದ ಆನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಕ್ಸಸ್
ಚಿಕ್ಕಮಗಳೂರು ಹಾಗೂ ಹಾಸನ ಗಡಿ ಭಾಗದಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು, ಈ ವಾರದಲ್ಲೇ ಹಾಸನದಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದರೆ, ನಿನ್ನೆ (ನವೆಂಬರ್ 18) ಚಿಕ್ಕಮಗಳೂರಿನಲ್ಲೂ ಸಹ ಓರ್ವ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಜನರು ಸಿಡಿದೆದ್ದಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಕಾಡಾನೆಗಳ ಸೆರೆಹಿಡಿಯಲು ಆರಂಭಿಸಿದ್ದ ಕಾರ್ಯಚರಣೆ ಯಶಸ್ವಿಯಾಗಿದೆ.

ಹಾಸನ, (ನವೆಂಬರ್ 19): ಹಾಸನ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಜೋಡಿ ಸಲಗಳನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಎರಡೂ ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಕುಮ್ಕಿ ಆನೆ ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಿರಂತರ ಕಾರ್ಯಚರಣೆ ನಡೆಸಿ ಅಂತಿಮವಾಗಿ ಇಂದು (ನವೆಂಬರ್ 19) ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್ನ್ಲಿ ಸೆರೆಹಿಡಿದಿದ್ದಾರೆ. ಇದರೊಂದಿಗೆ ಸ್ಥಳೀಯ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರುಬಿಡುವಂತಾಗಿದೆ.
ಡ್ರೋನ್ ಕ್ಯಾಮರಾದಲ್ಲಿ ಎರಡು ಕಾಡಾನೆಗಳು ಜೊತೆ ಜೊತೆಯಾಗಿರುವುದು ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಕಾರ್ಯಚರಣೆಗಿಳಿದ ಸಿಬ್ಬಂದಿ, ಅರಿವಳಿಕೆ ಮದ್ದು ನೀಡಿದ್ದಾರೆ. ಮೊದಲಿಗೆ ದೈತ್ಯಾಕಾರದ ಆನೆಗೆ ಒಂದು ಡಾಟ್ (ಅರವಳಿಕೆ ಚುಚ್ಚುಮದ್ದು) ಮಾಡಿದ್ದಾರೆ. ಆದ್ರೆ ಅದ್ಯಾಕೋ ವರ್ಕೌಟ್ ಆಗಿಲ್ಲ ಎಂದು ಎರಡನೇ ಡಾಟ್ ಕೊಟ್ಟಿದ್ದಾರೆ. ಬಳಿಕ ಒಂದು ಆನೆ ನಿತ್ರಾಣಗೊಂಡು ನಿಂತಲ್ಲೇ ನಿಂತುಕೊಂಡಿದೆ. ಇನ್ನೊಂದು ಆನೆ ಸಹ ಇದರ ಜೊತೆಯಲ್ಲೇ ನಿಂತಿತ್ತಿದ್ದು, ಬಳಿಕ ಸ್ಥಳಕ್ಕೆ ಕುಮ್ಕಿ ಆನೆಗಳು ಬರುತ್ತಿದ್ದಂತೆ ಸಣ್ಣ ಸಲಗ ಘೀಳಿಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಣ್ಣ ಆನೆಗೂ ಸಹ ಅರವಳಿಕೆ ಮದ್ದು ನೀಡಲಾಯ್ತು. ನಂತರ ಕುಮ್ಕಿ ಆನೆಗಳು, ಎರಡು ಕಾಡಾನೆಗಳನ್ನು ಸುತ್ತವರೆದು ಲಾಕ್ ಮಾಡಿವೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಹಾಸನದಲ್ಲಿ ಮತ್ತೊಂದು ಬಲಿ: ಮೃತದೇಹವಿದ್ದ ಆ್ಯಂಬುಲೆನ್ಸ್ ತಡೆದು ಉದ್ರಿಕ್ತರಿಂದ ಪ್ರತಿಭಟನೆ
ಮೂರು ದಿನದಲ್ಲಿ ಇಬ್ಬರು ಬಲಿ
ಶನಿವಾರ ಅಂದರೆ ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ಕಾಡಾನೆ ದಾಳಿಯಿಂದ ಚೌಡನಹಳ್ಳಿಯ ಜಯಮ್ಮ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಕೇವಲ ಎರಡೇ ದಿನದಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದ. ನವೆಂಬರ್ 16ರಂದು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಹಫೀಜ್ ಮೇಲೆ ದಾಳಿ ಮಾಡಿ ಸಾಯಿಸಿತ್ತು.
ಕೆಲವು ತಿಂಗಳಿಂದ ಜೊತೆ ಜೊತೆಯಾಗಿ ಎರಡು ಸಲಗಳು ಪುಂಡಾಟ ಮಾಡುತ್ತ ಓಡಾಡುತ್ತಿದ್ದ. ಈ ಆನೆಗಳಿಂದ ಇಬ್ಬರು ಬಲಿಯಾಗಿದ್ದರು. ಹಾಗಾಗಿಯೇ ಈ ಆನೆಗಳನ್ನೇ ಮೊದಲು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿಯಿಡೀ ಅರೆಹಳ್ಳಿ, ಬಿಕ್ಕೋಡು ಭಾಗದಲ್ಲಿ ಈ ಸಲಗಗಳು ಓಡಾಡಿವೆ. ಇವು ಎಲ್ಲಿಯೂ ನಿಲ್ಲದೆ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದವು. ಅಂತಿಮವಾಗಿ ಸತತ ಮೂರು ದಿನಗಳ ಕಾರ್ಚರಣೆಯಲ್ಲಿ ಎರಡು ಆನೆಗಳು ಲಾಕ್ ಆಗಿವೆ.
ಈ ಕಾರ್ಯಚರಣೆಯಲ್ಲಿ ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಶ್ರೀಕಂಠ, ಅಶೋಕ, ರೋಹಿತ್, ಮಾಣಿಕ್ಯ, ಅಯ್ಯಪ್ಪ, ಏಕಲವ್ಯ ಕುಮ್ಕಿ ಆನೆಗಳು ಭಾಗಿಯಾಗಿದ್ದವು. ಇನ್ನು ಹಾಸನ ಜಿಲ್ಲೆಯಲ್ಲಿ ಒಟ್ಟಿಗೆ ಎರಡು ಆನೆಗಳನ್ನು ಸೆರೆ ಹಿಡಿದಿರುವುದು ಇದೇ ಮೊದಲು ಎನ್ನುವುದು ವಿಶೇಷ.




