AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಳಾಸಾಹೇಬ್​ಗೆ ಅಗೌರವ ತೋರುವ ಉದ್ದೇಶ ಇರಲಿಲ್ಲ’; ಕ್ಷಮೆಯಾಚಿಸಿದ ಶಿವಸೇನೆ ನಾಯಕಿ ಶೈನಾ

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಶಿವಸೇನೆ ರಾಷ್ಟ್ರೀಯ ವಕ್ತಾರೆ ಶೈನಾ ಎನ್‌ಸಿ ಅಚಾತುರ್ಯದಿಂದ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನು ಹರಿದಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಶೈನಾ ಎನ್‌ಸಿ ಕ್ಷಮೆ ಯಾಚಿಸಿದ್ದಾರೆ. ಯಾರ ಭಾವನೆಗೂ ಧಕ್ಕೆ ತರುವಂತಹ, ಬಾಳಾ ಠಾಕ್ರೆ ಅವರಿಗೆ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ವೀರ ಸಾವರ್ಕರ್ ಕುರಿತಾದ ಉಲ್ಲೇಖಗಳನ್ನು ಖಂಡಿಸಿ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಗದಗಳನ್ನು ಹರಿಯುವಾಗ, ಬಾಳಾಸಾಹೇಬ್ ಠಾಕ್ರೆ ಅವರ ಫೋಟೋ ಇದ್ದ ಕಾಗದವೂ ಅಜಾಗರೂಕತೆಯಿಂದ ಹರಿದುಹೋಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ನಾಯಕರು ಆಡಳಿತರೂಢ ಶಿವಸೇನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

‘ಬಾಳಾಸಾಹೇಬ್​ಗೆ ಅಗೌರವ ತೋರುವ ಉದ್ದೇಶ ಇರಲಿಲ್ಲ’; ಕ್ಷಮೆಯಾಚಿಸಿದ ಶಿವಸೇನೆ ನಾಯಕಿ ಶೈನಾ
ಶೈನಾ
ಸುಷ್ಮಾ ಚಕ್ರೆ
|

Updated on: Nov 19, 2026 | 3:44 PM

Share

ಮುಂಬೈ, ನವೆಂಬರ್ 19: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ವೀರ ಸಾವರ್ಕರ್ ಅವರನ್ನು ಚಿತ್ರಿಸಿರುವ ರೀತಿಯನ್ನು ವಿರೋಧಿಸಿ ಶಿವಸೇನೆ (ಶಿಂಧೆ ಬಣ) ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ಶಿವಸೇನೆ ನಾಯಕಿ ಶೈನಾ ಎನ್‌ಸಿ ಮತ್ತು ಇತರ ನಾಯಕರು ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಉದ್ಧವ್ ಠಾಕ್ರೆ ಅವರ ಫೋಟೋವನ್ನು ಹಿಡಿದು ಡಜನ್‌ಗಟ್ಟಲೆ ಕ್ಯಾಮೆರಾಗಳ ಮುಂದೆ ಹರಿದುಹಾಕಿದ್ದಾರೆ. ಫೋಟೋವನ್ನು ಹರಿಯುವಾಗ ಅವರು ಕ್ಯಾಮೆರಾಗಳಿಗೆ ನಗುತ್ತಾ ಪೋಸ್ ನೀಡಿದ್ದರು. ನಂತರ ಅವರು ಮತ್ತೊಂದು ಫೋಟೋವನ್ನು ಎತ್ತಿಕೊಂಡರು. ಅದನ್ನು ಕ್ಯಾಮೆರಾಗಳ ಮುಂದೆ ಹಿಡಿದು ಸರಿಯಾಗಿ ಮಧ್ಯಕ್ಕೆ ಹರಿದರು. ಆದರೆ, ಅರ್ಧ ಹರಿದ ನಂತರ ಅದು ಬಾಳಾ ಠಾಕ್ರೆ ಫೋಟೋ ಎಂಬುದು ಅವರಿಗೆ ಅರಿವಾಯಿತು. ತಕ್ಷಣವೇ ಅವರು ಆತಂಕದಿಂದ ಆ ಅರ್ಧ ಹರಿದ ಫೋಟೋವನ್ನು ಕಾಗದಗಳ ಕಟ್ಟಿನ ಕೆಳಗೆ ಬಚ್ಚಿಟ್ಟು, ಏನೂ ಆಗಿಲ್ಲವೆಂಬಂತೆ ನಿರಾಳವಾಗಿ ಕ್ಯಾಮೆರಾಗಳ ಮುಂದೆ ನಗಲು ಪ್ರಾರಂಭಿಸಿದರು.

ಆ ಫೋಟೋದಲ್ಲಿ ಒಂದು ಬದಿಯಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದಿರುವ ಬಾಳಾಸಾಹೇಬ್ ಠಾಕ್ರೆ ಮತ್ತು ಇನ್ನೊಂದು ಬದಿಯಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಇದ್ದರು. ಸ್ವತಃ ತಮ್ಮದೇ ಪಕ್ಷದ ಪೂಜ್ಯನೀಯ ವ್ಯಕ್ತಿಯಾದ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನು ಶೈನಾ ಎನ್‌ಸಿ ಹರಿದಿದ್ದಾರೆ ಎಂಬುದು ತೀವ್ರ ವಿವಾದಕ್ಕೆ ಕಾರಣವಾಯಿತು. ಇಲ್ಲಿಂದ ಘಟನೆಯು ರಾಜಕೀಯ ತಿರುವು ಪಡೆದುಕೊಂಡಿದ್ದು, ಬಾಳಾಸಾಹೇಬ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಮೊದಲಿಗೆ ಶಿವಸೇನೆ ನಾಯಕಿ ಈ ವಿಚಾರದಲ್ಲಿ ತಾವೇನೂ ತಪ್ಪು ಮಾಡಿಲ್ಲವೆಂದು ವಾದಿಸಿದ್ದರು. ಆದರೆ, ಇಂದು ಅವರ ಧ್ವನಿ ಕ್ಷಮೆಯಾಚನೆಯತ್ತ ತಿರುಗಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿಯ ಪುಸ್ತಕ ವಿರೋಧಿಸುವ ಭರದಲ್ಲಿ ಬಾಳಾ ಠಾಕ್ರೆಯ ಫೋಟೋ ಹರಿದ ಶಿವಸೇನೆ ನಾಯಕಿ!

“ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ನಾನು ಬಾಳಾಸಾಹೇಬ್ ಅವರ ವಿಚಾರಗಳನ್ನು ಉಲ್ಲೇಖಿಸಿದ್ದೆ. ಆದರೆ, ನನ್ನ ನಡೆ ಮತ್ತು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಲಾಗಿದೆ. ಬಾಳಾಸಾಹೇಬ್ ಅವರಿಗೆ ಅಗೌರವ ತೋರುವ ಉದ್ದೇಶ ನನಗೆ ಎಂದಿಗೂ ಇರಲಿಲ್ಲ. ಬದಲಾಗಿ, ಅವರು ತಮ್ಮ ಜೀವನದುದ್ದಕ್ಕೂ ಎತ್ತಿಹಿಡಿದ ಉಜ್ವಲ ಆದರ್ಶಗಳಿಂದ ನಾನು ಸ್ಫೂರ್ತಿ ಪಡೆಯುತ್ತೇನೆ” ಎಂದು ಶೈನಾ ಎನ್‌ಸಿ ಇಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನನ್ನ ನಡೆಯಿಂದ ನಿಜವಾದ ಶಿವಸೈನಿಕರು ಅಥವಾ ಬಾಳಾಸಾಹೇಬ್ ಅವರ ಅಭಿಮಾನಿಗಳ ಭಾವನೆಗಳಿಗೆ ಅಚಾತುರ್ಯದಿಂದ ನೋವಾಗಿದ್ದರೆ, ನಾನು ಅವರಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ನನ್ನ ನಡೆಯನ್ನು ತಪ್ಪಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದವರಿಗೆ ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಬಾಳಾಸಾಹೇಬ್ ಮೇಲಿನ ನನ್ನ ಪ್ರೀತಿ ಮತ್ತು ನಿಷ್ಠೆಯನ್ನು ಸಾಬೀತುಪಡಿಸಲು ನನಗೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ!” ಎಂದು ಬರೆದುಕೊಂಡಿರುವ ಅವರು, ದಿವಂಗತ ನಾಯಕನೊಂದಿಗೆ ಕಳೆದ ವರ್ಷಗಳ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಉದ್ಧವ್ ನೇತೃತ್ವದ ಶಿವಸೇನೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, “ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಬಾಳಾಸಾಹೇಬ್ ಅವರ ಆದರ್ಶಗಳೊಂದಿಗೆ ರಾಜಿ ಮಾಡಿಕೊಂಡವರು ನನಗೆ ಬಾಳಾಸಾಹೇಬ್ ಬಗ್ಗೆ ಪಾಠ ಮಾಡಬಾರದು” ಎಂದು ಕಿಡಿಕಾರಿದ್ದಾರೆ. “ಕೆಲವು ಸಂಬಂಧಗಳು ಮತ್ತು ಕೃತಜ್ಞತೆಯ ಋಣಗಳು ನಿಮ್ಮ ಅಧಿಕಾರ ಮತ್ತು ಸ್ವಾರ್ಥದ ರಾಜಕಾರಣವನ್ನು ಮೀರಿದ್ದಾಗಿರುತ್ತವೆ. ಬಾಳಾಸಾಹೇಬ್ ಅವರ ಆಶೀರ್ವಾದ ಮತ್ತು ಅವರೊಂದಿಗಿನ ನೆನಪುಗಳು ನನ್ನ ನಿಜವಾದ ಶಕ್ತಿಯಾಗಿದ್ದು, ಅವುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರಿಗೆ ನನ್ನ ವಿನಮ್ರ ನಮನಗಳು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಫಡ್ನವೀಸ್, ಉದ್ಧವ್, ರಾಜ್ ಠಾಕ್ರೆ: ಮಾತಿನಲ್ಲೇ ರಾಜಕೀಯ ವ್ಯಂಗ್ಯ

ಬಾಳಾಸಾಹೇಬ್ ತಮ್ಮ ತಂದೆಯ ಅತ್ಯಂತ ಆಪ್ತ ಸ್ನೇಹಿತರಾಗಿದ್ದರಿಂದ ತಾವು ಚಿಕ್ಕ ಹುಡುಗಿಯಾಗಿದ್ದಾಗಲೇ ಆ ಪ್ರಭಾವಿ ನಾಯಕನನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ಮತ್ತು ಎರಡೂ ಕುಟುಂಬಗಳು ನಿಕಟ ಬಾಂಧವ್ಯ ಹೊಂದಿದ್ದವು ಎಂದು ಅವರು ಸ್ಮರಿಸಿಕೊಂಡಿದ್ದಾರೆ. “ಮಹಾರಾಷ್ಟ್ರಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅವರೊಬ್ಬ ಅನನ್ಯ ಮತ್ತು ಅದ್ಭುತ ನಾಯಕ. ಕಟ್ಟಾ ರಾಷ್ಟ್ರವಾದಿ, ನಿಷ್ಠಾವಂತ ಮತ್ತು ಹೆಮ್ಮೆಯ ಹಿಂದೂ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅವರು ಹಿಂದುತ್ವದ ಆದರ್ಶಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ನಿರಂತರವಾಗಿ ದೃಢ ಮತ್ತು ನಿರ್ಭೀತ ನಿಲುವು ತಳೆದಿದ್ದರು. ಅವರ ವಿಚಾರಗಳ ಸ್ಪಷ್ಟತೆ, ಪ್ರಾಮಾಣಿಕತೆ ಮತ್ತು ಉಜ್ವಲ ಉತ್ಸಾಹ ನನಗೆ ಯಾವಾಗಲೂ ಸ್ಫೂರ್ತಿ ನೀಡಿವೆ” ಎಂದು ಶೈನಾ ಹೇಳಿದ್ದಾರೆ.

ಇಂದು ಬಾಳ್ ಠಾಕ್ರೆ ಅವರ ಫೋಟೋ ಹರಿಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾದಾಗ, ಶೈನಾ ಸಾಕ್ಷ್ಯ ಕೇಳಿದ್ದರು. “ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರ ಫೋಟೋವನ್ನು ನಾನು ಎಲ್ಲಿ ಹರಿದಿದ್ದೇನೆ ಅಥವಾ ಅವಮಾನಿಸಿದ್ದೇನೆ ಎಂಬುದನ್ನು ತೋರಿಸಿ. ತಪ್ಪು ನಿರೂಪಣೆ ಸೃಷ್ಟಿಸಲು ಘಟನೆಯನ್ನು ಉದ್ದೇಶಪೂರ್ವಕವಾಗಿ ತಿರುಚುವುದನ್ನು ಸಹಿಸುವುದಿಲ್ಲ. ನನ್ನ ವಿರುದ್ಧ ಮಾನಹಾನಿಕರ ಆರೋಪಗಳನ್ನು ಹರಡುವ ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೌದು, ನಾನು ಹೇಳಿದಂತೆ ಮಣಿಶಂಕರ್ ಅಯ್ಯರ್ ಅವರ ಫೋಟೋವನ್ನು ನಾನು ಸಾವಿರ ಬಾರಿ ಹರಿಯುತ್ತೇನೆ ಮತ್ತು ಇದನ್ನೇ ಬಾಳಾಸಾಹೇಬ್ ನಮಗೆ ಕಲಿಸಿದ್ದಾರೆ” ಎಂದು ಹೇಳಿ ಕಾರ್ಯಕ್ರಮದ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಮಣಿಶಂಕರ್ ಅಯ್ಯರ್ ಅವರ ಮುಖ ಮಾತ್ರ ಹರಿದಿರುವಂತೆ ಕಾಣುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More