ಜ. 20ರೊಳಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಘೋಷಿಸಿ; ಸರ್ಕಾರಕ್ಕೆ ಮೃತ್ಯುಂಜಯ ಶ್ರೀ ಗಡುವು
Panchamasali Reservation: 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ (Panchamasali Reservation) ಮತ್ತೆ ಆರಂಭವಾಗಿದ್ದು, ಈ ಬಾರಿ ಜಯಮೃತ್ಯುಂಜಯ ಸ್ವಾಮೀಜಿ ಅವರು ಸರ್ಕಾರಕ್ಕೆ ಕೊನೆಯ ಡೆಡ್ಲೈನ್ ನೀಡಿದ್ದಾರೆ. ಹಾಗಾದ್ರೆ, ಡೆಡ್ಲೈನ್ಯಾವಾಗ| ಸ್ವಾಮೀಜಿ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಹಾವೇರಿ, (ಜನವರಿ 12): 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ (Panchamasali Reservation) ಮತ್ತೆ ಆರಂಭವಾಗಿದೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Basava Jayamruthyunjaya Swamiji) ಅವರ ನೇತೃತ್ವದಲ್ಲಿ ಇಂದು(ಜನವರಿ 12) ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಗ್ರಾಮದಲ್ಲಿ ಬೃಹತ್ ಪ್ರತಿಭಟನಾ ನಡೆಯಿತು. ನಂತರ ಪ್ರತಿಭಟನಾಕಾರರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಯಿತು. ಇನ್ನು ಇದೇ ವೇಳೆ ಸ್ವಾಮೀಜಿ ಮಾತನಾಡಿ, ಜನವರಿ 20ರ ಒಳಗೆ ಪಂಚಮಸಾಲಿ ಹೋರಾಟ ಸಮಿತಿ ಸಭೆ ಕರೆದು ಮಾತನಾಡಿ ಮೀಸಲಾತಿ ಬಗ್ಗೆ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಗಡುವು ನೀಡಿದರು.
ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಪುಣ್ಯಕಟ್ಟಿಕೊಳ್ಳಿ. 2ಎ ಮೀಸಲಾತಿ ಸಿಕ್ಕರೆ ಸಾಕು, ನಮ್ಮ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತದೆ. ಜ.20ರೊಳಗೆ ಒಳಗೆ ಸಚಿವ ಸಂಪುಟ ಸಮಿತಿ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು. ಬಜೆಟ್ ಅಧಿವೇಶನ ಒಳಗೆ ತೀರ್ಮಾನ ಆಗದಿದ್ದರೆ, ದಾವಣಗೆರೆ ಅಥವಾ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.
2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ರಾಜಕಾರಣಿಗಳು ಯಾರೂ ಹೋರಾಟಕ್ಕೆ ಬಂದಿಲ್ಲ. ಸ್ವಾಮೀಜಿಗಳೇ ಬಂದಿದ್ದಾರೆ. ಈ ಹಿಂದಿನ ಸರ್ಕಾರ 2ಡಿ ಮೀಸಲಾತಿ ನೀಡಿತು. ಆದರೆ ಅದು ಜಾರಿಗೆ ಆಗಿಲ್ಲ. ಯಾವುದೇ ಸರ್ಕಾರ ಇರಲಿ, ಕಾಂಗ್ರೆಸ್, ಬಿಜೆಪಿ ಇರಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಬೇರೊಬ್ಬ ಸ್ವಾಮೀಜಿ 2ಡಿ ಮೀಸಲಾತಿ ತೋರಿಸಿ, ಸಮಾಜಕ್ಕೆ ಮೀಸಲಾತಿ ಸಿಕ್ಕಿತು ಎಂದರು. ಸಿದ್ದರಾಮಯ್ಯನವರೇ ನಮಗೆ ಅನುದಾನ ಬೇಕಿಲ್ಲ, ಅಧಿಕಾರ ಬೇಕಿಲ್ಲ. 12 ಶಾಸಕರನ್ನು ನೀಡಿದ್ದೇವೆ. ಆದರೆ, 2 ತಿಂಗಳು ಕಳೆದರು ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಲಿಂಗಾಯತರು ಬೀದಿಯಲ್ಲಿ ಕುಳಿತು ಪೂಜೆ ಮಾಡಿದರೂ ನಿಮಗೆ ಕರುಳು ಚುರುಕ್ ಎನ್ನಲಿಲ್ಲ. 20 ದಿನ ಅದರೂ ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಯಾರು ಅನ್ಯಾಯ ಮಾಡುತ್ತಾರೋ ಅವರ ಕುರ್ಚಿ ಅಲ್ಲಾಡಿಸುವ ಶಕ್ತಿ ಇದೆ. ಲೋಕಸಭಾ ಚುನಾವಣೆಯ ಒಳಗೆ ನಮ್ಮ ಮೀಸಲಾತಿ ಬಗ್ಗೆ ನಿರ್ಧಾರ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ