ಸೋಯಾಬೀನ್ ಬೆಳೆಗೆ ಬೂದು ರೋಗ; ಹಾವೇರಿ ರೈತರು ಕಂಗಾಲು
ಸೋಯಾಬೀನ್ ಬೆಳೆಯನ್ನ ಕರ್ಜಗಿ ಮಾತ್ರವಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳ ರೈತರು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದರು. ಪ್ರತಿ ಎಕರೆಗೆ ಹತ್ತರಿಂದ ಹನ್ನೆರಡು ಕ್ವಿಂಟಾಲ್ ಇಳುವರಿ ಬರುತ್ತಿತ್ತು.
ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ರೈತರು ಸೋಯಾಬೀನ್ (Soya bean) ಬೆಳೆಯುತ್ತಿದ್ದರು. ಇಲ್ಲಿನ ರೈತರು ಬೆಳೆಯುತ್ತಿರುವ ಸೋಯಾಬಿನ್ ಬೆಳೆಗೆ ಈವರೆಗೆ ಯಾವುದೇ ರೋಗ ಕಾಣಿಸಿಕೊಂಡಿರಲಿಲ್ಲವಂತೆ. ಮೇಲಾಗಿ ಇಲ್ಲಿನ ರೈತರಿಗೆ ಹೆಚ್ಚಿನ ಇಳುವರಿ ತಂದುಕೊಡುವ ಬೆಳೆಯಾಗಿತ್ತು. ಹಾಗಾಗಿ ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬಿತ್ತನೆ ಮಾಡಿದ್ದರು. ಬೆಳೆ ಕೂಡಾ ಭರಪೂರ ಬೆಳೆದು, ರೈತರ ಮೊಗದಲ್ಲಿ ಭರವಸೆ ಮೂಡಿಸಿತ್ತು. ಆದರೆ ಸೋಯಾಬಿನ್ ಬೆಳೆಗೆ ಬಂದ ಬೂದು ರೋಗ ಈಗ ರೈತರ ಬದುಕನ್ನೆ ಕಸಿದುಕೊಂಡಂತಾಗಿದೆ.
ಸೋಯಾಬೀನ್ ಬೆಳೆಯನ್ನ ಕರ್ಜಗಿ ಮಾತ್ರವಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳ ರೈತರು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದರು. ಪ್ರತಿ ಎಕರೆಗೆ ಹತ್ತರಿಂದ ಹನ್ನೆರಡು ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಸೋಯಾಬೀನ್ ಬೆಳೆ ಬೆಳೆಯೋಕೆ ಶುರು ಮಾಡಿದಾಗಿನಿಂದಲೂ ಉತ್ತಮ ಇಳುವರಿ ಕಂಡಿದ್ದ ರೈತರು, ಪ್ರಸಕ್ತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸೋಯಾಬೀನ್ ಬಿತ್ತನೆ ಮಾಡಿದ್ದರು. ಆದರೆ ಈ ಬಾರಿ ಫಸಲು ಬರುವ ಸಮಯದಲ್ಲಿ ಬೆಳೆಗೆ ಬೂದು ರೋಗ ಕಾಣಿಸಿಕೊಂಡಿದೆ. ಬೆಳೆ ಬೂದು ರೋಗಕ್ಕೆ ಒಳಗಾಗಿರುವುದರಿಂದ ಹೆಚ್ಚೆಂದರೆ ಎಕರೆಗೆ ಒಂದರಿಂದ ಎರಡು ಕ್ವಿಂಟಲ್ ಇಳುವರಿ ಬರಬಹುದು. ಇದು ಸೋಯಾಬೀನ್ ಬೆಳೆದ ರೈತರನ್ನ ಕಂಗಾಲಾಗಿಸಿದೆ.
ಕರ್ಜಗಿ ಗ್ರಾಮ ಒಂದರಲ್ಲೇ ಐನೂರು ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ರೈತರು ಸೋಯಾಬೀನ್ ಬೆಳೆದಿದ್ದಾರೆ. ಆದರೆ ಶೇಕಡಾ ಎಂಬತ್ತರಷ್ಟು ರೈತರ ಜಮೀನಿನಲ್ಲಿ ಬೆಳೆದ ಸೋಯಾಬೀನ್ ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಸೋಯಾಬೀನ್ ಬೆಳೆ ಬೆಳೆಯೋಕೆ ಪ್ರತಿ ಎಕರೆಗೆ ರೈತರು ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿವರೆಗೆ ಖರ್ಚು ಮಾಡಿದ್ದಾರೆ. ಈಗ ಬೆಳೆಗೆ ಬೂದು ರೋಗ ಕಾಣಿಸಿಕೊಂಡಿರುವುದರಿಂದ ಮಾಡಿದ ಖರ್ಚು ಬಾರದಂಥಹ ಪರಿಸ್ಥಿತಿ ರೈತರಿಗೆ ಎದುರಾಗಿದೆ.
ಕೇವಲ ಕರ್ಜಗಿ ಗ್ರಾಮ ಮಾತ್ರವಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸೋಯಾಬಿನ್ ಬೆಳೆದ ರೈತರ ಪರಿಸ್ಥಿತಿ ಇದೇ ಆಗಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಸೋಯಾಬೀನ್ ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ, ರೈತರ ಪರಿಸ್ಥಿತಿ ಅವಲೋಕನ ಮಾಡಬೇಕಿದೆ. ಈಗಾಗಲೇ ಕರ್ಜಗಿ ಗ್ರಾಮದ ರೈತರು ಆಗಿರುವ ಸಮಸ್ಯೆ ಕುರಿತು ಮೊನ್ನೆ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಹಿತಿ ನೀಡಿ, ಮನವಿ ಸಲ್ಲಿಸಿದ್ದಾರೆ. ಸದ್ಯ ಹಾನಿಗೆ ಒಳಗಾದ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕಿದೆ.
ಅತಿಯಾದ ಮಳೆಯಿಂದ ಜಿಲ್ಲೆಯ ರೈತರು ಬೆಳೆ ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದಾರೆ. ಈ ನಡುವೆ ಬೂದು ರೋಗ ಸೋಯಾಬಿನ್ ಬೆಳೆದ ರೈತರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ರೈತರಿಗೆ ಸೂಕ್ತ ಪರಿಹಾರ ಸಿಗಬೇಕಿದೆ.
ಇದನ್ನೂ ಓದಿ
ಬಳ್ಳಾರಿ: ಚಿಲ್ಲಿ ದರ ದಿಢೀರ್ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಮೆಣಸಿನಕಾಯಿ ಬೆಳೆದ ರೈತರು
ತೆಂಗಿನ ಮರ ಏರಿ ರೈತನ ಪ್ರತಿಭಟನೆ; ತಾಲೂಕು ಆಡಳಿತದ ವಿರುದ್ಧ ಆಕ್ರೋಶ: ವಿಡಿಯೋ ವೈರಲ್
(soybean crop is susceptible to disease in Haveri)