ರಾಣೇಬೆನ್ನೂರು: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಮೂವರಿಗೆ ಗಾಯ
Haveri Ranebennur Accident: ಹಾವೇರಿಯ ಚಳಗೇರಿ ಟೋಲ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು, ಅವರನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಖ್ಯಾಂಶಗಳು
- ನಿಂತಿದ್ದ ಲಾರಿಗೆ ಕಾರು ಡಿಕ್ಕಿ
- ಮೂವರು ಸ್ಥಳದಲ್ಲೇ ದುರ್ಮರಣ, ಮೂವರಿಗೆ ಗಾಯ
- ಚಳಗೇರಿ ಟೋಲ್ ಬಳಿ ಭೀಕರ ಅಪಘಾತ
ಹಾವೇರಿ, ಆಗಸ್ಟ್ 20: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ನಡೆದಿದೆ. ಮೃತರನ್ನು ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆ ನಿವಾಸಿಗಳಾದ ಸಿದ್ದಾರ್ಥ (27), ಹಸನ್ಮುಖಿ (29) ಹಾಗೂ ಯಶೋಧಾ ಬಾಯಿ (51) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಸೌಂದರ್ಯ (26), ಸಿಂಧು (24) ಹಾಗೂ ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಣೇಬೆನ್ನೂರಿನಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ವೇಳೆ ಚಳಗೇರಿ ಟೋಲ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಮಾಹಿತಿ ತಿಳಿದು ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಿಹಳ್ಳಿ ಬಳಿ ಸೇತುವೆಯಿಂದ ಲಾರಿ ಬಿದ್ದು ಚಾಲಕ ಸಾವು
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹುಲಿಹಳ್ಳಿ ಬಳಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಲಾರಿ ಚಾಲಕ ಮೃತಪಟ್ಟಿದ್ದಾರೆ. ಹುಲಿಹಳ್ಳಿ ಬಳಿ ಇರೋ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಲಾರಿ ಚಾಲಕ ಓವರಟೇಕ್ ಮಾಡಲು ಮುಂದಾದಾಗ ನಿಯಂತ್ರಣ ಕಳೆದುಕೊಂಡು ಲಾರಿ ಸೇತುವೆಯ ಕೆಳಗೆ ಬಿದ್ದಿದೆ. ಲಾರಿಯಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತ ಚಾಲಕ ಹುಬ್ಬಳ್ಳಿ ಮೂಲದ ಬಸವರಾಜ್ (45 ವರ್ಷ) ಎಂದು ಗುರುತಿಸಲಾಗಿದೆ. ಲಾರಿ ಹುಬ್ಬಳಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 am, Thu, 20 August 26




