ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆ: ಪಕ್ಷದ ವೈಫಲ್ಯವನ್ನು ಒಪ್ಪಿಕೊಂಡ ಕೆಎಸ್ ಈಶ್ವರಪ್ಪ
ಕಾಂಗ್ರೆಸ್ ಒಳ ಜಗಳದ ಬಗ್ಗೆ ಮಾತನಾಡುತ್ತ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದಾದ ವೈಫಲ್ಯವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒಪ್ಪಿಕೊಂಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆ ವಿಚಾರವಾಗಿ ಅವರು ಮಾತನಾಡಿದ್ದಾರೆ.
ಹಾವೇರಿ, ನವೆಂಬರ್ 05: ಕಾಂಗ್ರೆಸ್ ಒಳ ಜಗಳದ ಬಗ್ಗೆ ಮಾತನಾಡುತ್ತ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದಾದ ವೈಫಲ್ಯವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಒಪ್ಪಿಕೊಂಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆ ವಿಚಾರವಾಗಿ ನಗದರಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ನಾವ್ಯಾಕೆ ನೆಗೆದುಬಿದ್ದು ಹೋದ್ವಿ ಹೇಳಿ, ಅದಕ್ಕೆ ಇಲ್ಲಿ ಬಂದು ಕೂತಿದ್ದೇವೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾ ನಾವೀಗ ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವೇಣುಗೋಪಾಲ್, ಸುರ್ಜೇವಾಲ ಬಂದಿದ್ದು ಕಲೆಕ್ಷನ್ಗೆ, ಕರೆಕ್ಷನ್ಗೆ ಅಲ್ಲ
ಸಿಎಂ ಬದಲಾವಣೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸುರ್ಜೇವಾಲ, ವೇಣುಗೋಪಾಲ್ ಬಂದು ಮೀಟಿಂಗ್ ಮಾಡಿದ್ದರು. ಬಹಿರಂಗ ಹೇಳಿಕೆ ನೀಡಿದರೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಇಬ್ಬರೂ ಮೀಟಿಂಗ್ ಮಾಡಿ ದುಡ್ಡು ತೆಗೆದುಕೊಂಡು ಹೋದರು. ವೇಣುಗೋಪಾಲ್, ಸುರ್ಜೇವಾಲ ಬಂದಿದ್ದು ಕಲೆಕ್ಷನ್ಗೆ, ಕರೆಕ್ಷನ್ಗೆ ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ ಬರ ಇದೆ, ರಾಜ್ಯ ಸರ್ಕಾರ 10 ಪೈಸಾನಾದರೂ ನೀಡಿದೆಯಾ?
ಕೇಂದ್ರದಿಂದ ಪರಿಹಾರ ಕೊಡಿಸಲು ಬಿಜೆಪಿ ಸಂಸದರ ಹಿಂದೇಟು ಹಾಕಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ, ರಾಜ್ಯ ಸರ್ಕಾರ 10 ಪೈಸಾನಾದರೂ ನೀಡಿದೆಯಾ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಮೊದಲು ಬರ ಪರಿಹಾರ ನೀಡಿ ಆಮೇಲೆ ಕೇಂದ್ರವನ್ನ ಕೇಳಲಿ. ರಾಜ್ಯದ ಯಜಮಾನ ಸಿಎಂ, ಮೊದಲ ಆದ್ಯತೆ ಸಿಎಂಗೆ ಇರುತ್ತೆ. ರಾಜ್ಯದ ಸಂಸದರು ಏನು ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಬಿಗ್ ಶಾಕ್: ಯಡಿಯೂರಪ್ಪ ಸಂಬಂಧಿ ಕಾಂಗ್ರೆಸ್ಗೆ! ಶೆಟ್ಟರ್ ಮಾತುಕತೆ ಯಶಸ್ವಿ
ನಾನು ದೆಹಲಿಗೆ ಹೋದಾಗ ಬರ ಪರಿಹಾರಕ್ಕೆ ಮನವಿ ಮಾಡಿದ್ದೆ. ಅಮಿತ್ ಶಾ, ಜೆ.ಪಿ.ನಡ್ಡಾ ಬಳಿ ಬರ ಪರಿಹಾರಕ್ಕೆ ಮನವಿ ಮಾಡಿದ್ದೆ. ಆಗ ರಾಜ್ಯ ಸರ್ಕಾರ ಎಷ್ಟು ಬರ ಪರಿಹಾರ ನೀಡಿದೆ ಎಂದು ಪ್ರಶ್ನಿಸಿದರು. ನಮ್ಮ ನಾಯಕರ ಪ್ರಶ್ನೆಯಿಂದ ನಾನು ತಲೆ ತಗ್ಗಿಸೋ ಹಾಗಾಯಿತು ಎಂದು ಹೇಳಿದ್ದಾರೆ.
ಲೂಟಿ ಹೊಡೆಯುವುದರಲ್ಲಿ ಸಿಎಂ ಹಾಗೂ ಮಗನದ್ದೇ ಸಿಂಹಪಾಲು
ಈ ಸರ್ಕಾರ ಶಾಸಕರ ಕ್ಷೇತ್ರಗಳಿಗೆ ಅನುದಾನವೇ ನೀಡುತ್ತಿಲ್ಲ. ಓರ್ವ ಶಾಸಕನಿಗೆ ಸಾವಿರ ಕೋಟಿ ಅಲ್ಲ 100 ಕೋಟಿ ರೂ. ಅನುದಾನ ನೀಡಿಲ್ಲ. ಈ ಸರ್ಕಾರ ಐದು ವರ್ಷ ಇರಲು ಸಾಧ್ಯವಿಲ್ಲ. ಇದ್ದಷ್ಟು ದಿನ ಲೂಟಿ ಹೊಡೆಯೋಣ ಅಂತಾ ಮಂತ್ರಿಗಳು ನಿರ್ಧರಿಸಿದ್ದಾರೆ. ಲೂಟಿ ಹೊಡೆಯುವುದರಲ್ಲಿ ಸಿಎಂ ಹಾಗೂ ಮಗನದ್ದೇ ಸಿಂಹಪಾಲು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.