ರಾಮನಗರ, (ಮಾರ್ಚ್ 26): ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಕೊನೆಗೆ ಮಂಡ್ಯ ಲೋಕಸಭಾ (Mandya Loksabha) ಕ್ಷೇತ್ರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಇನ್ನು ಕೆಲ ಹೊತ್ತಿನಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದರ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಶಾಸಕ ಎಚ್ಸಿ ಬಾಲಕೃಷ್ಣ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಸಿ.ಪಿ.ಯೋಗೇಶ್ವರ್ಗೆ (HC Balakrishna) ಕಾಂಗ್ರೆಸ್ಗೆ ಆಹ್ವಾನ ನೀಡಿದ್ದಾರೆ.
ಇಂದು (ಮಾರ್ಚ್ 26) ರಾಮನಗರದ ಮಾಗಡಿಯಲ್ಲಿ ಮಾತನಾಡಿದ ಎಚ್ಸಿ ಬಾಲಕೃಷ್ಣ, ಚನ್ನಪಟ್ಟಣದಲ್ಲಿ ನಿಖಿಲ್ ನಿಲ್ಲಿಸಬೇಕು ಅಂತ ಕುಮಾರಸ್ವಾಮಿ ಹೋಂ ಮಿನಿಸ್ಟರ್ ಆದೇಶ ಆಗಿದೆ. ಅವರ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಗೊತ್ತಾಗುತ್ತೆ. ಇವರನ್ನ ಒದ್ದು ಓಡಿಸೋಣ ಎಂದು ಅವರು, ಅವರನ್ನ ಒದ್ದು ಓಡಿಸೋಣ ಅಂತ ಇವರು ನಿಂತಿದ್ದಾರೆ. ಕೊನೆಗೆ ಕಾರ್ಯಕರ್ತರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ
ಇವರೇನೋ ಎಲ್ಲೋ ಹೋಗಿ ಅಡ್ಜಸ್ಟ್ ಆಗುತ್ತಾರೆ. ಆದ್ರೆ, ಕಾರ್ಯಕರ್ತರ ಕಥೆ ಏನು.? ಕಾರ್ಯಕರ್ತರು ನಿಜವಾಗಿಯೂ ಬಲಿಪಶು ಆಗುತ್ತಾರೆ. ಈಗಲೇ ಚನ್ನಪಟ್ಟಣ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಉಪಚುನಾವಣೆ ಆದ್ರೆ ಯೋಗೇಶ್ವರ್ ಗೆ ಟಿಕೆಟ್ ಸಿಗಲ್ಲ. ಈಗಲೇ ಅವರ ಕಾರ್ಯಕರ್ತರು ಕಾಂಗ್ರೆಸ್ ಗೆ ಬನ್ನಿ, ನಿಮ್ಮ ನಾಯಕರು ಬಂದ್ರು ಒಳ್ಳೆಯದೇ, ಈಗಲೇ ಬಂದ್ರೆ ನಿಮ್ಮಲ್ಲೇ ಯಾರಾದ್ರೂ ಎಂಎಲ್ಎ ಆಗಬಹುದು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಆಹ್ವಾನ ನೀಡಿದರು.
ಡಿಕೆ ಬ್ರದರ್ಸ್ ರಕ್ತ ಚರಿತ್ರೆ ಉಳ್ಳವರು ಎಂಬ ಸಿಪಿ ಯೋಗೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಸಿಪಿ ಯೋಗೇಶ್ವರ್ ಗೆ ಅದರ ಅನುಭವ ಆಗಿದ್ಯಾ. ಕನಕಪುರ ಎಲ್ಲಾ ಓಡಾಡಿಕೊಂಡು ಬಂದಿದ್ದಾರೆ. ಎಲ್ಲಾದರು ಅನುಭವ ಆಗಿದ್ಯಾ.? ಅಪ ಪ್ರಚಾರ ಮಾಡಲು ಇತಿಮಿತಿ ಇರಬೇಕು. ಅವರಿಗೆ ತಲೆ ಕೆಟ್ಟುಹೋಗಿದೆ ಎಂದು ತಿರುಗೇಟು ನೀಡಿದರು.
ಅರೆ ಮಿಲಿಟರಿ ಪಡೆ ಬಂದು ಚುನಾವಣೆ ಮಾಡಬೇಕು ಎನ್ನುತ್ತಾರೆ. ಅಭಿವೃದ್ಧಿ ವಿಚಾರ ಮಾತಾಡಿ ಮತ ಗಿಟ್ಟಿಸಿಕೊಳ್ಳುತ್ತಿಲ್ಲ. ಅಪಪ್ರಚಾರ ಮಾಡಿ ಮತ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನ ಬುದ್ದಿವಂತರಿದ್ದಾರೆ. ಯಾರು ಅಭಿವೃದ್ಧಿ ಮಾಡ್ತಾರೆ ಎಂಬುದು ಗೊತ್ತು. ಜನ ಇದಕ್ಕೆ ಉತ್ತರ ಕೊಡುತ್ತಾರೆ. ನಾನು ಮುನಿರತ್ನ, ಸಿಪಿ ಯೋಗೇಶ್ವರ್ ಇಬ್ಬರಿಗೂ ಹೇಳುತ್ತೇನೆ ಅಭಿವೃದ್ಧಿ ಬಗ್ಗೆ ಚರ್ಚೆ ಆಗಲಿ. ಅವರು ಅಭ್ಯರ್ಥಿಯನ್ನು ಕರೆದುಕೊಂಡು ಬರುತ್ತಾರಾ ಕೇಳಿ ಎಂದು ಸವಾಲು ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ