ಸೂಕ್ತ ಅಧ್ಯಯನ ನಡೆಸದೇ ಶಕ್ತಿ ಯೋಜನೆ ಪ್ರಶ್ನಿಸಿದ್ದ ಪಿಐಎಲ್ಗೆ ಹೈಕೋರ್ಟ್ ಅಸಮಾಧಾನ: ಪಿಐಎಲ್ ಹಿಂಪಡೆದ ಅರ್ಜಿದಾರರು
ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯಲ್ಲಿ ಅವ್ಯವಸ್ಥೆ ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿಗಳ ಪಿಐಎಲ್ ಗೆ ಹಿನ್ನಡೆಯಾಗಿದೆ. ಸೂಕ್ತ ಅಧ್ಯಯನವಿಲ್ಲದೇ ಅಂಕಿ ಅಂಶ ನೀಡದೇ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಅರ್ಜಿದಾರರೇ ಪಿಐಎಲ್ ಹಿಂಪಡೆಯಲು ಅನುಮತಿ ಕೇಳಿದ ಹಿನ್ನೆಲೆ ಹೈಕೋರ್ಟ್ ಪಿಐಎಲ್ ಹಿಂಪಡೆಯಲು ಅನಮತಿ ನೀಡಿದೆ.
ಬೆಂಗಳೂರು, ಆಗಸ್ಟ್ 31: ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ (Free Bus Travel For Women Scheme) ಯಲ್ಲಿ ಅವ್ಯವಸ್ಥೆ ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿಗಳ ಪಿಐಎಲ್ ಗೆ ಹಿನ್ನಡೆಯಾಗಿದೆ. ಶಕ್ತಿ ಯೋಜನೆಯಿಂದ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಿದೆ. ಸಾರಿಗೆ ಬಸ್ ಗಳಲ್ಲಿ ಸೀಟಿಗಾಗಿ ಹೊಡೆದಾಟ ನಡೆಯುತ್ತಿದೆ. ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲಾಗುತ್ತಿಲ್ಲ. ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಕೆಳಗೆ ಬಿದ್ದ ಘಟನೆ ನಡೆದಿವೆ. ಶಾಲಾ ಕಾಲೇಜು ಪರೀಕ್ಷೆಗಳಿಗೆ ಸರಿಯಾದ ವೇಳೆಗೆ ಹೋಗಲಾಗುತ್ತಿಲ್ಲ. ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣ ಯೋಜನೆಗೆ ಬಳಕೆಯಾಗಿದೆ. ವರ್ಷಕ್ಕೆ 3200 ರಿಂದ 3400 ಕೋಟಿ ರೂಪಾಯಿ ನಷ್ಟವಾಗಲಿದೆ.
ಟಿಕೆಟ್ ಖರೀದಿಸಿದವರಿಗೆ ಶೇ.50 ರಷ್ಟು ಸೀಟ್ ಮೀಸಲಿಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಪಿಐಎಲ್ ಮೂಲಕ ಹೈಕೋರ್ಟ್ಗೆ ಕಾನೂನು ವಿದ್ಯಾರ್ಥಿಗಳ ಮನವಿ ಮಾಡಿದ್ದರು. ಆದರೆ ಸಾರಿಗೆ ನಿಯಮದ ಅಧ್ಯಯನ ನಡೆಸದೇ, ಅಂಕಿಅಂಶ ಸಂಗ್ರಹಿಸದೇ ಪಿಐಎಲ್ ಸಲ್ಲಿಸಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬೆಂಗಳೂರಿನ 43 ನಗರಗಳಲ್ಲಿ ರೂಮ್ ಬಾಡಿಗೆಯಲ್ಲಿ ಹೆಚ್ಚಳ, ಏಳು ಕಡೆಗಳಲ್ಲಿ ವಸತಿ ದರಗಳಲ್ಲಿ ಇಳಿಕೆ
ಈ ಯೋಜನೆಗೆ ಮೊದಲು ಸಂಚಾರ ಸುಗಮವಾಗಿತ್ತಾ. ಯೋಜನೆಯಿಂದಾಗಿಯೇ ಬಸ್ಗಳಲ್ಲಿ ದಟ್ಟಣೆ ಉಂಟಾಗಿದೆಯೇ? ಯಾವ ರೂಟ್ಗಳಲ್ಲಿ ಪ್ರಯಾಣಿಕರ ದಟ್ಟಣೆಯಿದೆ? ಸಾರ್ವಜನಿಕ ಬಸ್ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮವಿದೆಯೇ? ಅರ್ಜಿಗೆ ಮೊದಲು ಸಾರಿಗೆ ನಿಯಮಗಳ ಅಧ್ಯಯನ ನಡೆಸಿಲ್ಲವೇಕೆ? ಎಂದು ಅರ್ಜಿದಾರರಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದಲ್ಲಿ ವಾರದ 5 ದಿನದಲ್ಲಿ ಹೆಚ್ಚುವರಿ ಟ್ರಿಪ್ಗೆ ನಿರ್ಧಾರ
ಅಲ್ಲದೇ ಯೋಜನೆ ಮೂಲಕ ದುರ್ಬಲ ವರ್ಗಗಳಿಗೆ ಮಾತ್ರವೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆಯಲ್ಲವೇ? ನೀವು ಯೋಜನೆಯನ್ನೇ ಪ್ರಶ್ನಿಸುತ್ತಿದ್ದೀರಾ ಅಥವಾ ಬಸ್ಗಳಲ್ಲಿ ಜನಸಂದಣಿಗೆ ಪರಿಹಾರೋಪಾಯ ಬಯಸುತ್ತಿದ್ದೀರಾ? ಎಂಬ ಬಗ್ಗೆ ಅರ್ಜಿಯಲ್ಲೇ ಗೊಂದಲವಿದೆ. ಮುಂಬಯಿ ಲೋಕಲ್ ರೈಲುಗಳ ದಟ್ಟಣೆ ಅರಿವಿದೆಯೇ ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ ಪ್ರಶ್ನಿಸಿದೆ.
ಸೂಕ್ತ ಅಧ್ಯಯನವಿಲ್ಲದೇ ಅಂಕಿ ಅಂಶ ನೀಡದೇ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಹೈಕೋರ್ಟ್ ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ ಅರ್ಜಿದಾರರೇ ಪಿಐಎಲ್ ಹಿಂಪಡೆಯಲು ಅನುಮತಿ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಪಿಐಎಲ್ ಹಿಂಪಡೆಯಲು ಅನಮತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.