ಕರ್ನಾಟಕದಲ್ಲಿ ಕಾಂಗ್ರೆಸ್ ಮೂಲೆಗುಂಪಾಗುವಂಥ ತಂತ್ರ ಹೆಣಿ: ಕುಮಾರಸ್ವಾಮಿಗೆ ದೇವೇಗೌಡರ ಕಿವಿಮಾತು

ಅಪ್ಪ ದೇವೇಗೌಡ-ಮಗ ಕುಮಾರಸ್ವಾಮಿ ನಡುವಿನ ಗುಪ್ತ ಸಭೆಯಲ್ಲಿ ಕಾಂಗ್ರೆಸ್​ ಬೆಳವಣಿಗೆ ಬಗ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ಬೆಳೆಯುತ್ತಿರುವ ರಾಜಕೀಯ ಪ್ರಭಾವದ ಬಗ್ಗೆ ಚರ್ಚೆ ನಡೆಸಿದರು. ಇನ್ನು ಮುಂದೆ ಕಾಂಗ್ರೆಸ್​ ಪಕ್ಷದ ವಿರುದ್ಧ ಕೂಡ ಟೀಕಾಪ್ರಹಾರ ಪ್ರಾರಂಭಿಸಬೇಕೆಂದು ನಿರ್ಧರಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

  • Publish Date - 7:10 pm, Wed, 9 June 21 Edited By: Ghanashyam D M | ಡಿ.ಎಂ.ಘನಶ್ಯಾಮ
ಕರ್ನಾಟಕದಲ್ಲಿ ಕಾಂಗ್ರೆಸ್ ಮೂಲೆಗುಂಪಾಗುವಂಥ ತಂತ್ರ ಹೆಣಿ: ಕುಮಾರಸ್ವಾಮಿಗೆ ದೇವೇಗೌಡರ ಕಿವಿಮಾತು
ಹೆಚ್​.ಡಿ.ದೇವೇಗೌಡ, ಹೆಚ್​.ಡಿ.ಕುಮಾರಸ್ವಾಮಿ

ಒಂದೆಡೆ ಪ್ರತಿದಿನವೂ ರಾಜ್ಯದ ಜನರ ಮುಂದೆ ಬಂದು ರಾಜ್ಯ ಸರಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಇನ್ನೊಂದೆಡೆ, ಹೇಳಬೇಕಾಗಿದ್ದುದನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳುವ ಎಚ್.ಡಿ.ಕುಮಾರಸ್ವಾಮಿ. ಇಬ್ಬರ ಟೀಕೆಯ ಗುರಿ ಒಂದೇ: ರಾಜ್ಯದಲ್ಲಿರುವ ಬಿಜೆಪಿ ಸರಕಾರ. ಆದರೆ, ಇನ್ನು ಮುಂದೆ ಇದು ಹೀಗಿರುವುದಿಲ್ಲ. ಕುಮಾರಸ್ವಾಮಿ, ಕಾಂಗ್ರೆಸ್​ನ ಜಾತಕ ಬಿಚ್ಚಿಡಲು ನಿರ್ಧರಿಸಿದ್ದಾರೆ. ಇದಕ್ಕೆ ಒಂದು ಉದಾಹರಣೆ, ಬುಧವಾರ  (ಜೂನ್ 9)  ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್. ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತ ಕಾಂಗ್ರೆಸ್​ ಮೇಲೆ ಅವರು ಹರಿಹಾಯ್ದಿದ್ದಾರೆ. ಇದು ಇವತ್ತಿನ ಒಂದು ಟ್ವೀಟ್ ಅಂತ ಅಂದುಕೊಂಡಿದ್ದರೆ ತಪ್ಪು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜೋರಾಗಿ ಹರಾಜಿಗಿಡಲು ತಯಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಬಹಳ ಪ್ರಮುಖ ಕಾರಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಜೆಡಿಎಸ್ ಮೂಲಗಳ ಪ್ರಕಾರ, ಬಿಜೆಪಿಗಿಂತ ಜನತಾ ದಳ (ಎಸ್) ನಾಯಕರಿಗೆ ಶಿವಕುಮಾರ್ ತಲೆನೋವಾಗುತ್ತಿರುವ ಲಕ್ಷಣ ಕಾಣುತ್ತಿದೆ. ಈ ವಿಚಾರವನ್ನು ಜೆಡಿಎಸ್ ನಾಯಕರು ಒಪ್ಪಿಕೊಳ್ಳದಿದ್ದರೂ, ಒಳಗೊಳಗೆ ಈ ಕುರಿತು ಬಹಳ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಜೆಡಿಎಸ್ ಮೂಲಗಳು ತಿಳಿಸುತ್ತವೆ. ಇದಕ್ಕೆ ನಿದರ್ಶನ, ದೇವೇಗೌಡ-ಕುಮಾರಸ್ವಾಮಿ ಭೇಟಿ ಮತ್ತು ಈ ಕುರಿತಾಗಿ ನಡೆದಿರುವ ಚರ್ಚೆ.

ಅಪ್ಪ-ಮಗನ ನಡುವೆ ಏನು ನಡೆಯಿತು?
ಈಗ್ಗೆ ಎರಡು ಅಥವಾ ಮೂರು ದಿನದ ಹಿಂದೆ ಅಪ್ಪ ಎಚ್.ಡಿ. ದೇವೇಗೌಡ ಮತ್ತು ಮಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಭೇಟಿಯಾಗಿದ್ದರು. ಅವರಿಬ್ಬರೂ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಮಾಡುತ್ತಿರುವ ದೇವೇಗೌಡರ ಬಗ್ಗೆ ಅವರ ವಿರೋಧಿಗಳು ಹೇಳುತ್ತಿರುವುದೇನೆಂದರೆ, ಅವರಿಗೆ ರಾಜ್ಯ ರಾಜಕೀಯದ ಭವಿಷ್ಯ ಬಹಳ ಮೊದಲೇ ಗೊತ್ತಾಗುತ್ತದೆ ಎಂದು. ಈ ಹಿನ್ನೆಲೆಯಲ್ಲಿ ತಂದೆ-ಮಗನ ಮಾತುಕತೆಯನ್ನು ಉಳಿದವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.

ಜೆಡಿಎಸ್ ಮೂಲಗಳ ಪ್ರಕಾರ, ಕುಮಾರಸ್ವಾಮಿ ಪ್ರತಿದಿನ ಬಿಜೆಪಿ ಸರಕಾರವನ್ನು ಬಯ್ಯುವುದು, ಅಪ್ಪ ದೇವೇಗೌಡರಿಗೆ ಅಷ್ಟು ಇಷ್ಟವಾಗುತ್ತಿಲ್ಲ. ಎಲ್ಲೆಲ್ಲಿ ಜೆಡಿಎಸ್ ಭದ್ರವಾಗಿದೆ, ಅಲ್ಲಿ ಬಿಜೆಪಿಯ ಬೇರು ಆಳಕ್ಕೆ ಇಳಿದಿಲ್ಲ. ನಾವು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷವನ್ನು ಹೆಡೆಮುರಿ ಕಟ್ಟಲು ತಂತ್ರ ಹೆಣೆಯಬೇಕೇ ಹೊರತು ಬಿಜೆಪಿ ಟೀಕಿಸಲು ಅಲ್ಲ. ಆಗಲೇ ನಮ್ಮ ಪಕ್ಷಕ್ಕೆ ಉಳಿಗಾಲ. ಇಲ್ಲಾಂದ್ರೆ, ಬರೀ ಬಿಜೆಪಿ ಸರಕಾರ ಬಯ್ದು ಏನೂ ಪ್ರಯೋಜನ ಇಲ್ಲ. ಅದು ಬೇರೆ, ಈಗ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಬಹಳ ಚಟುವಟಿಕೆ ನಡೆಸುತ್ತಿದ್ದಾರೆ. ಇದಕ್ಕೆ ಏನಾದರೂ ಮಾಡಲೇಬೇಕು, ಎಂದು ದೇವೇಗೌಡರು ಮಗನಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಕಾಂಗ್ರೆಸ್​ ವಿಚಾರಗಳನ್ನು ಬಟಾಬಯಲು ಮಾಡಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

2018ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೆಡಿಎಸ್​ ಪಕ್ಷವನ್ನು ಬಿಜೆಪಿಯ ಬಿ ಟೀಮ್​ ಎಂದು ಹೇಳಿಕೊಂಡು ಓಡಾಡಿದರು. ಪರಿಣಾಮ? ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಭಾರೀ ಹಿನ್ನಡೆ ಆಯ್ತು. ಈಗ ಮತ್ತೆ ಕಾಂಗ್ರೆಸ್​ ಪಕ್ಷವನ್ನು ಟೀಕಿಸಿ, ಕೈ ನಾಯಕರನ್ನು ಖೆಡ್ಡಾಕ್ಕೆ ಬೀಳಿಸಬೇಕು ಎಂದು ದೇವೇಗೌಡರು ಸೂಚಿಸಿದ್ದಾರೆ, ಎಂದು ಮೂಲಗಳು ತಿಳಿಸಿವೆ. ಈ ಚರ್ಚೆಯ ಫಲಶ್ರುತಿಯೇ ಕುಮಾರಸ್ವಾಮಿ ಅವರ ರಾಜಕೀಯ ಹೋರಾಟದಲ್ಲಿ ಆಗಿರುವ ಬದಲಾವಣೆ. ಇನ್ನು ಮುಂದೆ ಅವರು ಬಿಜೆಪಿಯನ್ನು ಟೀಕಿಸುತ್ತಾರೋ ಬಿಡುತ್ತಾರೋ, ಕಾಂಗ್ರೆಸ್ ನಾಯಕರ ಸೋಗಲಾಡಿತನವನ್ನು ಎತ್ತಿ ತೋರಿಸುವುದಂತೂ ಖಂಡಿತ, ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಉದಾಹರಣೆ, ಇಂದಿನ ಸರಣಿ ಟ್ವೀಟ್ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ಹೇಳಿಕೆ

ಇದನ್ನೂ ಓದಿ: ಸಂಕಷ್ಟ ಕಾಲದಲ್ಲಿ ಅಧಿಕಾರ ಲಾಲಸೆ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

(JD (S) supremo HD DeveGowda and his son HD Kumaraswamy discussed strategy to corner Congress and KPCC president DK Shivakumar)