ಬಸವಕಲ್ಯಾಣ ಬೈ ಎಲೆಕ್ಷನ್​​: ಜೆಡಿಎಸ್​ ಅಭ್ಯರ್ಥಿ ಘೋಷಣೆ; ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ತೋರಿಸುತ್ತೇವೆ-HDK

ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದ್ದ ಕಾಂಗ್ರೆಸ್​ ಕುತಂತ್ರದಿಂದ ನಮಗೆ ಕಡಿಮೆ ಸ್ಥಾನ ಸಿಕ್ಕಿತು. ನಂತರ ಅವರೇ ನಮ್ಮ ಮನೆ ಬಾಗಿಲಿಗೆ ಬಂದರೇ ಹೊರತು ನಾವಂತೂ ಅವರ ಬಳಿ ಹೋಗಿಲ್ಲ. ಇನ್ನು ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಈ ಬಾರಿ ಉಪಚುನಾವಣೆಯಲ್ಲಿಯೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಉತ್ತರ ಕೊಡುತ್ತೇವೆ.

ಬಸವಕಲ್ಯಾಣ ಬೈ ಎಲೆಕ್ಷನ್​​: ಜೆಡಿಎಸ್​ ಅಭ್ಯರ್ಥಿ ಘೋಷಣೆ; ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ತೋರಿಸುತ್ತೇವೆ-HDK
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ
Follow us
Skanda
| Updated By: ಸಾಧು ಶ್ರೀನಾಥ್​

Updated on:Mar 18, 2021 | 3:54 PM

ಬೆಂಗಳೂರು: ಈ ಬಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಈ ಹಿಂದೆ ಜೆಡಿಎಸ್​ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದರಾದರೂ ನಾವು ಆ ಕುರಿತು ಸಮಗ್ರವಾಗಿ ಚರ್ಚಿಸಿ, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಣಯ ಕೈಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಲೋಕಸಭಾ ಉಪಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದು, ಕಾಂಗ್ರೆಸ್​ ತೊರೆದು ಬಂದಿರುವ ಸಯ್ಯದ್ ಯೆಸ್ರಬ್ ಅಲಿಖಾದ್ರಿ ಅವರನ್ನು ನಮ್ಮ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದೇವೆ. ಬಸವಕಲ್ಯಾಣ ಮೊದಲಿನಿಂದಲೂ ಜೆಡಿಎಸ್​ ಭದ್ರಕೋಟೆ ಅನ್ನೋದು ನಿರೂಪಿತವಾಗಿದೆ. ನಮ್ಮ ಕಾರ್ಯಕರ್ತರು ಸದಾ ಶ್ರಮಿಸುತ್ತಲೇ ಇದ್ದಾರೆ. ಈ ಬಾರಿಯೂ ಜೆಡಿಎಸ್​ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದ್ದ ಕಾಂಗ್ರೆಸ್​ ಕುತಂತ್ರದಿಂದ ನಮಗೆ ಕಡಿಮೆ ಸ್ಥಾನ ಸಿಕ್ಕಿತು. ನಂತರ ಅವರೇ ನಮ್ಮ ಮನೆ ಬಾಗಿಲಿಗೆ ಬಂದರೇ ಹೊರತು ನಾವಂತೂ ಅವರ ಬಳಿ ಹೋಗಿಲ್ಲ. ಇನ್ನು ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಈ ಬಾರಿ ಉಪಚುನಾವಣೆಯಲ್ಲಿಯೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಉತ್ತರ ಕೊಡುತ್ತೇವೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ 7 ಬಾರಿ ಜೆಡಿಎಸ್‌ ಗೆದಿದ್ದೆ. ಇದು ಜೆಡಿಎಸ್​ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕ್ಷೇತ್ರವಾಗಿದ್ದು, ನಾನು ಸಹ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗ ಬಸವಕಲ್ಯಾಣದಲ್ಲಿ ನಮ್ಮ ಪಕ್ಷ ಗೆಲ್ಲುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.

ನಮ್ಮ ಅಭ್ಯರ್ಥಿ ಸಯ್ಯದ್ ಯೆಸ್ರಬ್ ಅಲಿಖಾದ್ರಿ ಎಲ್ಲಾ ಸಮಾಜದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಸವಕಲ್ಯಾಣದ ಮುಖಂಡರ ಜೊತೆ ಚರ್ಚಿಸಿಯೇ ಅಂತಿಮ ನಿರ್ಧಾರ ಕೈಗೊಂಡಿದ್ದೇವೆ. ಎಲ್ಲರೂ ಇವರ ಆಯ್ಕೆಗೆ ಸಹಮತ ಸೂಚಿಸಿದ್ದಾರೆ. ಸದ್ಯದಲ್ಲೇ ಬೆಳಗಾವಿ ಕ್ಷೇತ್ರದ ಮುಖಂಡರೊಂದಿಗೂ ಚರ್ಚಿಸಿ ಅಭ್ಯರ್ಥಿ ಘೋಷಿಸುತ್ತೇವೆ. ಮುಲ್ಕಿ ಕ್ಷೇತ್ರದ ಬಗ್ಗೆಯೂ ತಿಳಿಸುತ್ತೇವೆ. ಈಗ ನನ್ನ ಆರೋಗ್ಯ ಕೊಂಚ ಏರುಪೇರಾಗಿರುವುದರಿಂದ ತಡವಾಗುತ್ತಿದೆ ಎಂದು ಈ ವೇಳೆ ಹೇಳಿದ್ದಾರೆ.

ಮೈಸೂರಿನ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಂತೆಯೇ ಮೈಸೂರಿನ ಮೈಮುಲ್​ ಚುನಾವಣೆ ಬಗ್ಗೆ ಮಾತನಾಡಿ, ಮೈಸೂರಿನದ್ದು ಮುಗಿದ ಅಧ್ಯಾಯ. ಸಾ.ರಾ.ಮಹೇಶ್​ ತುಂಬಾ ಭಾವನಾತ್ಮಕ ಜೀವಿ ಅವರಿಗೆ ಯಾವ ವಿಚಾರವನ್ನೂ ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದೇನೆ. ಮೈಮುಲ್​ ಚುನಾವಣೆಯ ಬಗ್ಗೆ ನಾನು ಯೋಚಿಸೋದಿಲ್ಲ, ಮುಂಬರುವ ದೊಡ್ಡ ಚುನಾವಣೆ ಗೆಲ್ಲುವುದು ನಮ್ಮ ಗುರಿ. ಕಾರ್ಯಕರ್ತರ ಆಸೆಗೆ ಸ್ಪಂದಿಸಿ ಪ್ರಚಾರಕ್ಕೆ ಹೋಗಿದ್ದೆ. ಸಣ್ಣ ಚುನಾವಣೆ ಎಂಬ ಕಾರಣಕ್ಕೆ ಪ್ರಚಾರಕ್ಕೆ ಹೋಗದೇ ಕಾರ್ಯಕರ್ತರ ಬಯಕೆ ಕಡೆಗಣಿಸುವವನು ನಾನಲ್ಲ. ನಾವು ಹಳ್ಳಿಯಿಂದ ದಿಲ್ಲಿಯವರೆಗಿನ ರಾಜಕೀಯದಲ್ಲಿ ಪಾಲ್ಗೊಳ್ಳುವ ಕುಟುಂಬದ ಹಿನ್ನೆಲೆಯಿಂದ ಬಂದವರು. ಇದರ ಹೊರತಾಗಿ ಮೈಸೂರಿಗೆ ಸಂಬಂಧಿಸಿದಂತೆ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಾನ್ಯಾಕೆ ಮಾತನಾಡಿ ಸುಖಾಸುಮ್ಮನೆ ಯಾರು ಯಾರಿಗೋ ಪ್ರಾಶಸ್ತ್ಯ ನೀಡಲಿ ಎಂದು ಜಿ.ಟಿ.ದೇವೇಗೌಡ ಅವರ ಹೇಳಿಕೆ ಹಾಗೂ ಇನ್ನಿತರ ವಿಚಾರಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್​.ಡಿ.ಕುಮಾರಸ್ವಾಮಿ 

Published On - 3:46 pm, Thu, 18 March 21