ಜೆಡಿಎಸ್ನಿಂದ ಹೊರ ಹೋಗುವವರಿಗೆ ಬಾಗಿಲು ತೆರೆದಿದೆ: ಹೆಚ್.ಡಿ. ಕುಮಾರಸ್ವಾಮಿ
ಮಧು ಬಂಗಾರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ಭೇಟಿ ಮಾಡುವ ವಿಚಾರದಲ್ಲಿ ವಿಶೇಷತೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು: ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರಾ ಎಂಬ ವಿಷಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ವಿಚಾರದಲ್ಲಿ ಯಾವುದೇ ವಿಶೇಷತೆ ಇಲ್ಲ. ಇದು ಹಳೆಯ ಕಥೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ. ಈ ಬೆಳವಣಿಗೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಜೆಡಿಎಸ್ ಹುಟ್ಟಿದಾಗಿನಿಂದ ಇದೇ ಆಗುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ದೇವೆಗೌಡರು ಯಾರನ್ನ ನಂಬಿರುತ್ತಾರೋ ಅವರೇ ಕುತ್ತಿಗೆ ಕುಯ್ಯುತ್ತಾರೆ. ಯಾರು ಹೊರಗೆ ಹೋಗ್ತಾರೆ ಅವರಿಗೆ ಬಾಗಿಲು ತೆರೆದಿದೆ. ಅವರು ಎಲ್ಲಿಗೆ ಹೋಗಬೇಕೋ ಅಂದುಕೊಂಡಿದ್ದಾರೋ ಹೋಗಬಹುದು. ಪಕ್ಷದಿಂದ ಎಲ್ಲ ಪಡೆದು, ನಂತರ ಹೊರಗೆ ಹೋಗುವಾಗ ಏನಾದರೂ ಹೇಳುತ್ತಾರೆ. ಹೋದವರು ಹೋಗಲಿ, ಹೊಸಬರು ಬರುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ಈವರೆಗೆ ಜೆಡಿಎಸ್ ಪಕ್ಷದಿಂದ ಎಷ್ಟು ಜನ ಹೊರ ಹೋಗಿದ್ದಾರೆ. ಅದರಿಂದ ಪಕ್ಷವೇನು ಮುಳುಗಿಲ್ಲವಲ್ಲ.. ಜೀವಂತವಾಗಿದೆ. ಹೀಗಾಗಿ ನಿಷ್ಠೆ ಇಲ್ಲದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರನ್ನು ಪಕ್ಷದಿಂದ ದೂರ ಇಡುತ್ತೇವೆ. ತಾತ್ಕಾಲಿಕವಾಗಿ ಕೈಗೊಂಡ ನಿರ್ಧಾರದಿಂದ ಈ ಸಮಸ್ಯೆ ಉಂಟಾಗಿರುವುದು. ಇಂಥವರ ವಿರುದ್ಧ ಕ್ರಮಕೈಗೊಂಡರೆ ಅವರಿಗೇ ಸುಲಭವಾಗುತ್ತದೆ. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ತಂತ್ರ ಹೂಡಿದ್ರಾ ಡಿಕೆಶಿ..? ಪ್ರಸನ್ನ ಕುಮಾರ್ ಆಡಿಯೋ ಕೊಡ್ತಿದೆ ಸುಳಿವು
ಇದನ್ನೂ ಓದಿ: ಈಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ದೂರು!