ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ವಾಪಸ್, ಯಾವ ಕ್ಷೇತ್ರದಿಂದ ಸ್ಪರ್ಧೆ? ಎಚ್​​​ಡಿಕೆ ಹೇಳಿದ್ದಿಷ್ಟು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಪ್ರಸ್ತುತ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಆದರೆ, ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದೇ ರಾಜ್ಯ ರಾಜಕಾರಣದ ಬಗ್ಗೆಯೂ ಕಣ್ಣಾಡಿಸುತ್ತಾ ಇದ್ದಾರೆ. ಇದರೊಂದಿಗೆ ದಿಲ್ಲಿಯಲ್ಲಿ ದೇಹವಿದ್ದರೂ ಮನಸ್ಸು ಮಾತ್ರ ಕರ್ನಾಟಕದಲ್ಲೇ ಇದೆ. ಇದಕ್ಕೆ ಪೂರಕವೆಂಬಂತೆ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ರೀ ಎಂಟ್ರಿ ನೀಡುವ ಬಗ್ಗೆ ಸ್ಫೋಟಕ ಸುಳಿವು ನೀಡಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ವಾಪಸ್, ಯಾವ ಕ್ಷೇತ್ರದಿಂದ ಸ್ಪರ್ಧೆ? ಎಚ್​​​ಡಿಕೆ ಹೇಳಿದ್ದಿಷ್ಟು
Hd Kumaraswamy

Updated on: Jan 23, 2026 | 7:57 PM

ಮಂಡ್ಯ, (ಜನವರಿ 23): ಎನ್​​ಡಿಎ ಕೈಜೋಡಿಸಿ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿ ಆಗಿರುವ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ (HD Kumaraswamy), ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕುಮಾರಸ್ವಾಮಿ ಮಾತಾಡ್ತಿದ್ದು, ಕಾಂಗ್ರೆಸ್​ ಸರ್ಕಾರ ವಿರುದ್ಧ ಕೆಂಡಕಾರುತ್ತಿದ್ದಾರೆ. ಇತ್ತೀಗಷ್ಟೇ ಜೆಡಿಎಸ್​ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಡ್ಯಾಡಿ ಈಸ್​ ಹೋಮ್ ಎಐ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಬಗ್ಗೆ ಕುಮಾರಸ್ವಾಮಿ ಮಾತಾಡಿದ್ದಾರೆ. ಹೌದು… ಇಂದು (ಜನವರಿ 23) ಮಂಡ್ಯ ತಾಲೂಕಿನ ಶಿವಹಳ್ಳಿಯಲ್ಲಿ ಮಾತನಾಡಿರುವ ಕುಮಾರಸ್ವಾನಿ, ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಪಡುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಮರು ಪ್ರವೇಶದ ಗುಟ್ಟು ಬಿಚ್ಚಿಟ್ಟಿದ್ದಾರೆ.

ಮಂಡ್ಯ ತಾಲೂಕಿನ ಶಿವಹಳ್ಳಿಯಲ್ಲಿ ಮಾತನಾಡುತ್ತಿದ್ದ ವೇಳೆ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುತ್ತೀರಾ ಎನ್ನುವ ಮಾಧ್ಯಮಗಳ ಪ್ರಶ್ನಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಪಡುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಊಹೆ ಇರಲಿಲ್ಲ. ಸಿ.ಎಸ್​.ಪುಟ್ಟರಾಜುರನ್ನು ನಿಲ್ಲಿಸಬೇಕು ಅಂದುಕೊಂಡಿದ್ದೆ. ಆದ್ರೆ, ಅನಿವಾರ್ಯವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ!

ಡ್ಯಾಡಿ ಈಸ್​ ಹೋಮ್​

ಇತ್ತೀಚೆಗೆ ಅಷ್ಟೇ ಜೆಡಿಎಸ್ ಸೋಶಿಯಲ್ ಮೀಡಿಯಾ ಪೇಜ್​ನಲ್ಲಿ ಸದ್ದು ಮಾಡಿದ್ದ ಡ್ಯಾಡಿ ಈಸ್​ ಹೋಮ್​ ಎಐ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯೇ ಈ ವಿಡಿಯೋ ಎನ್ನುವ ಮಾತು ಕೇಳಿ ಬಂದಿತ್ತು. ಈ ಚರ್ಚೆ ಬೆನ್ನಲ್ಲೇ ಸಂಕ್ರಾಂತಿ ಹಬ್ಬದಂದು ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ಕೊಟ್ಟಿದ್ದರು.

ಅಂದರೆ ಕುಮಾರಸ್ವಾಮಿ ಅವರು ಮೇಲಿಂದ ಮೇಲೆ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇವತ್ತು ಮಂಡ್ಯದಲ್ಲಿ ಮಾತನಾಡಿರುವ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ಅವರಿಗೆ ಮಂಡ್ಯ ಲೋಕಸಭೆಗೆ ಸ್ಪರ್ಧಿಸುವ ಆಸೆ ಇರಲಿಲ್ವಂತೆ.  ಆದ್ರೆ, ಕೊನೆ ಕ್ಷಣದಲ್ಲಿ ಅನಿವಾರ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಬಂತು ಎಂದಿದ್ದಾರೆ.  ಅಂದರೆ ರಾಷ್ಟ್ರರಾಜಕರಣದ ಬದಲಾಗಿ ರಾಜ್ಯ ರಾಜಕಾರಣದಲ್ಲೇ ಇರುವ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.. ಹೀಗಾಗಿ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆ ವೇಲೆ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗಲಿದ್ದು, ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಿಸಿದೆ.

Published On - 7:56 pm, Fri, 23 January 26