ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ: ಸಾವಿಗೆ ಕಾರಣವಾಗಿದ್ದು ಒಂದು ವಿಡಿಯೋ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಪ್ರತಿಷ್ಠಿತ ಪಿಕಳೆ ಕುಟುಂಬದ ರಾಜೀವ್ ಪಿಕಳೆ ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಧಿ ಮೀರಿದ ಔಷಧ ನೀಡಿದ ಆರೋಪದ ಕುರಿತು ಯೂಟ್ಯೂಬರ್ ವಿಡಿಯೋದಿಂದ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆಯಾಗಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಎರಡು ತಲೆಮಾರಿನಿಂದ ವೈದ್ಯಕೀಯ ಸೇವೆ ನೀಡುತ್ತಿದ್ದ ಕುಟುಂಬಕ್ಕೆ ಇದರಿಂದ ಆಘಾತವಾಗಿದೆ. ಮಾನಸಿಕವಾಗಿ ಕುಗ್ಗಿದ್ದ ರಾಜೀವ್ ತಮ್ಮ ಸಾವಿಗೆ ತಾವೇ ಕಾರಣ ಎಂದು ಡೆತ್ ನೋಟ್ ಬರೆದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

ಕಾರವಾರ, ಜನವರಿ 23: ಸಾಮಾಜಿಕ,ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ವ್ಯಕ್ತಿಯೋರ್ವ ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದೆ. ಪಿಕಳೆ ಕುಟುಂಬದ ಹಿರಿಯ ರಾಜೀವ್ ಪಿಕಳೆ ಮೃತ ದುರ್ದೈವಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿನ ತೇಜೋವಧೆಯೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಕಾರವಾರದಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಪಿಕಳೆ ಕುಟುಂಬ ಎರಡು ತಲೆಮಾರಿನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ. ಈ ಆಸ್ಪತ್ರೆಯಲ್ಲಿ ರಾಜೀವ್ ಪಿಕಳೆ ಔಷಧ ವಿಭಾಗವನ್ನು ನೋಡಿಕೊಳ್ಳುತಿದ್ದರು. ಕೆಲವು ದಿನದ ಹಿಂದೆ ಅವರು ಅವಧಿ ಮುಗಿದ ಔಷಧ ನೀಡಿದ್ದಾರೆ ಎಂದು ಯೂಟ್ಯೂಬರ್ ಒಬ್ಬ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎರಡು ತಲೆಮಾರಿನಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತಿದ್ದ ಪಿಕಳೆ ಕುಟುಂಬಕ್ಕೆ ಘಾಸಿ ಉಂಟುಮಾಡಿತ್ತು. ಇದರಿಂದ ಮನನೊಂದಿದ್ದ ರಾಜೀವ್ ಪಿಕಳೆ ಸಾಕಷ್ಟು ನೋವುಂಡಿದ್ದರು. ಇದಲ್ಲದೇ ಅವಧಿ ಮುಗಿದ ಔಷಧ ನೀಡಿದ್ದಕ್ಕೆ ಕ್ಷಮೆ ಯಾಚಿಸಿದ್ದರು. ಆದರೆ ವಿಡಿಯೋ ಹೆಚ್ಚು ವೈರಲ್ ಆಗಿದ್ದರಿಂದ ಮಾನಸಿಕವಾಗಿ ಅವರು ಕುಗ್ಗಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಡಬಲ್ ಬ್ಯಾರಲ್ ಗನ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಪಿಕಪ್ ಟ್ರಕ್ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ; ನಡು ರಸ್ತೆಯಲ್ಲಿ ಒದ್ದಾಡಿದ ಮಕ್ಕಳು
ರಾಜಕೀಯ, ಸಾಮಾಜಿಕ, ವೈದ್ಯಕೀಯ ಕ್ಷೇತ್ರದಲ್ಲಿ ಎರಡು ತಲೆಮಾರಿನಿಂದ ಸೇವೆ ನೀಡುತ್ತಾ ಬಂದಿರುವ ಇವರದ್ದು ಕಾರವಾರದಲ್ಲಿ ಪ್ರತಿಷ್ಠಿತ ಕುಟುಂಬ. ಈ ಕುಟುಂಬದ ಸೇವೆ ಮೆಚ್ಚಿ ಕಾರವಾರದಲ್ಲಿ ರಸ್ತೆಯೊಂದಕ್ಕೆ ಪಿಕಳೆ ರಸ್ತೆ ಎಂದು ನಗರಸಭೆ ನಾಮಕರಣ ಮಾಡಿದೆ. ಇನ್ನು ರಾಜೀವ್ ಮಕ್ಕಳು ಸಹ ವೈದ್ಯರಾಗಿದ್ದು, ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಆದರೆ ರಾಜೀವ್ ಮಾತ್ರ ಅಂಕೋಲಾದ ಹಟ್ಟಿಕೇರಿಯಲ್ಲಿ ಏಕಾಂಗಿಯಾಗಿ ವಾಸವಿದ್ದರು. ತನ್ನ ವಿಡಿಯೋ ವೈರಲ್ ಆಗಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದ ಇವರು, ಈ ಬಗ್ಗೆ ಕುಟುಂಬದಲ್ಲಿ ಸಹ ಹೇಳಿಕೊಂಡಿದ್ದರು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಕ್ಷೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿರೋದು ಕಂಡುಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.