ಬೆಂಗಳೂರು, ಏಪ್ರಿಲ್ 29: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ (Prajwal Revanna sex scandal) ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಅವರು ತಳ್ಳಿಹಾಕಿದ್ದಾರೆ. ತಮ್ಮ ಮಗ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, ಆತ ಎಲ್ಲೋ ಹೋಗಿರಬಹುದು. ಆದರೆ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದು ಮಾಜಿ ಸಚಿವರೂ ಆದ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
‘ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾವು ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇವೆ. ಪ್ರಜ್ವಲ್ ಹೋಗಬೇಕಿತ್ತು ಹೋಗಿದಾನೆ. ಕರೆದರೆ ಬರುತ್ತಾನೆ. ತನಿಖೆಗೆ ಕರೆದಾಗ ಪ್ರಜ್ವಲ್ ಬರ್ತಾನೆ’ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ: ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ
ಇದೆಲ್ಲಾ ರಾಜಕೀಯ. ಸರ್ಕಾರ ಅವರದ್ದಿದೆ, ಏನು ಬೇಕಾದರೂ ಮಾಡಲಿ. ತನಿಖೆ ನಡೆಸಿ ಕಾನೂನಿನ ರೀತಿ ಏನಿದೆ ಅದಾಗಲಿ. ದೆವೇಗೌಡರ ಕುಟುಂಬದ ಮೇಲೆ ಆರೋಪ ಇವೇನೂ ಹೊಸದಲ್ಲ. ಮೊದಲಿಂದಲೂ ಇಂಥವನ್ನು ಎದುರಿಸಿದ್ದೇವೆ. ದೇವೇಗೌಡರ ಕುಟುಂಬದ ಮೇಲೆ ಲೋಕಾಯುಕ್ತ, ಸಿಐಡಿ ತನಿಖೆ ಇವೆಲ್ಲವನ್ನೂ ಎದುರಿಸಿದ್ದೇವೆ ಎಂದು ಹೊಳೆನರಸೀಪುರ ಶಾಸಕರಾದ ಅವರು ತಿಳಿಸಿದ್ದಾರೆ.
ಕಳೆದ ವಾರ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳಿದ್ದ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿತ್ತು. ನೂರಾರು ಮಹಿಳೆಯರ ಜೊತೆ ಪ್ರಜ್ವಲ್ ರಾಸಲೀಲೆ ನಡೆಸಿದ ವಿಡಿಯೋಗಳು ಇವು. ಕೆಲಸದ ಆಮಿಷ ಇತ್ಯಾದಿ ವಿಚಾರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಪ್ರಜ್ವಲ್ ದುರುಪಯೋಗಪಡಿಸಿಕೊಂಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಸೇರಿದಂತೆ 300-400 ಹೆಣ್ಣುಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ: ಹೆಬ್ಬಾಳ್ಕರ್
ಎಚ್ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪ್ಪ ಮತ್ತು ಮಗ ಪ್ರಮುಖ ಆರೋಪಿಗಳಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ