ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ; 77 ಐಸಿಯು ಬೆಡ್, ಆಕ್ಸಿಜನ್ ಘಟಕ ಸ್ಥಾಪನೆ
ಕೋವಿಡ್ ಪ್ರಕರಣ ಕಡಿಮೆಯಾದರೂ ಸಿದ್ಧತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಸಿದ್ಧತೆಗಳನ್ನು ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಗಂಭೀರ ಚಿಂತನೆ. ಆ ನಿಟ್ಟಿನಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗಿದೆ ಎಂದರು
ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಯ ದರವನ್ನು ಸರ್ಕಾರದಿಂದಲೇ ನಿಗದಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಸಿ.ವಿ.ರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ಕಪ್ಪು ಶಿಲೀಂಧ್ರದ ಔಷಧಿಯ ಕೊರತೆ ಈಗ ಇಲ್ಲ. 15 ದಿನಗಳ ಹಿಂದೆ ಇದ್ದ ಕೊರತೆ ಈಗ ಇಲ್ಲ. ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ಔಷಧಿ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆಗಳನ್ನು ಉಚಿತಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರದ ಚಿಕಿತ್ಸೆಗೆ ನಿರ್ದಿಷ್ಟ ದರ ನಿಗದಿಪಡಿಸಬೇಕಿದೆ. ಬೇಕಾದ ಹಾಗೆ ಹೆಚ್ಚು ಹಣ ಪಡೆಯುವಂತಿಲ್ಲ. ಇದಕ್ಕಾಗಿ ದರ ನಿಗದಿಪಡಿಸಲಾಗುವುದು. ಚಿಕಿತ್ಸಾ ವೆಚ್ಚಕ್ಕೆ ಇಷ್ಟೇ ಪಡೆಯಬೇಕು ಎಂದು ನಿಗದಿ ಮಾಡಲಾಗುವುದು ಎಂದು ಹೇಳಿದರು.
ಸಿಎಸ್ ಆರ್ ಚಟುವಟಿಕೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಅಳವಡಿಸಲಾಗಿದೆ. ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 24 ಹಾಸಿಗೆಗಳ ಐಸಿಯು ಘಟಕ ಆರಂಭಿಸಲಾಗಿದೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 77 ಹಾಸಿಗೆಗಳ ಐಸಿಯು, ಆಕ್ಸಿಜನ್ ಹಾಸಿಗೆ ಅಳವಡಿಸಲಾಗಿದೆ. ಜೊತೆಗೆ ಡಿಆರ್ ಡಿಒ ಸಂಶೋಧಿಸಿದ 1 ಸಾವಿರ ಲೀಟರ್ ಆಕ್ಸಿಜನ್ ಘಟಕವನ್ನು ಅಳವಡಿಸಲಾಗಿದೆ. ಇದು ವಾತಾವರಣದಿಂದ ಆಕ್ಸಿಜನ್ ಪಡೆದು 100 ಹಾಸಿಗೆಗಳಿಗೆ ಪೂರೈಕೆ ಮಾಡುತ್ತದೆ. ಇದನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಒಂದೇ ಭಾಗದಲ್ಲಿ ಹೆಚ್ಚು ಆಕ್ಸಿಜನ್, ಐಸಿಯು ವ್ಯವಸ್ಥೆ ಲಭ್ಯವಿದೆ. ಕೋವಿಡ್ ಪ್ರಕರಣ ಕಡಿಮೆಯಾದರೂ ಸಿದ್ಧತೆಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಸಿದ್ಧತೆಗಳನ್ನು ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಗಂಭೀರ ಚಿಂತನೆ. ಆ ನಿಟ್ಟಿನಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮ ಮಂಚೇನಹಳ್ಳಿಯಲ್ಲಿ ಮಾತನಾಡಿದ ಸುಧಾಕರ್, ರಾಜ್ಯಕ್ಕೆ ಈವರೆಗೆ 18 ಸಾವಿರ ವಯಲ್ ಆಂಫೊಟೆರಿಸಿನ್ ಬಂದಿದೆ. 2-3 ದಿನಗಳಿಂದ ಔಷಧ ಪೂರೈಕೆ, ವಿತರಣೆ ಚೆನ್ನಾಗಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಹೆಚ್ಚು ಪೂರೈಕೆ ಆಗಲಿದೆ. ಬ್ಲ್ಯಾಕ್ ಫಂಗಸ್ ಹೆಚ್ಚಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿಕೆ ನೀಡಿದ್ಧಾರೆ.
ಕೊರೊನಾ 3ನೇ ಅಲೆ ತಡೆಗೆ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ತಿದ್ದೇವೆ. ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಕ್ಕಳ ತಜ್ಞರು ಹಾಗೂ ಮಾನಸಿಕ ರೋಗ ತಜ್ಞರು ಸೇರಿ, ತಜ್ಞ ವೈದ್ಯರ ಸಮಿತಿಯಲ್ಲಿ 12 ಹೆಸರಾಂತ ವೈದ್ಯರಿದ್ದಾರೆ. ಮಕ್ಕಳಿಗೆ ಕೊರೊನಾ ಬಾಧಿಸಿದರೆ ಕ್ರಮದ ಬಗ್ಗೆ ಅಧ್ಯಯನ, ಮುನ್ನೆಚ್ಚರಿಕೆ, ಚಿಕಿತ್ಸಾ ವಿಧಾನದ ಬಗ್ಗೆ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಎದುರಿಸಲು ನಡೆಸಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಾ ಕೆ ಸುಧಾಕರ್
ಆಶಾ ಕಾರ್ಯಕರ್ತೆಯರಿಗೆ ತಕ್ಷಣ ಗೌರವಧನ ಬಿಡುಗಡೆಗೆ ಸಚಿವ ಸುಧಾಕರ್ ಸೂಚನೆ
Published On - 6:05 pm, Sat, 5 June 21