Karnataka Weather: ಮಲೆನಾಡಿನಲ್ಲಿ ಹನಿ ಕಡಿಯದೇ ಸುರಿಯುತ್ತಿದೆ ಮಳೆ; ಭಾರೀ ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತ

| Updated By: Skanda

Updated on: Jun 17, 2021 | 8:20 AM

Monsoon 2021: ಚಿಕ್ಕಮಗಳೂರಿನ ಹಲವೆಡೆ ಮೊನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟಿ, ಕೊಟ್ಟಿಗೆಹಾರ, ಬಣಕಲ್, ಬಾಳೆಹೊನ್ನೂರು ಭಾಗದಲ್ಲಿನ ಜಡಿಮಳೆಗೆ ಜನ ಭಯಭೀತರಾಗಿದ್ದಾರೆ.

Karnataka Weather: ಮಲೆನಾಡಿನಲ್ಲಿ ಹನಿ ಕಡಿಯದೇ ಸುರಿಯುತ್ತಿದೆ ಮಳೆ; ಭಾರೀ ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತ
ರಾಜ್ಯದ ಹಲವೆಡೆ ಭಾರೀ ಮಳೆ (ಸಾಂಕೇತಿಕ ಚಿತ್ರ)
Follow us on

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಎರಡು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಆರಂಭದಲ್ಲೇ ಈ ಪ್ರಮಾಣದ ಮಳೆ ಸುರಿದರೆ ಮುಂದೆ ಹೇಗಿರಬಹುದು ಎಂದು ಜನ ಈಗಲೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳ ಮಳೆಗಾಲದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಕಂಡು ತತ್ತರಿಸಿ ಹೋಗಿರುವ ಜನ ಈ ಬಾರಿ ಹಾಗಾಗದಿರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಮಳೆಯೊಂದಿಗೆ ಗಾಳಿಯ ಅಬ್ಬರವೂ ಜೋರಾಗಿರುವ ಕಾರಣ ಕೃಷಿಕರು ತಮ್ಮ ತೋಟ, ಗದ್ದೆಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮಳೆಗಾಲದ ಶುರುವಿನಲ್ಲೇ ಜನ ಹೈರಾಣಾಗಿ ಹೋಗುವಂತೆ ಮಳೆ ಸುರಿಯುತ್ತಿದೆ.

ಚಿಕ್ಕಮಗಳೂರಿನ ಹಲವೆಡೆ ಮೊನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟಿ, ಕೊಟ್ಟಿಗೆಹಾರ, ಬಣಕಲ್, ಬಾಳೆಹೊನ್ನೂರು ಭಾಗದಲ್ಲಿನ ಜಡಿಮಳೆಗೆ ಜನ ಭಯಭೀತರಾಗಿದ್ದಾರೆ. ನಿನ್ನೆ ಸಂಜೆ ವೇಳೆಗೆ ಕೊಟ್ಟಿಗೆಹಾರ ಸಮೀಪ ಚಾರ್ಮಾಡಿ ಘಾಟ್​ನಲ್ಲಿ ಮರವೊಂದು ಉರುಳಿದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಜೆಸಿಬಿ ಯಂತ್ರದ ಸಹಾಯದಿಂದ ಮರವನ್ನು ತೆರವುಗೊಳಿಸಿದರು.

ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಬಸರಿಕಟ್ಟೆ ಬಳಿಯೂ ಮರವೊಂದು ಧರೆಗೆ ಉರುಳಿದ ಪರಿಣಾಮ ಜಯಪುರ, ಬಸರಿಕಟ್ಟೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಸಂಚಾರ ಕಡಿತಗೊಂಡಿತ್ತು. ಕೆಲವೆಡೆ ಭಾರೀ ಗಾಳಿಯ ಪರಿಣಾಮ ವಿದ್ಯುತ್​ ಕಂಬಗಳ ಮೇಲೆಯೇ ಮರ ಬಿದ್ದಿದ್ದು, ಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.

ಕುದುರೆಮುಖ ಶ್ರೇಣಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕಳಸ, ಹೊರನಾಡು ನಡುವಿನ ಹೆಬ್ಬಾಳೆ ಸೇತುವೆ ಮೇಲೆ ಈಗಾಗಲೇ ನೀರು ಬರುವ ಮಟ್ಟಕ್ಕೆ ನದಿ ತುಂಬಿದ್ದು, ಸೇತುವೆ ಮುಳುಗಲು ಇನ್ನು ಎರಡು ಅಡಿಗಳಷ್ಟೇ ಬಾಕಿ ಇದೆ. ಕಳೆದ ಮೂರು ವರ್ಷಗಳಿಂದ ಹೆಬ್ಬಾಳೆ ಸೇತುವೆ ಮುಳುಗಡೆ ಆಗುತ್ತಿದ್ದು, ಈ ಬಾರಿ ಮುಂಗಾರು ಆರಂಭದಲ್ಲೇ ಮುಳುಗುವ ಹಂತ ತಲುಪಿದೆ.

ಇತ್ತ ಮಳೆ ಹೆಚ್ಚಾಗಿ ಜನ ಈಗಲೇ ಮಳೆಗಾಲದ ಸಹವಾಸ ಸಾಕಪ್ಪಾ ಎನ್ನುತ್ತಿದ್ದರೆ ಅತ್ತ ಬಯಲುಸೀಮೆ ಭಾಗದಲ್ಲಿ ಮಳೆಗಾಗಿ ಕಾಯುವಂತಾಗಿದೆ. ತರೀಕೆರೆ-ಕಡೂರು ತಾಲೂಕಿನಲ್ಲಿ ನಿನ್ನೆ ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದು, ಬಯಲುಸೀಮೆ ಭಾಗದ ಹಲವೆಡೆ ಹನಿ ಮಳೆಯೂ ಇಲ್ಲವೆಂಬಂತಾಗಿದೆ.

ಇದನ್ನೂ ಓದಿ:
Tunga Dam: ತುಂಗಾ ಡ್ಯಾಂ ಭರ್ತಿ; ಮಲೆನಾಡಿನ ಸೌಂದರ್ಯದ ಹೆಚ್ಚಳಕ್ಕೆ ಸಾಕ್ಷಿ ಆಯ್ತು ಮುಂಗಾರು ಮಳೆ 

Karnataka Weather: ಮುಂಗಾರು ಮಳೆ ಆರ್ಭಟಕ್ಕೆ ಮಲೆನಾಡು, ಕರಾವಳಿ ತತ್ತರ; ವಾಯುಭಾರ ಕುಸಿತದಿಂದ ಬೆಂಗಳೂರಿನಲ್ಲಿ ಮಳೆ