Karnataka Rain: ರಾಜ್ಯದ ಹಲವೆಡೆ ಮಳೆ; ಬೆಳೆ ನಷ್ಟದಿಂದ ರೈತರು ಕಂಗಾಲು
ರಾಜ್ಯದ ಹಲವೆಡೆ ಇಂದು ಮತ್ತೆ ಮಳೆಯಾಗಿದ್ದು, ರಾಗಿ ಸೇರಿದಂತೆ ವಿವಿಧ ಬೆಳೆಗೆ ಹಾನಿಯಾಗಿದೆ. ಅಲ್ಲದೇ ಮೂಲಸೌಕರ್ಯದ ಕೊರತೆಯಿಂದ ಪ್ರಯಾಣಿಕರು ಅಪಾಯದ ನಡುವೆಯೇ ವಾಹನ ಚಲಾಯಿಸುತ್ತಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಕಾಲಿಕ ಮಳೆಯಿಂದಾಗಿ ರೈತರು ಬೆಳೆ ಹಾನಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಂಡ್ಯ, ಚಿಕ್ಕಮಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮಳೆಯಾಗಿದೆ. ಇದರಿಂದ ರಾಗಿ, ಜೋಳ ಸೇರಿದಂತೆ ತರಕಾರಿ ಬೆಳೆದ ರೈತರ ಬೆಳೆ ಹಾನಿಯಾಗಿದೆ. ಅಲ್ಲದೇ ಬಹುತೇಕ ಕಡೆ ರಸ್ತೆ ಹಾಗೂ ಚರಂಡಿ ಮೂಲ ಸೌಕರ್ಯದ ಸಮಸ್ಯೆಯಿದ್ದು, ಅಪಾಯದ ನಡುವೆಯೇ ಸವಾರರು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಚಿಕ್ಕಮಗಳೂರು: ಕಡೂರು ತಾಲೂಕಿನಲ್ಲಿ ಮಳೆಯಿಂದ ಭಾರಿ ಹಾನಿ ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮಗಳಲ್ಲಿ ನೂರಾರು ಎಕರೆ ರಾಗಿ ಬೆಳೆ ನೀರುಪಾಲಾಗಿದೆ. ಕರಿಕಲ್ಲು ಹೊಳೆ, ಶಂಕರಪುರ, ಸಿಂಗಟಗೆರೆ ಸುತ್ತಮುತ್ತ ಕಟಾವು ಮಾಡಿದ್ದ ರಾಗಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಮಳೆಯಿಂದಾಗಿ ಕಡೂರು-ಹೊಸದುರ್ಗ ರಸ್ತೆ ಸಂಪರ್ಕ ಕಡಿತವಾಗಿದೆ. ಆವುತಿ ಹಳ್ಳದ ನೀರಿನಿಂದ 15 ಹಳ್ಳಿಗಳಿಗೆ ಸಂಪರ್ಕಕ್ಕಾಗಿ ಬೀರೂರು ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಅರಸೀಕೆರೆಯಲ್ಲಿ ರಾಗಿ, ಜೋಳ, ತರಕಾರಿ ಸಂಪೂರ್ಣ ನಾಶ: ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮಳೆಯಿಂದ ರಾಗಿ, ಜೋಳ, ತರಕಾರಿ ಸಂಪೂರ್ಣ ನಾಶವಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲಾಗಿದೆ.
ಮಂಡ್ಯದಲ್ಲಿ ಭರ್ಜರಿ ಮಳೆ; ಜನರ ಪರದಾಟ: ಮಂಡ್ಯದ ನಗರ ಭಾಗದಲ್ಲಿ ಒಂದು ಗಂಟೆಗಳ ಕಾಲ ಸುರಿದ ಭರ್ಜರಿ ಮಳೆಗೆ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಮಹಾವೀರ ಸರ್ಕಲ್ ಸಮೀಪದ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ, ನೀರು ರಸ್ತೆಯಲ್ಲೇ ನಿಂತಿತ್ತು. ಮಂಡಿಯುದ್ದ ನಿಂತ ನೀರಿನಲ್ಲೇ ವಾಹನ ಸವಾರರು ಪ್ರಯಾಣ ಮಾಡುವಂತಾಗಿತ್ತು. ಇದರಿಂದ ರಸ್ತೆ ದಾಟಲು ಸವಾರರು ಪರದಾಟ ನಡೆಸಿದರು.
ಜಮಖಂಡಿ: ನಗರದಲ್ಲಿ ಭಾರಿ ಮಳೆ; ಸಂಚಾರ ಅಸ್ತವ್ಯಸ್ತ ಬಾಗಲಕೋಟೆಯ ಜಮಖಂಡಿ ನಗರದಲ್ಲಿ ಅರ್ಧಗಂಟೆ ಕಾಲ ಸುರಿದ ಭರ್ಜರಿ ಮಳೆಗೆ ಸಂಚಾರರು ಸಾಕಷ್ಟು ಕಷ್ಟ ಅನುಭವಿಸಿದರು. ರಸ್ತೆಗಳಲ್ಲಿ ಗುಂಡಿಬಿದ್ದಿದ್ದು, ಅದರಲ್ಲಿ ನೀರು ನಿಂತಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾಯಿತು. ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ವಾಪಸ್ ಮನೆಗೆ ಹೋಗಲೂ ತೊಂದರೆಯಾಯಿತು. ಅದಾಗ್ಯೂ ಮಳೆ ಲೆಕ್ಕಿಸದೇ ನೆನೆಯುತ್ತಾ ಮಕ್ಕಳು ಮನೆಗೆ ಹೊರಟ ದೃಶ್ಯ ಕಂಡುಬಂತು.
ನೆಲಮಂಗಲ: ಮಳೆಯಿಂದ ರಾಗಿ ಬೆಳೆದ ರೈತರಿಗೆ ಆತಂಕ ಮೂರ್ನಾಲ್ಕು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಲವೆಡೆ ಇಂದು ಮಳೆಯಾಗಿದೆ. ಮಳೆಯಿಂದ ರಾಗಿ ಬೆಳೆದ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಹಾಗೆಯೇ ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ಚರಂಡಿಯ ಸಮಸ್ಯೆಯಿಂದ ರಸ್ತೆಗಳಲ್ಲಿ ನೀರು ನಿಲ್ಲುತ್ತಿದ್ದು, ಅಪಾಯವನ್ನು ಬೆನ್ನಿಗಿಟ್ಟುಕೊಂಡೇ ವಾಹನ ಸವಾರರು ಪ್ರಯಾಣಿಸುತ್ತಿದ್ದಾರೆ.