ಬೆಂಗಳೂರು/ಹಾಸನ, (ಮೇ 19): ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ (Pen drive) ಮೂಲಕ ವೈರಲ್ ಆದ ಬಳಿಕ ಅವರ ಮೇಲೆ ಲೈಂಗಿಕ ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡುತ್ತಿದ್ದರೂ, ಲೋಕಸಭಾ ಚುನಾವಣೆ ಮತದಾನ ದಿನ ಏ.26ರಂದು ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ ಇದುವರೆಗೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಮುಚ್ಚಾಲೆ ಆಟವಾಡುತ್ತಿರುವ ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಆದ್ರೆ, ಈ ಅರೆಸ್ಟ್ ವಾರಂಟ್ನಿಂದ ಪ್ರಜ್ವಲ್ ರೇವಣ್ಣಗೆ ಏನಾಗಲಿದೆ ಎನ್ನುವುದನ್ನು ನೋಡುವುದಾದರೆ, ಎಸ್‌ಐಟಿ ಮನವಿ ಪುರಸ್ಕರಿಸಿ ನ್ಯಾಯಾಲಯವು ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಿದರಷ್ಟೇ ಬಂಧನ ಮಾಡಬಹುದಾಗಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್
ಅರೆಸ್ಟ್ ವಾರಂಟ್ ಆದೇಶದಿಂದ ಏಕಾಏಕಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಾಧ್ಯವಾಗಲ್ಲ. ಒಂದು ವೇಳೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕು ಅಂದ್ರೆ ಮೊದಲು ಚಾರ್ಜ್‌ಶೀಟ್ ಸಲ್ಲಿಸಬೇಕು. ಚಾರ್ಜ್‌ಶೀಟ್ ಸಲ್ಲಿಸಿದ್ರೆ ಮಾತ್ರ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಹುದು. ಇನ್ನು ವಿದೇಶದಲ್ಲಿದ್ದಾಗ ಈ ವಾರಂಟ್ ಮೇಲೆ ಬಂಧಿಸುವಂತಿಲ್ಲ. ಭಾರತದ ಗಡಿಯೊಳಗೆ ಬಂದರೆ ಪ್ರಜ್ವಲ್ ರೇವಣ್ಣನನ್ನು ಬಂಧಿಸಬಹುದು ಎಂದು ವಿಶೇಷ ತನಿಖಾ ತಂಡದ(ಎಸ್ಐಟಿ) ಹಿರಿಯ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.
ಇನ್ನು ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಈವರೆಗೆ 22 ದಿನಗಳು ಕಳೆದಿವೆ. ಎಸ್‌ಐಟಿ ವತಿಯಿಂದ ಲೈಂಗಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್ ಕುರಿತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಹಾಜರಾಗಿಲ್ಲ. ಬಲಿಗೆ ನಾನು ವಿದೇಶದಲ್ಲಿದ್ದೇನೆ, ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲಾವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು. ಇದಾದ ನಂತರ, ನಾಲ್ಕೈದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದರೂ, ಪುನಃ ಅದನ್ನು ರದ್ದುಗೊಳಿಸಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿದೆ. ಅದಕ್ಕೂ ಪ್ರಜ್ವಲ್ ಕ್ಯಾರೇ ಎಂದಿಲ್ಲ. ಇದೀಗ ಬಂದ ಮಾಹಿತಿ ಪ್ರಕಾರ ಜರ್ಮಿನಿಯಲ್ಲಿದ್ದ ಪ್ರಜ್ವಲ್ ಇದೀಗ ಅಲ್ಲಿಂದ ಲಂಡನ್ಗೆ ತೆರಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ