ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯ್ಕೆಗೆ ಹೈಕಮಾಂಡ್ ತಡೆ: ವಿಜಯೇಂದ್ರ ವಿರುದ್ಧ ತೊಡೆತಟ್ಟಿ ಗೆದ್ದ ಸುಧಾಕರ್
ಕರ್ನಾಟಕ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾದಂತಿದೆ. ಯಾಕಂದ್ರೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದರಿಂದ ಮೇಲುಗೈ ಸಾಧಿಸಿದ್ದ ವಿಜಯೇಂದ್ರಗೂ ಸಹ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ತಡೆ ನೀಡಿದೆ. ಈ ಮೂಲಕ ಸಂಸದ ಸುಧಾಕರ್ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು, (ಫೆಬ್ರವರಿ 10): ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯ್ಕೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿವೆ. ಅದರಲ್ಲೂ ಮುಖ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರ ಆಯ್ಕೆ ಇಡೀ ರಾಜ್ಯ ಬಿಜೆಪಿಯಲ್ಲೇ ಅಲ್ಲೋಕ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕಗೆ ಹೈಕಮಾಂಡ್ ತಡೆ ನೀಡಿದೆ. ಈ ಬಗ್ಗೆ ಹೈಕಮಾಂಡ್, ಬಿ.ವೈ.ವಿಜಯೇಂದ್ರಗೆ ಪತ್ರ ಬರೆದು ಬಿ.ಸಂದೀಪ್ ಆಯ್ಕೆಗೆ ತಡೆ ನೀಡುವಂತೆ ಸೂಚಿಸಿದೆ. ಇದರೊಂದಿಗೆ ವಿಜಯೇಂದ್ರ ವಿರುದ್ಧ ತೊಡೆತಟ್ಟಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಹೇಳಿದಂತೆ ಮಾಡಿ ತೋರಿಸಿದ್ದಾರೆ.
ಬಿ.ವೈ.ವಿಜಯೇಂದ್ರಗೆ ಪತ್ರ ಬರೆದು ಆಯ್ಕೆಗೆ ತಡೆ ನೀಡುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸೂಚಿಸಿದ್ದಾರೆ. ಅಂತಿಮವಾಗಿ ಡಾ ಕೆ ಸುಧಾಕರ್ ಅವರು ಸಂದೀಪ್ ಆಯ್ಕೆಗೆ ತಡೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ತಮ್ಮ ಶಕ್ತಿಯನ್ನು ತೋರಿಸಿ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಹೈಕಮಾಂಡ್ ತಡೆಹಿಡಿದ ಬಗ್ಗೆ ಟಿವಿ9ಗೆ ಸ್ವತಃ ಸಂದೀಪ್ ರೆಡ್ಡಿ ಪ್ರತಿಕ್ರಿಯಿಸಿದ್ದು, ತಾತ್ಕಾಲಿಕವಾಗಿ ಆಯ್ಕೆಯನ್ನು ತಡೆಹಿಡಿದಿರುವುದು ನನ್ನ ಗಮನಕ್ಕೆ ಬಂದಿದೆ. ಯಾಕೆ ಏನು ಕಾರಣ ಗೊತ್ತಿಲ್ಲ. ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಪಾತ್ರದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಸುಧಾಕರ್
ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಬಿ. ಸಂದೀಪ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ, ಇದು ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಅಭಿಪ್ರಾಯ ಪಡೆಯದೇ ತಮಗೆ ಬೇಕಾದವರನ್ನ ಆಯ್ಕೆ ಮಾಡಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ತಮ್ಮ ಅಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಆಯ್ಕೆ ಮಾಡಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಗುಡುಗಿದ್ದ ಸುಧಾಕರ್, ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡುತ್ತೇನೆ. ಮುಂದೆ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇನೆ ಎಂದು ಸವಾಲು ಹಾಕಿದ್ದರು.
ಏನು ಮಾಡಿದ್ದೀರಿ. ಅಂದು ರಮೇಶ್ ನಿಮಗೆ ಬಹಳ ಚೆನ್ನಾಗಿದ್ದರು. ಬಿಜೆಪಿ ಬಹಳ ಪ್ರಬಲವಾಗಿರುವ ಕಡೆ ನೀವು ರಾಜ್ಯಾಧ್ಯಕ್ಷರಾಗಿ ತಿಣುಕಾಡಿಕೊಂಡು ಗೆದ್ದಿದ್ದೀರಿ. ಅದು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲಿ. ಇನ್ನೊಬ್ಬರು ಅಭ್ಯರ್ಥಿ ಅಗಿರುತ್ತಿದ್ದರೆ ಗೊತ್ತಾಗಿರುತ್ತಿತ್ತು. ನೀವು ಯಾರನ್ನು ನಂಬಿಕೊಂಡಿದ್ದೀರಿ ಎಂದು ಗೊತ್ತಿದೆ. ಅವರು ನಿಮಗೆ ರಿಯಲ್ ಎಸ್ಟೇಟ್ ನಲ್ಲಿ ಕಾಸು ತಂದುಕೊಡಬಹುದು, ರಾಜಕೀಯ ಮಾಡಲಾಗಲ್ಲ. ನಾನು ಇದನ್ನು ಎಲ್ಲಾ ಮೋದಿ, ಅಮಿತ್ ಷಾ, ನಡ್ಡಾ ಭೇಟಿ ಮಾಡಿ ಗಮನಕ್ಕೆ ತರುತ್ತೇನೆ. ನಿಮ್ಮ ವ್ಯವಹಾರ ಎಲ್ಲಾ ಗಮನಕ್ಕೆ ತರುತ್ತೇನೆ ಎಂದಿದ್ದರು.
ಸುಧಾಕರ್ ಆರೋಪಕ್ಕೆ ವಿಜಯೇಂದ್ರ ಹೇಳಿದ್ದೇನು?
ಇನ್ನು ಸುಧಾಕರ್ ಆರೋಪಿಗಳಿಗೆ ಪ್ರತಿಕ್ರಿಯಿಸಿದ್ದ ವಿಜಯೇಂದ್ರ, ಪಕ್ಷಕ್ಕಾಗಿ ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಾರ ಜೊತೆಗೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ನನಗೆ ಯಾವುದೇ ಫೋನ್ ಕರೆ ಮಾಡಿಲ್ಲ. ಪಕ್ಷ ಯಾರ ಸ್ವತ್ತೂ ಅಲ್ಲ. ಸುಧಾಕರ್ ಅವರು ಹಗುರವಾಗಿ ಮಾತನಾಡಬಾರದು ಎಂಬ ಮನವಿ ಮಾಡುತ್ತೇನೆ ಎಂದೂ ಅವರು ತಿಳಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಧಾಕರ್ ಬಾಯಲ್ಲಿ ಯುದ್ಧದ ಮಾತು ಯಾಕೆ ಬಂತೋ ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು,
Published On - 8:18 pm, Mon, 10 February 25