ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಜನಪ್ರತಿನಿಧಿಗಳ ವಿಶೇಷ ಪೀಠಕ್ಕೆ ಯುವತಿ ಅರ್ಜಿ ವರ್ಗಾವಣೆ

ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿಯಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 23ಕ್ಕೆ ನ್ಯಾಯಾಲಯ ಮುಂದೂಡಿತು. ಈ ಪ್ರಕರಣವನ್ನು ಜನಪ್ರತಿನಿಧಿಗಳಿಗಾಗಿನ ವಿಶೇಷ ಪೀಠಕ್ಕೆ ಕೇಸ್ ವರ್ಗಾವಣೆ ಮಾಡಲಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಜನಪ್ರತಿನಿಧಿಗಳ ವಿಶೇಷ ಪೀಠಕ್ಕೆ ಯುವತಿ ಅರ್ಜಿ ವರ್ಗಾವಣೆ
ಕರ್ನಾಟಕ ಹೈಕೋರ್ಟ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 21, 2021 | 4:18 PM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಯುವತಿ ಸಲ್ಲಿಸಿದ್ದ ಅರ್ಜಿಯನ್ನು  ಕರ್ನಾಟಕ ಹೈಕೋರ್ಟ್​ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿತು. ಸಿಡಿ ಬಹಿರಂಗ ಕೇಸ್​ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಯುವತಿ ಅರ್ಜಿಯಲ್ಲಿ ಕೋರಿದ್ದರು. ರಮೇಶ್ ಜಾರಕಿಹೊಳಿ ಹ್ಯಾಂಡ್ ಸಮನ್ಸ್ ಪಡೆದಿಲ್ಲ ಎಂದು ಯುವತಿ ಪರ ವಕೀಲ ಸಂಕೇತ್ ಏಣಗಿ ವಾದಿಸಿದರು. ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿಯಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 23ಕ್ಕೆ ನ್ಯಾಯಾಲಯ ಮುಂದೂಡಿತು. ಈ ಪ್ರಕರಣವನ್ನು ಜನಪ್ರತಿನಿಧಿಗಳಿಗಾಗಿನ ವಿಶೇಷ ಪೀಠಕ್ಕೆ ಕೇಸ್ ವರ್ಗಾವಣೆ ಮಾಡಲಾಗಿದೆ.

ಪ್ರಕರಣದ ವಿವರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ದೂರನ್ನು ಆಧರಿಸಿ ದಾಖಲಿಸಿರುವ ಎಫ್ಐಆರ್ ಹಾಗೂ ಎಸ್ಐಟಿ ತನಿಖೆ ರದ್ದು ಕೋರಿ ಯುವತಿ ಸಲ್ಲಿಸಿರುವ ಅರ್ಜಿ ವಿಚಾರಣೆಯು ಜೂನ್ 23ಕ್ಕೆ ಮುಂದೂಡಿಕೆಯಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ರಮೇಶ್ ಜಾರಕಿಹೊಳಿಗೆ ನೀಡಿದ್ದ ನೋಟಿಸ್ ಜಾರಿಯಾಗಿಲ್ಲ. ಅಲ್ಲದೇ ಹೈಕೋರ್ಟ್ ನೀಡಿದ್ದ ಹ್ಯಾಂಡ್ ಸಮನ್ಸ್ ಅನ್ನು ರಮೇಶ್ ಜಾರಕಿಹೊಳಿ ಸ್ವೀಕರಿಸಿಲ್ಲವೆಂದು ಯುವತಿ ಪರ ವಕೀಲ ಸಂಕೇತ್ ಏಣಗಿ ವಾದ ಮಂಡಿಸಿದರು. ಎಸ್ಐಟಿ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಈ ವೇಳೆ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪ್ರತಿವಾದಿಯಾಗಿರುವುದರಿಂದ ಪ್ರಕರಣವನ್ನು ಜನಪ್ರತಿನಿಧಿಗಳಿಗಾಗಿನ ವಿಶೇಷ ಪೀಠಕ್ಕೆ ವರ್ಗಾಯಿಸುವಂತೆ ಯುವತಿ ಪರ ವಕೀಲರು ಮನವಿ ಮಾಡಿದರು. ಮನವಿ ಪರಿಗಣಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್​ಕುಮಾರ್ ಅವರ ಏಕಸದಸ್ಯ ಪೀಠ ಪ್ರಕರಣವನ್ನು ವಿಶೇಷ ಪೀಠಕ್ಕೆ ವರ್ಗಾಯಿಸಿ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ.

ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ರಮೇಶ್ ಜಾರಕಿಹೊಳಿ ತಮ್ಮ ಮೇಲೆ ಸುಳ್ಳು ದೂರು ದಾಖಲಿಸುವುದಾಗಿ ಹೆದರಿಸಿ ಹಣಕ್ಕಾಗಿ ಬ್ಲಾಕ್​ಮೇಲ್ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ನಂತರ ಹೇಳಿಕೆಯನ್ನು ವಿಸ್ತರಿಸಿದ್ದ ರಮೇಶ್ ಜಾರಕಿಹೊಳಿ ಹಣಕ್ಕಾಗಿ ನರೇಶ್ ಗೌಡ ಹಾಗೂ ಶ್ರವಣ್ ಹನಿಟ್ರ್ಯಾಪ್ ಹಾಗೂ ಬ್ಲಾಕ್ ಮೇಲ್ ಮಾಡಿದ್ದಾರೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರವಣ್ ಹಾಗೂ ನರೇಶ್ ಗೌಡ ವಿಚಾರಣೆಯನ್ನು ಎಸ್ಐಟಿ ಪೊಲೀಸರು ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಯುವತಿಯನ್ನು ಆರೋಪಿಯಾಗಿಸಿಲ್ಲ. ಆದರೆ ಶ್ರವಣ್​ನಿಂದ ಯುವತಿಗೆ ಹಣ ಸಂದಾಯವಾಗಿರುವುದಾಗಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್ಐಟಿ ಪೊಲೀಸರು ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕರಣ ರದ್ದು ಕೋರಿ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ಯುವತಿ ಸಲ್ಲಿಸಿರುವ ಅರ್ಜಿಯಲ್ಲಿ ಎಸ್ಐಟಿ ಪೊಲೀಸರು ರಮೇಶ್ ಜಾರಕಿಹೊಳಿಯನ್ನು ರಕ್ಷಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳದೇ ಕೇವಲ ಶ್ರವಣ್, ನರೇಶ್​ರನ್ನು ಗುರಿ ಮಾಡಿ ತನಿಖೆ ನಡೆಸುತ್ತಿದ್ದಾರೆ. ಇದರಿಂದ ತನಿಖೆಯ ಹಾದಿ ತಪ್ಪಿದಂತಾಗಿದೆ. ಹೀಗಾಗಿ ಪ್ರಕರಣ ರದ್ದುಪಡಿಸುವಂತೆ ಯುವತಿ ಕೋರಿದ್ದಾಳೆ. ಸದ್ಯಕ್ಕೆ ವಿಚಾರಣೆ ಜೂನ್ 23ಕ್ಕೆ ಮುಂದೂಡಿಕೆಯಾಗಿದೆ. ಅದೇ ದಿನ ಸಿಬಿಐ ತನಿಖೆ ಕೋರಿರುವ ಪಿಐಎಲ್ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದಲ್ಲಿ ನಡೆಯಲಿದೆ.

(High Court Adjourns Ramesh Jarkiholi Lady Petition Case transferred to Another Bench)

ಇದನ್ನೂ ಓದಿ: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ನರೇಶ್​ ಗೌಡ ಹಾಗೂ ಶ್ರವಣ್​ಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ತನ್ನನ್ನೂ ವಾದಿಯಾಗಿಸಲು ಯುವತಿಯಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada