ಹುಬ್ಬಳ್ಳಿ ಅಂಕೋಲಾ ಜೋಡಿ ರೈಲು ಹಳಿ: ಕರ್ನಾಟಕಕ್ಕೆ ಅಶ್ವಿನಿ ವೈಷ್ಣವ್ ಕೊಟ್ಟರು ಗುಡ್ ನ್ಯೂಸ್

|

Updated on: Aug 09, 2024 | 7:25 AM

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಬಹುಕಾಲದಿಂದ ನನೆಗುದಿಗೆ ಬಿದ್ದಿದೆ. ಆದರೆ ಈ ವಿಚಾರವಾಗಿ ಇದೀಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಮಾಹಿತಿ ನೀಡಿದ್ದಾರೆ. ಯೋಜನೆಗೆ ಹೊಸ ಡಿಪಿಆರ್ ಸಲ್ಲಿಸುವುದು ಸೇರಿದಂತೆ ಈ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣದ ಬಗ್ಗೆ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಸಚಿವರು ನೀಡಿದ ಮಾಹಿತಿಯ ವಿವರ ಇಲ್ಲಿದೆ.

ಹುಬ್ಬಳ್ಳಿ ಅಂಕೋಲಾ ಜೋಡಿ ರೈಲು ಹಳಿ: ಕರ್ನಾಟಕಕ್ಕೆ ಅಶ್ವಿನಿ ವೈಷ್ಣವ್ ಕೊಟ್ಟರು ಗುಡ್ ನ್ಯೂಸ್
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಬೆಂಗಳೂರು, ಆಗಸ್ಟ್ 9: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕಾಗಿ ಹೊಸ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧವಿದೆ. ಈ ಕಾರಣಕ್ಕಾಗಿ ರೈಲು ಮಾರ್ಗ ಯೋಜನೆಗೆ ಈಗಾಗಲೇ ಮಾಡಿರುವ ವಿನ್ಯಾಸವನ್ನು ಇಲಾಖೆ ಬದಲಿಸಲಿದ್ದು, ಜೋಡಿ ಹಳಿ ನಿರ್ಮಾಣ ಮಾಡಲಿದೆ ಎಂದು ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಬ್ಬಳ್ಳಿ-ಕಿರಾವತಿ (47 ಕಿ.ಮೀ) ಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದಾಗ್ಯೂ, 569.64 ಹೆಕ್ಟೇರ್ ಅರಣ್ಯ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಕಾರಣ ಮುಂದಿನ ಕೆಲಸವನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಈಗ ವ್ಯಾಜ್ಯಗಳ ಪರಿಹಾರದ ನಂತರ, ರೈಲು ಮಾರ್ಗವನ್ನು ಜೋಡಿ ಹಳಿಯೊಂದಿಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ರೈಲು ಮಾರ್ಗವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವುದರಿಂದ, ಅರಣ್ಯ ಮತ್ತು ವನ್ಯಜೀವಿಗಳಿಗೆ ಹಾನಿಯಾಗದಂತೆ ವಿಸ್ತೃತ ಯೋಜನಾ ವರದಿಯನ್ನು ಪರಿಷ್ಕರಿಸಲು ರೈಲ್ವೆ ಇತ್ತೀಚೆಗೆ ನಿರ್ಧರಿಸಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್​ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ

ಇದಕ್ಕೂ ಮುನ್ನ, ಯೋಜನೆಗೆ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸುವುದಾಗಿ ಮತ್ತು ಕಾನೂನಿನ ಪ್ರಕಾರ ಎಲ್ಲಾ ಅನುಮತಿಗಳನ್ನು ಪಡೆದ ನಂತರವೇ ಮುಂದುವರಿಯುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ರೈಲ್ವೆ ಇಲಾಖೆ ತಿಳಿಸಿತ್ತು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲ್ಯೂಎಲ್) ನಿರ್ದೇಶನಗಳನ್ನು ಅನುಸರಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿತ್ತು. ಯೋಜನೆ ಜಾರಿಯಿಂದ ಅರಣ್ಯಕ್ಕೆ ಹಾನಿಯಾಗುವ ಆತಂಕ ವ್ಯಕ್ತಪಡಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್​​​ನಲ್ಲಿ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ