ಹುಬ್ಬಳ್ಳಿ, ಸೆಪ್ಟೆಂಬರ್ 06: ಕೋಮು ಗಲಭೆಯ ಕೇಂದ್ರ ಸ್ಥಾನ ಎಂದು ಕುಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಈಗ ಕೋಮು ಸಾಮರಸ್ಯದ ಚಿಲುಮೆ ಮೂಡಿದೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಹಿಂದು- ಮುಸ್ಲಿಂ ಸಮುದಾಯಗಳು ಶಾಂತಿಯುತ ಜೀವನ, ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ಗಣೇಶ ಹಬ್ಬ (Ganesh Chaturthi) ಮತ್ತೊಂದು ಹೆಜ್ಜೆಯಾಗಿದೆ. ಗಣೇಶ ಹಬ್ಬದಲ್ಲಿ ಬಡಿದಾಡಿಕೊಳ್ಳುತ್ತಿದ್ದ ಹುಬ್ಬಳ್ಳಿಯಲ್ಲಿ ಈಗ ಹಿಂದೂ- ಮುಸ್ಲಿಂ ಭಾಯಿ ಭಾಯಿ ಎನ್ನುವಂತೆ ವಿಘ್ನನಿವಾರಕ ಮಾಡಿದ್ದಾನೆ.
ಹುಬ್ಬಳ್ಳಿ ಎಂದ ತಕ್ಷಣವೇ ನಮಗೆ ನೆನಪಾಗೋದು ವಾಣಿಜ್ಯದ ಹೆಡ್ ಕ್ವಾಟರ್ಸ್. ಇದರ ಬಳಿಕ ತಲೆಗೆ ಬರೋದೆ ರಕ್ತ ಚರಿತೆ ಹೊಂದಿರುವ, ಕೋಮು ಗಲಭೆಯ ಕುರುಹುಗಳು. ಸಣ್ಣ ಪುಟ್ಟ ಗಲಾಟೆಯಿಂದ ಹಿಡಿದು, ಈದ್ಗಾ ಮೈದಾನ, ಅಯೋಧ್ಯೆಯ ಜನ್ಮಭೂಮಿ ಹೋರಾಟದಂತಹ ಕರಾಳ ನೆನಪಿಗಳಿವೆ. ಇದಕ್ಕೆ ಗಣೇಶ ಹಬ್ಬವು ಹೊರತಾಗಿಲ್ಲ. ಹಬ್ಬ ಬಂದರೆ ಹುಬ್ಬಳ್ಳಿ ಮಂದಿಗೆ ಎಷ್ಟು ಖುಷಿನೋ, ಅಷ್ಟೇ ಆತಂಕದ ಛಾಯೆ ಆವರಿಸುತ್ತದೆ. ಮೆರವಣಿಗೆಯಲ್ಲಿ ಏನು ಅನಾಹುತ ಆಗುತ್ತೋ ಅಂತ ಜನ ಭಯದಲ್ಲಿ ಇರತ್ತಾರೆ. ಇಂತಹ ಹುಬ್ಬಳ್ಳಿಯಲ್ಲಿ ಇದೇ ಗಣೇಶ ಹಬ್ಬ ಈಗ ಸಹೋದರ ಸಾಮರಸ್ಯವನ್ನು ಸಾರಿ ಹೇಳುತ್ತಿದೆ. ಹಿಂದುಗಳ ಜೊತೆಗೆ ಮುಸ್ಲಿಂ ಸಮುದಾಯ ಸಹ ಖುಷಿ ಖುಷಿಯಾಗಿ ಗಣೇಶನ ಉತ್ಸವ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು..!
ಹುಬ್ಬಳ್ಳಿಯ 51 ವಾರ್ಡ್ನ ಪ್ರಿಯದರ್ಶಿನಿ ಕಾಲೋನಿಯ ಚಹ್ವಾಣ್ ಪ್ಲಾಟ್ ನಿವಾಸಿಗಳು ಇಂತಹ ಸಾಮರಸ್ಯದ ಘಟನೆಗೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಮಾರುತಿ ಹಿತವರ್ತಕ ಸೇವಾ ಸಂಘ ಕಳೆದ 15 ವರ್ಷಗಳಿಂದ ಗಣೇಶ ಉತ್ಸವ ಮಾಡುತ್ತಿದೆ. ಆದರೆ ಈ ಬಾರಿ ಇಲ್ಲಿ ಹಿಂದೂ-ಮುಸ್ಲಿಂ ಒಂದೇ ಎಂದು ಸಾರುವ ವಿನಾಯಕ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಇಸ್ಲಾಂ ಧರ್ಮದ ಸಾಬುಬುದ್ದಿನ್ ಮತ್ತು ಸಲ್ಮಾ ದಂಪತಿ ಈ ಬಾರಿ 25 ಸಾವಿರದ ಬೃಹತ್ ಗಣೇಶ ಮೂರ್ತಿಯನ್ನು ಮಂಡಳಿಗೆ ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
ಇನ್ನೂ ನದಾಫ್, ಕಲ್ಲೂರ ಎಂಬ ಇಮ ಮಾಜಿ ಪೊಲೀಸ್ ಅಧಿಕಾರಿಗಳು ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಅವರೇ ಮುಂದೆ ನಿಂತು ಮಾಡುತ್ತಿದ್ದಾರೆ. ಹಿಂದೂಗಳ ಧರ್ಮ ಬೇಧವನ್ನು ಮರೆತು ಮುಸ್ಲಿಂ ಕುಟುಂಬಗಳು ಹಬ್ಬದಲ್ಲಿ ಭಾಗಿವಹಿಸುತ್ತಿರುವ, ಸ್ಥಳೀಯರಿಗೆ ಹೆಚ್ಚಿನ ಖುಷಿ ತಂದಿದೆ. ಹಬ್ಬದ ನೆಪದಲ್ಲಿ ಒಂದು ಧರ್ಮವನ್ನು ಮತ್ತೊಂದು ಧರ್ಮದವರು ಕೀಳಾಗಿ ನೋಡುವ, ತೊಂದರೆ ನೀಡುವ ಅದೆಷ್ಟೋ ಜನರಿಗೆ ಇದು ಮಾದರಿಯಾಗಿದೆ.
ಇಷ್ಟು ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಂಘಟನೆಗಳ ವಿರೋಧ ಇಲ್ಲದೆ, ಯಾವುದೇ ವಿವಾದಾತ್ಮಕ ಘಟನೆಗಳಿಲ್ಲದೆ ಬಹಳಷ್ಟು ಸುಲಭವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಅಲ್ಲದೆ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ನಡೆಸಿದ ಶಾಂತಿ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಂಘಟನೆಗಳು, ಮುಖಂಡರು ಮುಕ್ತವಾಗಿ ಭಾಗಿಸವಹಿಸಿ, ತಮ್ಮ ಅಭಿಪ್ರಾಯ ಹಂಚಿಕೊಂಡಿವೆ.
ಇನ್ನೂ ಮುಂದೆ ಧರ್ಮದ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಶಾಂತಿ ಭಂಗವಾಗೋದು ಬೇಡ. ನಾವೆಲ್ಲರೂ ಒಂದಾಗಿ ಹಬ್ಬಗಳನ್ನು ಆಚರಣೆ ಮಾಡೋಣ. ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಒಂದೇ ಸಮಯದಲ್ಲಿ ಬಂದಿದೆ. ಹೀಗಾಗಿ ನಾವು ಶಾಂತಿ ಮತ್ತು ಸಂತೋಷದಿಂದ ಹಬ್ಬ ಆಚರಣೆ ಮಾಡಿ, ರಾಜ್ಯಕ್ಕೆ ಮಾದರಿಯಾಗುವ ಪ್ರಯತ್ನ ಮಾಡೋಣ ಅಂತ ಶಾಂತಿ ಸಭೆಯಲ್ಲಿ ಒಗ್ಗಟ್ಟಿನ ಧ್ವನಿ ಜೋರಾಗಿ ಕೇಳಿಬಂದಿದೆ.
ಹುಬ್ಬಳ್ಳಿಯಲ್ಲಿ ಕೋಮು ಸಾಮರಸ್ಯದ ವಾತಾವರಣ ನಿರ್ಮಾಣವಾಗುವ ಲಕ್ಷಣಗಳು ಕಂಡುಬರುತ್ತಿರುವುದು ಸಂತಸದ ವಿಷಯವಾಗಿದೆ. ಕಹಿ ಘಟನೆಗಳನ್ನು ಮರೆತು ಹುಬ್ಬಳ್ಳಿಯಲ್ಲಿ ಸಹೋದರತ್ವ ಮೂಡಲಿ, ವಿನಾಯಕ ಎಲ್ಲಾ ವಿಘ್ನಗಳ ದೂರ ಮಾಡಿ, ಸಮಾಜಕ್ಕೆ ಒಳಿತಾಗಲಿ ಎನ್ನುವುದು ಜನರ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.