
ಆನೇಕಲ್, ಏಪ್ರಿಲ್ 09: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಹಸೆಮಣೆ ಏರಬೇಕಿದ್ದ ಯುವಕ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಳಿಮಾವು ಜಾತ್ರೆಯಲ್ಲಿ ನಡೆದಿದೆ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಿನ್ನೆ ನಡೆದಿದ್ದು, ರಥೋತ್ಸವ ಹಿನ್ನಲೆ ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಅಕ್ಷತ್ (27) ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ.
ಬನಶಂಕರಿ ನಿವಾಸಿಯಾಗಿರುವ ಅಕ್ಷತ್, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ವಿತರಿಸಲೆಂದು ಬಂದಿದ್ದರು. ಹಾಗೆ ಜಾತ್ರೆಯನ್ನೂ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇನ್ನು ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆ ನಡೆದು ಓರ್ವ ಮೃತಪಟ್ಟಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ; ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಗೇಟ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಜಯ್, ದೊಡ್ಡಗೌಡ, ಅಂಬರೀಶ್ ಗಾಯಾಳುಗಳಾಗಿದ್ದು, ಇವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.