Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ: ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಆಡಿರುವ ಮಾತು ರಾಜ್ಯ ರಾಜಕೀಯದಲ್ಲಿ ಬೆಂಕಿ ಹೊತ್ತಿಸಿದೆ. ಕಾಂಗ್ರೆಸ್‌ಗೆ ಇದು ಹೊಸ ಅಸ್ತ್ರವಾಗಿದೆ. ಸದ್ಯ ಈ ವಿಚಾರವಾಗಿ ಮಾತನಾಡಿರುವ ಕುಮಾರಸ್ವಾಮಿ, ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಅಸಡ್ಡೆಯಿಂದ ಕಂಡಿಲ್ಲ, ಅಪಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 14, 2024 | 6:14 PM

ಬೆಂಗಳೂರು, ಏಪ್ರಿಲ್ 14: ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ‌ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸಾರಾಯಿ‌ ನಿಷೇಧಿಸಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಅಸಡ್ಡೆಯಿಂದ ಕಂಡಿಲ್ಲ, ಅಪಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ ಎಂದಿದ್ದಾರೆ.

ತಿರುಚುವುದು ಕಾಂಗ್ರೆಸ್​​ನ ಪುರಾತನ ಚಾಳಿ ಎಂದ ಜೆಡಿಎಸ್​​

ಈ ವಿಚಾರವಾಗಿ ಜೆಡಿಎಸ್​ ಟ್ವೀಟ್ ಮಾಡಿದ್ದು, ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್​​ ಪಕ್ಷದ ಪುರಾತನ-ಪರಂಪರಾಗತ ಚಾಳಿ. 75 ವರ್ಷಗಳಿಂದ ಇದನ್ನೇ ಮಾಡಿಕೊಂಡು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಆಳುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ಆಧುನಿಕ ಅವತಾರವೇ ಕಾಂಗ್ರೆಸ್. ಜನರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ ಹಾಗೂ ಕರ್ನಾಟಕದಲ್ಲಿ ತನ್ನ ರಕ್ಕಸಭೋಜನ ಮುಂದುವರಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಮಹಿಳೆಯರ ಬಗ್ಗೆ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಮಹಿಳಾ ಆಯೋಗ

ತುರುವೇಕೆರೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕಾಂಗ್ರೆಸ್ ಫೇಕ್ ಫ್ಯಾಕ್ಟರಿ ತಿರುಚಿ ಮೈ ಪರಚಿಕೊಳ್ಳುತ್ತಿದೆ. “ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ” ಎಂದು ಹಸಿಸುಳ್ಳು ಹಬ್ಬಿಸುತ್ತಿದೆ. ನೆನಪಿರಲಿ; ಇದೇ ಹಳ್ಳಿ ತಾಯಂದಿರ ಬದುಕಿಗೆ ನರಕವಾಗಿದ್ದ ಸಾರಾಯಿ, ಲಾಟರಿ ನಿಷೇಧ ಮಾಡಿ ಅವರ ಮಾಂಗಲ್ಯ ಉಳಿಸಿದ್ದು ಇದೇ ಕುಮಾರಣ್ಣ. ನಿತ್ಯನರಕವಾಗಿದ್ದ ಅವರ ಬದುಕಿಗೆ ಸಾಂತ್ವನ ಹೇಳಿದ್ದೂ ಇವರೇ. ವಿಧವಾ ಪಿಂಚಣಿಯನ್ನು ₹200 ರಿಂದ ₹400ಕ್ಕೆ ಹೆಚ್ಚಿಸಿ ಅವರಿಗೆ ಶಕ್ತಿ ತುಂಬಿದ್ದು ಕುಮಾರಣ್ಣ ಅಲ್ಲವೇ?

ಜೆಡಿಎಸ್​​ ಟ್ವೀಟ್​

2018-19ರಲ್ಲಿ ಕಾಂಗ್ರೆಸ್​ ವಿರೋಧ ಲೆಕ್ಕಿಸದೆ ರೈತರ ₹25,000 ಕೋಟಿ ರೂ. ಸಾಲ ಮಾಡಿದ್ದು ಹಳ್ಳಿ ತಾಯಂದಿರ ಅಣ್ಣ ಇದೇ ಕುಮಾರಣ್ಣ. ಸಾಲ ಮನ್ನಾ ನಮ್ಮ ಕಾರ್ಯಕ್ರಮವೇ ಅಲ್ಲ; ನಮ್ಮ ಭಾಗ್ಯಗಳಿಗೆ ನಯಾಪೈಸೆ ಕಮ್ಮಿ ಆಗಂಗಿಲ್ಲ ಎಂದು ಟವೆಲ್ ಕೊಡವಿದ್ದು ಯಾರು ಕಾಂಗ್ರೆಸ್ಸಿಗರೇ? ನಿಮಗೆ ನೆನಪಿಲ್ಲವೇ? ಇಂಥ ಕುಮಾರಣ್ಣ ತಾಯಂದಿರನ್ನು ಅಪಮಾನಿಸುತ್ತಾರೆಯೇ? ಸುಳ್ಳು ಹೇಳಿದರೆ ಜನ ನಂಬುತ್ತಾರೆಯೇ

ಕಾಂಗ್ರೆಸ್ ದಾರಿದ್ರ್ಯ ಎಲ್ಲಿಗೆ ಬಂದು ನಿಂತಿದೆ ನೋಡಿ, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮದ್ಯಪಾನಕ್ಕೆ ಭಾರೀ ಪ್ರೋತ್ಸಾಹ ಕೊಡುವುದು ‘ಕಾಂಗ್ರೆಸ್ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ಆಗಿದೆ. ಶ್ರೀಗಂಧ, ಸುಗಂಧದ ನಾಡಾಗಿರುವ ಕರ್ನಾಟಕವನ್ನು ಮದ್ಯದ ಬೀಡನ್ನಾಗಿಸುತ್ತಿದೆ. ಇದನ್ನು ಪ್ರಶ್ನಿಸಿದರೆ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ ಹಾಗೆಯೇ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ನಾಯಕರು

ಕುಮಾರಸ್ವಾಮಿ ಅವರು ಹೇಳಿದ್ದು, ಗ್ಯಾರಂಟಿಗಳಿಂದ ತಾಯಂದಿರನ್ನು ದಿಕ್ಕು ತಪ್ಪಿಸುತ್ತಿದೆ ಎಂದು. ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವ ಬದಲು ಅಗ್ಗದ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದು. ಕಾಂಗ್ರೆಸ್ ತನ್ನ ಪಾಪಗಳನ್ನು ಮುಚ್ಚಿಟ್ಟುಕೊಳ್ಳಲು ಸತ್ಯಕ್ಕೆ ಸುಳ್ಳಿನ ಮುಖವಾಡ ಹಾಕುತ್ತಿದೆ. ನಿಜಕ್ಕಾದರೆ, ದಾರಿ ತಪ್ಪುತ್ತಿರುವುದು ರಾಜ್ಯದ ಆರ್ಥಿಕತೆ, ಕರ್ನಾಟಕದ ಹೆಗ್ಗಳಿಕೆ, ಕರ್ನಾಟಕ ಪ್ರತಿಷ್ಠೆ. ಹೆಚ್ಚುತ್ತಿರುವುದು ತಾಯಂದಿರ ಮೇಲಿನ ಸಾಲ. ಈ ವರ್ಷ ₹1 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡುವ ಗುರಿ ಇಟ್ಟುಕೊಂಡಿದೆ ಈ ಸರಕಾರ. ಆ ಸಾಲ ತೀರಿಸೋರು ಯಾರು? ಕಾಂಗ್ರೆಸ್ ತನ್ನ ಖಜಾನೆಯಿಂದ ತೀರಿಸುತ್ತದೆಯೇ ಎಂದು ವಾಗ್ದಾಳಿ ಮಾಡಿದೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.