‘ಗೃಹಲಕ್ಷ್ಮೀ’ ನೋಂದಣಿ ತಾತ್ಕಾಲಿಕ ಸ್ಥಗಿತ ಟ್ವೀಟ್​​: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಹೇಳಿದ್ದಿಷ್ಟು

‘ಗೃಹಲಕ್ಷ್ಮೀ’ ನೋಂದಣಿ ಸ್ಥಗಿತ ಆಗಿದೆ ಎಂಬ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​​ ಆಶ್ಚರ್ಯ ಪಟ್ಟಿದ್ದಾರೆ. ಟ್ವೀಟ್​ ಸಂಬಂಧ ಎಲ್ಲರಿಗೂ ನೋಟಿಸ್​ ಜಾರಿ ಮಾಡಿದ್ದೇವೆ. ಈ ವಿಚಾರವನ್ನು ಬಹಳ ಸೀರಿಯಸ್​ ಆಗಿ ತೆಗೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ​ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 7: ‘ಗೃಹಲಕ್ಷ್ಮೀ’ (Gruha Lakshmi Scheme) ನೋಂದಣಿ ಸ್ಥಗಿತ ಆಗಿದೆ ಅಂತಾ ಕೇಳಿ ನನಗೆ ಆಶ್ಚರ್ಯ ಆಯ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರ ಕರೆದು ಮಾತನಾಡಿದೆ. ಅತಾಚುರ್ಯದಿಂದ ನಮ್ಮ ಇಲಾಖೆಯಿಂದ ಈ ಟ್ವೀಟ್ ಆಗಿದೆ. ಏಕೆ ಆ ರೀತಿ ಆಯ್ತು ಗೊತ್ತಾಗುತ್ತಿಲ್ಲ. ಟ್ವೀಟ್​ ಸಂಬಂಧ ಎಲ್ಲರಿಗೂ ನೋಟಿಸ್​ ಜಾರಿ ಮಾಡಿದ್ದೇವೆ. ಈ ವಿಚಾರವನ್ನು ಬಹಳ ಸೀರಿಯಸ್​ ಆಗಿ ತೆಗೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ​ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಆಗಿದೆ. ಬ್ಯಾಂಕ್​ನಿಂದ ಮಾತ್ರ ಹಣ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತೆ. ನಿಧಾನವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗುತ್ತಿದೆ. ಫಲಾನುಭವಿಗಳಿಗೆ ನಮ್ಮ ಇಲಾಖೆಯಿಂದ ಹಣ ಕಳುಹಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೂ ಲಾಭ ಸಿಗುತ್ತಿದೆ. ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ ಎಂದು ತಿಳಿಸಿದರು.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸರ್ಕಾರ, ಕಾರಣವೇನು?

ನಿನ್ನೆ ರಾತ್ರಿ ತನಕ 1.8 ಕೋಟಿ ರೂ. ಅಕೌಂಟ್​​ಗೆ ಇಲ್ಲಿಯವರೆಗೆ ಹಣ ಡಿಬಿಟಿ ಪ್ರೊಸೆಸ್ ಆಗಿದೆ. ಅದರಲ್ಲಿ 63 ಲಕ್ಷ ರೂ. ಅಕೌಂಟ್​ಗೆ ಹಣ ತಲುಪಿ ಆಗಿದೆ. ಬ್ಯಾಂಕ್​ನಿಂದ ಮಾತ್ರ ಹಣ ನಿಧಾನ ಆಗಿದೆ. ನಮ್ಮಿಂದ ಹಣ ಈಗಾಗಲೇ ವರ್ಗಾವಣೆ ಆಗಿದೆ. ಸರ್ಕಾರದಿಂದ ಯಾವುದೇ ತೊಂದರೆ ಆಗಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಹಣ ಎಲ್ಲರಿಗೂ ವರ್ಗಾವಣೆ ಆಗಲಿದೆ. 1.28 ಕೋಟಿ ಯಜಮಾನಿಯರಿಗೆ ಹಣ ಹೋಗುತ್ತೆ. ಹೊಸದಾಗಿ ನೊಂದಣಿ ಆದವರಿಗೂ ಯೋಜನೆ ಲಾಭ ಸಿಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಡಿಕೇರಿ ಗೃಹ ಲಕ್ಷ್ಮಿ ಯೋಜನೆ ಲಾಭಾರ್ಥಿಗಳು ಆಧಾರ್ ಲಿಂಕ್ ಆಗಿದ್ದ ತಮ್ಮ ಬ್ಯಾಂಕ್ ಖಾತೆಯೊಂದಿಗೆ ವ್ಯವಹಾರವನ್ನೇ ಇಟ್ಟುಕೊಂಡಿರಲಿಲ್ಲ!

ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇಂದು ಟ್ವೀಟ್​ ಮಾಡಲಾಗಿತ್ತು. ಯೋಜನೆ ಸ್ಥಗಿತ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಇಲಾಖೆ ಅಧಿಕಾರಿಗಳು ಟ್ವೀಟ್ ಡಿಲೀಟ್​ ಮಾಡಿದ್ದಾರೆ. ಅಲ್ಲಿಗೆ ಇಲಾಖೆಗೂ, ಸಚಿವರಿಗೂ ಸಮನ್ವಯತೆ ಕೊರತೆ ಉಂಟಾಗಿದೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us