ಬೇರೆ ಕಡೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುವೆ: ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟ ಸಿದ್ದರಾಮಯ್ಯ
badami constituency: ನೀವು ಅಲ್ಲೇ ನಿಲ್ಲಬೇಕು ಎಂದು ಬಾದಾಮಿ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ಅಲ್ಲಿಂದ ಬಂದಿದ್ದ ಅಭಿಮಾನಿಗಳು ಕೂಗಿದಾಗ ನಿಮಗೆ ಚಿರ ಋಣಿಯಾಗಿರ್ತಿನಿ. ನಾನು ಬಾದಾಮಿ ಕ್ಷೇತ್ರದ ಶಾಸಕ ಜನ ಇಚ್ಛೆ ಪಡುತ್ತಿರುವ ಹಿನ್ನೆಲೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಮುಂದೆ ಘೋಷಣೆ ಮಾಡಿದರು.
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ 2023ರಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರಾದರೂ ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುತ್ತೇನೆ ಎಂದು ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟರು.
ಬಾದಾಮಿಯಿಂದ ಕ್ಷೇತ್ರದ ಜನ ಇಂದು ಬೆಳಗ್ಗೆ ಬೆಂಗಳೂರಿಗೆ ಬಂದು ಬಾದಾಮಿ ಕ್ಷೇತ್ರ ಬಿಡ ಬೇಡಿ ಎಂದು ಮನವಿ ಮಾಡಿದ್ದರು. ಬಾದಾಮಿ ಕ್ಷೇತ್ರದ ಜನ ಬೆಂಗಳೂರಿಗೆ ಬಂದು ತನ್ನನ್ನು ಭೇಟಿ ಮಾಡುವುದರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಇದನ್ನ ನಿರೀಕ್ಷೆ ಮಾಡಲಿಲ್ಲ. ನಿನ್ನೆ ಗೊತ್ತಾಯ್ತು.. ಪಾಪಾ ಏಕೆ ಬರ್ತಾ ಇದಾರೆ ಅಂತಾ ಕೇಳಿದೆ. ಇಲ್ಲ. 2023 ರಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಲು ಬರ್ತಾ ಇದಾರೆ ಅಂದರು. ಖರ್ಚು ಮಾಡಿಕೊಂಡು ಬರುವುದು ಬೇಡ ಅಂತಾ ಹೇಳಿದ್ದೆ ಎಂದರು.
ನಾನು ಎಲ್ಲೂ ಕೂಡ ಬಾದಾಮಿಯಿಂದ ನಿಲ್ಲೊಲ್ಲ ಎಂದಿದ್ದೀನಾ? ಅಭಿಮಾನದಿಂದ ಬೇರೆ ಬೇರೆ ಕ್ಷೇತ್ರದ ಜನ ನನ್ನ ಕರೆಯುತಾರೆ. ಚಾಮರಾಜ ಪೇಟೆ, ಕೊಪ್ಪಳ ಕೋಲಾರ ಹೀಗೆ ಎಲ್ಲ ಕಡೆ ಕರೀತಾರೆ. ನಾನು ಅಲ್ಲಿ ಎಲ್ಲೂ ಕೂಡ ನಿಲ್ತೀನಿ ಅಂತಾ ಹೇಳಿಲ್ಲ. ಅಸೆಂಬ್ಲಿಯಲ್ಲಿ ಆರ್ ಅಶೋಕ ಕೇಳಿದಾಗ ನಾನು ಬಾದಾಮಿ ಶಾಸಕ, ಮುಂದೆಯೂ ಬಾದಾಮಿಯಿಂದ ನಿಂತ್ಕೋತೀನಿ ಅಂದಿದ್ದೀನಿ ಎಂದು ಸಿದ್ದರಾಮಯ್ಯ ಹೇಳಿದರು.
ನೀವು ನನ್ನ ಗೆಲ್ಲಿಸಿ ಕಳುಹಿಸಿದ್ದೀರಿ. ನಿಮ್ಮ ಅಭಿಪ್ರಾಯ ಕೇಳದೇ ನಾನು ನಿರ್ಧಾರ ಮಾಡಲು ಆಗುತ್ತಾ? ಚಾಮುಂಡೇಶ್ವರಿಯಲ್ಲಿ 5 ಸಾರಿ ಗೆದ್ದಿದ್ದೆ. ಎಲ್ಲರು ಸೇರಿ ನನ್ನ ಸೋಲಿಸಿದರು. ನೀವು ನನ್ನ ಗೆಲ್ಲಿಸಿದ್ರಿ… ನಿಮ್ಮನ್ನ ಮರೆಯಲು ಸಾಧ್ಯವಾ? ಶಾಸಕನಾದವನು ಕ್ಷೇತ್ರದಲ್ಲೇ ಇರಬೇಕು. ಆದರೆ ನಾನು ವಿಪಕ್ಷ ನಾಯಕನಾಗಿರುವ ಕಾರಣ ಕ್ಷೇತ್ರಕ್ಕೆ ಹೆಚ್ಚಾಗಿ ಬರಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನೀವು ಅಲ್ಲೇ ನಿಲ್ಲಬೇಕು ಎಂದು ಬಾದಾಮಿ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ಅಲ್ಲಿಂದ ಬಂದಿದ್ದ ಅಭಿಮಾನಿಗಳು ಕೂಗಿದಾಗ ನಿಮಗೆ ಚಿರ ಋಣಿಯಾಗಿರ್ತಿನಿ. ನಾನು ಬಾದಾಮಿ ಕ್ಷೇತ್ರದ ಶಾಸಕ. ಜನ ಇಚ್ಛೆ ಪಡುತ್ತಿರುವ ಹಿನ್ನೆಲೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಮುಂದೆ ಘೋಷಣೆ ಮಾಡಿದರು.
(i will contest from badami constituency only assures sitting mla siddaramaiah to his supporters in bangalore)
Published On - 1:10 pm, Tue, 6 July 21