
ಬೆಂಗಳೂರು, ಜೂನ್ 4: ಕರ್ನಾಟಕದ ಸಿಎಂ ಸಿದ್ದರಾಮಯ್ಯನವರ (Siddaramaiah) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆಗಿ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ (Anjum Parvez) ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ಆರ್ ಡಿಪಿಆರ್ ಮತ್ತು ಅರಣ್ಯ ಇಲಾಖೆಯ ಎಸಿಎಸ್ ಹುದ್ದೆಯ ಹೆಚ್ಚುವರಿ ಹೊಣೆಯನ್ನು ಅಂಜುಂ ಪರ್ವೇಜ್ ನಿರ್ವಹಿಸಲಿದ್ದಾರೆ. ಅಂಜುಮ್ ಪರ್ವೇಜ್ ಅವರು 1994ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನದ ಜೊತೆಗೆ ಅವರು ಕರ್ನಾಟಕದ ವಿವಿಧ ಇಲಾಖೆಗಳಿಗೆ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಅಂಜುಮ್ ಪರ್ವೇಜ್ ನಗರ ಮತ್ತು ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಶ್ರೀಮಂತ ಮತ್ತು ವೈವಿಧ್ಯಮಯ ಅನುಭವ ಮತ್ತು ಜ್ಞಾನವನ್ನು ಹೊಂದಿದ್ದಾರೆ. ಅವರು ಕರ್ನಾಟಕ ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವುಗಳಲ್ಲಿ ಪ್ರಧಾನ ಕಾರ್ಯದರ್ಶಿ (ಸಾರಿಗೆ), ವ್ಯವಸ್ಥಾಪಕ ನಿರ್ದೇಶಕ (ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್) ಇತ್ಯಾದಿಗಳೂ ಸೇರಿವೆ. ಅಂಜುಮ್ ಪರ್ವೇಜ್ ಅವರು ಪ್ರತಿಷ್ಠಿತ ಐಐಟಿ, ದೆಹಲಿಯಿಂದ ಬಿ.ಟೆಕ್ ಮತ್ತು ಐಐಎಂ ಬೆಂಗಳೂರಿನಿಂದ ಪಿಜಿಪಿಎಂ ಪದವಿ ಪಡೆದಿದ್ದಾರೆ. ಅವರು 2023ರ ಜುಲೈ 1ರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೇ, ಪ್ರಸ್ತುತ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 pm, Wed, 4 June 25