
ಬೆಂಗಳೂರು, (ಮೇ 29): ತೆರಿಗೆ ವಂಚನೆ ಸಂಬಂಧ ಐಟಿ ದಾಳಿ ಪ್ರಕರಣದಲ್ಲಿ (IT Raid Case) ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ವಿಧಿಸಲಾಗಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಡಿಲಿಸಿದೆ. ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿದೆ. ಸಚಿವರಾಗಿ ಅಧಿಕೃತ ಕೆಲಸ ಹಾಗೂ ವೈಯಕ್ತಿಕ ಉದ್ಯಮದ ನಿಮಿತ್ತ ಮುಂದಿನ ಎರಡು ವರ್ಷಗಳ ಕಾಲ ವಿವಿಧ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಆದರೆ, ಪ್ರತಿ ಬಾರಿಯೂ ಪ್ರವಾಸದ ಸಂಪೂರ್ಣ ವಿವರವನ್ನು ತನಿಖಾ ಸಂಸ್ಥೆಗೆ ಕಡ್ಡಾಯವಾಗಿ ಸಲ್ಲಿಸುವಂತೆ ಕೋರ್ಟ್ ಷರತ್ತು ವಿಧಿಸಿದೆ. ಈ ಮೂಲಕ ಸಿಎಂ ಆಗುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.
ದೆಹಲಿಯ ನಿವಾಸಗಳ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧ ಕೋರ್ಟ್ ಅನುಮತಿ ಇಲ್ಲದೇ ದೇಶಬಿಟ್ಟು ತೆರಳದಂತೆ ಕೋರ್ಟ್ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಬಳಿಕ ಡಿಕೆ ಶಿವಕುಮಾರ್, ಜಾಮೀನು ಷರತ್ತು ಸಡಿಲಿಕೆ ಕೋರಿ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ವ್ಯವಹಾರ, ಅಧಿಕೃತ ಕೆಲಸಗಳ ಹಿನ್ನೆಲೆಯಲ್ಲಿ ವಿದೇಶ ಪ್ರಯಾಣಿಸಬೇಕಿದೆ. ಅಮೆರಿಕ ಸಂಯುಕ್ತ ಸಂಸ್ಥಾನ, ಯುರೋಪ್, ಇಂಗ್ಲೆಂಡ್, ಆಸ್ಟ್ರೇಲಿಯಾ, ರಷ್ಯಾ, ಅರಬ್ ದೇಶಗಳಿಗೆ ಕಾರ್ಯಕ್ರಮ ನಿಮಿತ್ತ ಪ್ರಯಾಣಿಸಬೇಕಿದೆ. ಪ್ರತಿ ಬಾರಿ ವಿದೇಶಕ್ಕೆ ತೆರಳುವಾಗ ಕೋರ್ಟ್ಗೆ ಈ ಬಗ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ 2 ವರ್ಷಗಳ ಅವಧಿಗೆ ಜಾಮೀನು ಷರತ್ತು ಸಡಿಲಿಸುವಂತೆ ಕೋರಿದ್ದರು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ಡಿಕೆ ಶಿವಕುಮಾರ್ ಮನವಿಯನ್ನು ಪುರಸ್ಕರಿಸಿದ್ದು, ವಿದೇಶ ಪ್ರವಾಸ ಷರತ್ತನ್ನು ಸಡಿಲಗೊಳಿಸಿ ಆದೇಶಿಸಿದೆ. ಆದ್ರೆ, ವಿದೇಶಕ್ಕೆ ತೆರಳುವಾಗ ತನಿಖಾಧಿಕಾರಿಗೆ ಮಾಹಿತಿ ನೀಡಲು ಸೂಚಿಸಿದೆ.
ತೆರಿಗೆ ವಂಚನೆ ಆರೋಪದ ಮೇಲೆ ನವದೆಹಲಿಯ ವಿವಿಧ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಏಕಾಏಕಿ ಬೃಹತ್ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈಗಲ್ಟನ್ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಶಿವಕುಮಾರ್ ಅವರು ಪ್ರಮುಖ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.
ತೆರಿಗೆ ವಂಚನೆ ಆರೋಪದ ಮೇಲೆ ಡಿ.ಕೆ. ಶಿವಕುಮಾರ್ (A1), ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್ ಕುಮಾರ್ ಶರ್ಮಾ, ಅವರ ಸಹೋದರ ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ಗಳಾದ 276C(1), 277, 278 ಹಾಗೂ ಐಪಿಸಿ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಡಿಕೆ ಶಿವಕುಮಾರ್ ಮನವಿ ಮೇರೆಗೆ ಕೋರ್ಟ್, ಜಾಮೀನು ಮಂಜೂರು ಮಾಡಿತ್ತು. ಆದ್ರೆ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಕಠಿಣ ಷರತ್ತು ವಿಧಿಸಿತ್ತು.