ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಕ್​ ಡ್ರಿಲ್​ ನಡೆಸಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ಮಾಕ್ ಡ್ರಿಲ್ ನಡೆಸಲು ಆದೇಶಿಸಿದ್ದಾರೆ. ಅಗತ್ಯ ವಸ್ತುಗಳ ದರ ನಿಯಂತ್ರಣ, ಕಾಳಸಂತೆ ತಡೆ, ಸುಳ್ಳು ಸುದ್ದಿ ತಡೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದ ಭದ್ರತೆಯನ್ನು ಬಲಪಡಿಸಲು ಪೌರ ರಕ್ಷಣಾ ವ್ಯವಸ್ಥೆ ಬಲಪಡಿಸುವುದು ಕೂಡ ಒತ್ತಿಹೇಳಲಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಕ್​ ಡ್ರಿಲ್​ ನಡೆಸಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ
ಸಿದ್ದರಾಮಯ್ಯ

Updated on: May 10, 2025 | 6:09 PM

ಬೆಂಗಳೂರು, ಮೇ 10: ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಕ್​ ಡ್ರಿಲ್ (Mock Drill) ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ, ಎಸ್​ಪಿ, ಪೊಲೀಸ್ ಆಯುಕ್ತರ ಜೊತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಶನಿವಾರ (ಮೇ.10) ಸಭೆ ನಡೆಸಿದರು.

ಅಗತ್ಯ ವಸ್ತುಗಳ ದರ ಹೆಚ್ಚಳ ಆಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಅಕ್ರಮ ದಾಸ್ತಾನು, ಕಾಳಸಂತೆ ಮೇಲೆ ನಿರಂತವಾಗಿ ನಿಗಾ ವಹಿಸಬೇಕು. ಯುದ್ಧದ ಪರಿಸ್ಥಿತಿ ತಿಳಿಯಾಗುವವರೆಗೂ ಜನರಲ್ಲಿ ಜಾಗೃತಿ ಮೂಡಿಸಿ. ಯುದ್ಧದ ಸಂದರ್ಭದಲ್ಲಿ ಜನ ಹೇಗೆ ರಕ್ಷಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿ. ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸೂಚಿಸಿದರು.

ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸರ್ವಸನ್ನದ್ಧರಾಗಿರಬೇಕು. ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಮಾರ್ಗಸೂಚಿ ಸಿದ್ಧಪಡಿಸಬೇಕು. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸೇವೆ ಒದಗಿಸುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿ. ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಿ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಿ. ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ನಿರಂತರವಾಗಿ ಫ್ಯಾಕ್ಟ್ ಚೆಕ್ ನಡೆಸಿ ಸ್ಪಷ್ಟೀಕರಣ ನೀಡಿ. ಗುಪ್ತಚರ ವ್ಯವಸ್ಥೆ ಇನ್ನಷ್ಟು ಬಲಪಡಿಸುವಂತೆ ನಿರ್ದೇಶಿಸಿದರು.

ಇದನ್ನೂ ಓದಿ
ಟಿವಿಯಲ್ಲಿ ವಾಯುದಾಳಿಯ ಸೈರನ್‌ ಶಬ್ದ ಬಳಸಬೇಡಿ; ಕೇಂದ್ರ ಸರ್ಕಾರ ಆದೇಶ
ಕಡಿಮೆಯಾಗುತ್ತಾ ಭಾರತ-ಪಾಕ್ ನಡುವಿನ ಉದ್ವಿಗ್ನತೆ; ಎರಡೂ ದೇಶಗಳ ನಿಲುವೇನು?
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ಮುಂದಿನ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸುತ್ತೇವೆ; ಭಾರತ ಎಚ್ಚರಿಕೆ

ಅಗ್ನಿಶಾಮಕ ದಳದ ಕೇಂದ್ರಗಳು ದಿನದ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಲ್ಲ ಜಿಲ್ಲೆಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು, ಸಹಾಯವಾಣಿ ಆರಂಭಿಸಬೇಕು. ಪೌರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ, ಅವರಿಗೆ ಸೂಕ್ತ ತರಬೇತಿಯನ್ನು ಒದಗಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಪೌರ ರಕ್ಷಣಾ ವ್ಯವಸ್ಥೆಗೆ ಸ್ವಯಂಸೇವಕರನ್ನು ನೇಮಕ ಮಾಡುವ ಕಾರ್ಯ ಆರಂಭಿಸಬೇಕು. ಆನ್​ಲೈನ್​ನಲ್ಲಿ ಹೆಸರು ನೋಂದಾಯಿಸಲು ವ್ಯವಸ್ಥೆ ಕಲ್ಪಿಸಬೇಕು. ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಎಲ್ಲ ಪ್ರಮುಖ ಸ್ಥಳಗಳಲ್ಲಿ ನಿರಂತರ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತ, ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ದೇಶದ, ರಾಜ್ಯದ ಸಹಭಾಳ್ವೆಗೆ ಧಕ್ಕೆ ತರುವ, ಕೋಮುಭಾವನೆ ಕೆರಳಿಸಿ, ಕೋಮು ವಿಭಜನೆ ತರಲು, ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುತ್ತಿರುವವ ಪಟ್ಟಿ ಸಿದ್ದಪಡಿಸಿ. ಕೋಮು ಸಾಮರಸ್ಯ ಕದಡುವ ಪ್ರಯತ್ನಗಳ ಮೇಲೆ ನಿಗಾ ಇರಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳು, ಎಸ್ಪಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ