
ಬೆಂಗಳೂರು, ಆಗಸ್ಟ್ 28: ಧರ್ಮಸ್ಥಳ ಪ್ರಕರಣ (Dharmasthala case) ದಿನಕ್ಕೊಂದು ತಿರವು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿರುವಾಗ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ (Girish Mattannavar), ಓರ್ವ ವ್ಯಕ್ತಿಯನ್ನು ಮಾನವ ಹಕ್ಕು ಅಧಿಕಾರಿ ಅಂತ ಪರಿಚಯ ಮಾಡಿಸಿದ್ದರು. ಸದ್ಯ ಈ ವಿಚಾರವಾಗಿ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ, ತನಿಖೆ ಕೈಗೊಂಡು ಸೆಪ್ಟೆಂಬರ್ 21ರೊಳಗೆ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಎಸ್‌ಪಿಗೆ ಸೂಚಿಸಲಾಗಿದೆ.
ನಕಲಿ ಮಾನವ ಹಕ್ಕುಗಳ ಆಯೋಗದ ಅಧಿಕಾರಿಯನ್ನು ಪರಿಚಯಿಸಿದ್ದ ಹಿನ್ನಲೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚನೆ ನೀಡಿದೆ. ಪ್ರಕರಣ ದಾಖಲು, ತನಿಖೆ, ಕಾನೂನು ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಠಾಣೆ ಮುಂದೆ ನೀಡಿದ್ದ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಅಂದು ಅವರ ಹಿಂದೆಯೇ ವ್ಯಕ್ತಿಯೋರ್ವ ಸೂಟ್ ಹಾಕಿಕೊಂಡು ನಿಂತಿದ್ದರು. ನೋಡಿದವರೆಲ್ಲಾ ಅವರು ಮಾನವ ಹಕ್ಕು ಆಯೋಗದ ಅಧಿಕಾರಿಯೇ ಅಂತ ಅಂದುಕೊಂಡಿದ್ದರು. ಆದರೆ ಗಿರೀಶ್ ಮಟ್ಟಣ್ಣನವರ್ ಜೊತೆ ನಿಂತ ವ್ಯಕ್ತಿ, ಅಸಲಿಗೆ ಮಾನವ ಹಕ್ಕು ಅಧಿಕಾರಿ ಅಲ್ಲ, ಬದಲಾಗಿ ಆತ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎನ್ಜಿಓವೊಂದರ ಪದಾಧಿಕಾರಿ. ಅಷ್ಟೇ ಅಲ್ಲಾ, ಆತ ಓರ್ವ ರೌಡಿಶೀಟರ್ ಕೂಡ ಹೌದು.
ಇದನ್ನೂ ಓದಿ: ಬೆಳ್ತಂಗಡಿ ಠಾಣೆಗೆ ಕೇಸ್ ವರ್ಗಾವಣೆ: ಗಿರೀಶ್ ಮಟ್ಟಣ್ಣನವರ್ಗೆ ಮತ್ತೊಂದು ಸಂಕಷ್ಟ!
ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಮದನ್ ಬುಗಡಿ ಎಂಬ ವ್ಯಕ್ತಿಯನ್ನ ಗಿರೀಶ್ ಮಟ್ಟಣ್ಣನವರ್, ಮಾನವ ಹಕ್ಕು ಅಧಿಕಾರಿ ಅಂತ ಅಂದು ಪರಿಚಯ ಮಾಡಿದ್ದರು. ಮದನ್ ಬುಗುಡಿ, ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿ ತಾಂಡಾ ನಿವಾಸಿ. ಇವರ ಮೇಲೆ ಈ ಹಿಂದೆ ಏಳು ಪ್ರಕರಣಗಳಿದ್ದವು. ಆದರೆ 2017 ರ ನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ. ಜೊತೆಗೆ ತನ್ನ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿ ಖುಲಾಸೆಗೊಳಿಸುವಲ್ಲಿ ಮದನ್ ಯಶಸ್ವಿಯಾಗಿದ್ದರು.
ಆದರೂ ಕೂಡ ಅವರನ್ನ ರೌಡಿಶೀಟರ್ ಪಟ್ಟಿಯಿಂದ ತಗೆದು ಹಾಕಿಲ್ಲ. ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯ ಓಲ್ಡ್ ಸಿಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ನಲ್ಲಿ ಕೂಡ ಮದನ್ ಬುಗುಡಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಆತನನ್ನು ಹುಬ್ಬಳ್ಳಿ-ಧಾರಾವಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿದ್ದ ಕಮಿಷನರ್ ಎನ್ ಶಶಿಕುಮಾರ್, ಮದನ್ ಬುರುಡಿ ಮೇಲೆ ಇಂದಿಗೂ ರೌಡಿಶೀಟ್ ಇದೆ. ಆತ ಯಾವುದೇ ಮಾನವ ಹಕ್ಕು ಅಧಿಕಾರಿಯಲ್ಲ. ಆತನ ಸಂಘಟನೆ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡುತ್ತೇವೆ ಎಂದಿದ್ದರು.
ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದ ಮಾನವ ಹಕ್ಕು ಅಧಿಕಾರಿ ರೌಡಿಶೀಟರ್ ಅನ್ನೋ ಸುದ್ದಿ ಎಲ್ಲಡೆ ಪ್ರಸಾರವಾಗುತ್ತಿದ್ದಂತೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮದನ್ ಬುಗುಡಿ, ತನ್ನ ಮೇಲೆ ರೌಡಿಶೀಟರ್ ಇರುವುದು ನಿಜ. ನಾನು ಎಲ್ಲಿಯೂ ಕೂಡ ತನ್ನನ್ನು ಮಾನವ ಹಕ್ಕು ಅಧಿಕಾರಿ ಅಂತ ಹೇಳಿಕೊಂಡಿಲ್ಲ. ಆದರೆ ನಮ್ಮದು ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವ ಸರ್ಕಾರೇತರ ಸಂಸ್ಥೆಯಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರಿ ವಿರೋಧಿ ಸಾಮಾಜಿಕ ನ್ಯಾಯ ಆಯೋಗ ಅಂತ ಇದ್ದು, ಅದರ ಪದಾಧಿಕಾರಿ ಇದ್ದೇನೆ ಎಂದಿದ್ದರು.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ ಶೋಧ: ಚಿನ್ನಯ್ಯಗೆ ಸಂಬಂಧಿಸಿದ್ದ ವಸ್ತುಗಳು ವಶಕ್ಕೆ
ಗಿರೀಶ್ ಮಟ್ಟಣ್ಣನವರ್ ಹೇಳಿಕೆ ಬಗ್ಗೆ ಅವರಿಂದಲೇ ಕೇಳಬೇಕು. ಅವರು ಕೂಡ ಸರ್ಕಾರಿ ಅಧಿಕಾರಿ ಅಂತ ಎಲ್ಲಿಯೂ ಹೇಳಿಲ್ಲಾ ಅಂತ ಹೇಳಿದ್ದರು. ಇನ್ನು ರೌಡಿಶೀಟರ್ ಪಟ್ಟಿಯಲ್ಲಿದ್ದೇನೆ. ಆದರೆ ಕಳೆದ ಅನೇಕ ವರ್ಷಗಳಿಂದ ಸಜ್ಜನನಾಗಿ ಬಾಳುತ್ತಿದ್ದೇನೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ವಿರುದ್ದ ಪ್ರಕರಣ ದಾಖಲಾಗುತ್ತಿದೆ ಅಂತ ನಮಗೆ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ನಾವು ಅಲ್ಲಿಗೆ ಹೋಗಿದ್ದೇವು ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Thu, 28 August 25